
ಬ್ರಹ್ಮಾವರ, ನ.5: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಶತಮಾನಗಳ ಪರಂಪರೆಯ ಭಾಗವತ ಸಂಪ್ರದಾಯದ ಪ್ರಸಿದ್ಧ ‘ಬಾಳೆಕುದ್ರು ಮಠ’ದ ಶತಮಾನಗಳ ಇತಿಹಾಸವಿರುವ ದೇವತಾ ವಿಗ್ರಹಗಳನ್ನು ಕದ್ದು ಮಾರಾಟ ಮಾಡಿದ ಭಾರಿ ಅಕ್ರಮ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಠಾಧೀಶರಾದ ಶ್ರೀ ವಾಸುದೇವ ಸದಾಶಿವಶ್ರಮ ಸ್ವಾಮೀಜಿ ಹಾಗೂ ಮಠದ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ, ಸ್ವಾಮೀಜಿ ಮಠಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ.\
ಬಾಳೆಕುದ್ರು ಮಠದಲ್ಲಿ ಅನಾದಿ ಕಾಲದಿಂದಲೂ ಪೂಜಿಸಲ್ಪಡುತ್ತಿದ್ದ ನರಸಿಂಹದೇವರು, ಗಣಪತಿ, ಹಾಗೂ ಮಹಿಷಮರ್ದಿನಿ ಸೇರಿದಂತೆ ಒಟ್ಟು ಆರು ಅತ್ಯಮೂಲ್ಯ ಪ್ರಾಚೀನ ವಿಗ್ರಹಗಳು ಹಠಾತ್ತಾಗಿ ಮಠದಿಂದ ನಾಪತ್ತೆಯಾಗಿದ್ದವು. ಈ ಬಗ್ಗೆ ಶಿಷ್ಯಂದಿರು ಮತ್ತು ಭಕ್ತರು ಸ್ವಾಮೀಜಿಯವರನ್ನು ಪ್ರಶ್ನಿಸಿದಾಗ, “ಹಳೆಯ ಮೂರ್ತಿಗಳನ್ನು ವಿಸರ್ಜನೆ ಮಾಡಿ, ನೂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ” ಎಂದು ನಂಬಿಸಿದ್ದರು. ಆದರೆ, ನಾಪತ್ತೆಯಾಗಿದ್ದ ಪ್ರಾಚೀನ ವಿಗ್ರಹಗಳ ಫೋಟೋಗಳನ್ನು ಅಂತಾರಾಷ್ಟ್ರೀಯ ಆನ್‌ಲೈನ್ ವೆಬ್‌ಸೈಟ್ ಒಂದರಲ್ಲಿ ಮಾರಾಟಕ್ಕಿಡಲಾಗಿತ್ತು. ಇದನ್ನು ಗಮನಿಸಿದ ಮಠದ ಶಿಷ್ಯ ಜಗದೀಶ್ ಐತಾಳ್ ಎಂಬುವರು ಆಘಾತಗೊಂಡು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಜಗದೀಶ್ ಐತಾಳ್ ಅವರು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ ಬೆನ್ನಲ್ಲೇ, ಸೈಬರ್ ಹಾಗೂ ಸೋಶಿಯಲ್ ಮೀಡಿಯಾ ಲಿಂಕ್‌ಗಳ ಆಧಾರದ ಮೇಲೆ ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದರು. ತನಿಖೆಯ ವೇಳೆ ಸ್ವಾಮೀಜಿ ಈ ಅತ್ಯಮೂಲ್ಯ ದೇವತಾ ಮೂರ್ತಿಗಳನ್ನು ಬೆಂಗಳೂರಿನ ಪ್ರಸಿದ್ಧ ‘Idols’ ಆಂಟಿಕ್ ಕಲಾಕೃತಿ ಕಂಪನಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಪೊಲೀಸರು ಈ ಕಂಪನಿ ಮಾಲೀಕ ನಾಗೇಂದ್ರ ಪ್ರಸಾದ್ ಎಂಬುವವರನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ, ಸ್ವಾಮೀಜಿ ಹಾಗೂ ಮಠದ ಸಿಬ್ಬಂದಿಗಳ ಶಾಮೀಲಾತಿಯ ಅಸಲಿ ಸತ್ಯ ಬಯಲಾಗಿದೆ. ಈ ಪ್ರಕರಣದಲ್ಲಿ ಅನಿಲ್ ಕುಮಾರ್, ಜಯಲಕ್ಷ್ಮಿ, ಶ್ರೇಯಸ್ ಸೇರಿದಂತೆ ಇತರರು ಭಾಗಿಗಳಾಗಿದ್ದು, ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ರೈತರಿಗೆ ದೀಪಾವಳಿ ಗಿಫ್ಟ್: ಬರ ಪರಿಹಾರ ಹೆಚ್ಚಳ, ಮೊದಲ ಕಂತಿನಲ್ಲಿ 2500 ರೂ. ರಿಲೀಸ್
ಬಾಳೆಕುದ್ರು ಮಠದಲ್ಲಿ ಕಳೆದ ಅನೇಕ ವರ್ಷಗಳಿಂದ ಸ್ವಾಮೀಜಿ ಹಾಗೂ ಶಿಷ್ಯ ಸಮುದಾಯದ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಕಳೆದ ಒಂದೆರಡು ತಿಂಗಳುಗಳಿಂದ ಈ ಸಂಘರ್ಷ ತಾರಕಕ್ಕೇರಿತ್ತು. ಶೃಂಗೇರಿ ಮಠದ ಜಗದ್ಗುರು ಶ್ರೀಗಳನ್ನು ಬಾಳೆಕುದ್ರು ಸ್ವಾಮೀಜಿ ಅವಹೇಳನ ಮಾಡಿದ್ದಾರೆ ಎಂಬ ಕಾರಣಕ್ಕೆ ಭಕ್ತರು ಹಾಗೂ ಶಿಷ್ಯಂದಿರು ಸ್ವಾಮೀಜಿ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದರು. ಇದೀಗ ಶತಮಾನದ ವಿಗ್ರಹಗಳನ್ನೇ ಮಾರಾಟ ಮಾಡಿರುವುದು ಸಾಬೀತಾಗುತ್ತಿದ್ದಂತೆ, ಬಂಧನದ ಭೀತಿಯಿಂದ ಶ್ರೀ ವಾಸುದೇವ ಸದಾಶಿವಶ್ರಮ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಸ್ವಾಮೀಜಿಯವರ ಪತ್ತೆಗೆ ಬಲೆ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Thu, 5 November 26