AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಡಿಸಿ, ಉಸ್ತುವಾರಿ ಸಚಿವರಿಂದಲೇ ಜಿಲ್ಲಾಡಳಿತದ ಸೂಚನೆ ಉಲ್ಲಂಘನೆ? ಆಗಿದ್ದೇನು?

ಕೋಡಿಬೆಂಗ್ರೆ ಬೋಟ್​​ ದುರಂತ ಪ್ರಕರಣದ ಬಳಿಕ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶಿಸಿದ್ದಾರೆ. ಆದರೆ ದುರ್ಘಟನೆ ನಡೆದ ದಿನವೇ ಡಿಸಿ, ಉಸ್ತುವಾರಿ ಸಚಿವರು ಸೇರಿ ಅಧಿಕಾರಿಗಳು ಲೈಫ್​​ ಜಾಕೆಟ್​​ ಧರಿಸದೆ ಬೋಟ್​​ನಲ್ಲಿ ಪ್ರಯಾಣಿಸಿರುವ ವಿಡಿಯೋ ವೈರಲ್​​ ಆಗಿದೆ. ದುರಂತದ ಬಳಿಕ ಲೈಫ್​​ ಜಾಕೆಟ್​​ ಕಡ್ಡಾಯಗೊಳಿಸಿ ಡಿಸಿ ಆದೇಶಿಸಿದ್ದರೂ ಈ ಬಗ್ಗೆ ಹಿಂದಿನಿಂದಲೂ ಜಿಲ್ಲಾಡಳಿತದ ಸೂಚನೆ ಇದೆ. ಅಧಿಕಾರಿಗಳೇ ಹೀಗೆ ನಡೆದುಕೊಂಡರೆ ಹೇಗೆ ಎಂಬ ಪ್ರಶ್ನೆ ಕೇಳಿಬಂದಿದೆ.

ಉಡುಪಿ ಡಿಸಿ, ಉಸ್ತುವಾರಿ ಸಚಿವರಿಂದಲೇ ಜಿಲ್ಲಾಡಳಿತದ ಸೂಚನೆ ಉಲ್ಲಂಘನೆ? ಆಗಿದ್ದೇನು?
ಲೈಫ್​​ ಜಾಕೆಟ್​​ ಧರಿಸದೆ ಪ್ರಯಾಣ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Jan 28, 2026 | 11:23 AM

Share

ಉಡುಪಿ, ಜನವರಿ 28: ಜಿಲ್ಲಾಡಳಿತದ ಸೂಚನೆಯನ್ನು ಸ್ವತಃ ಉಡುಪಿ ಡಿಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೇ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ಕೋಡಿಬೆಂಗ್ರೆ ಬೋಟ್​​ ದುರಂತ ಪ್ರಕರಣದ ಬಳಿಕ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶಿಸಿದ್ದಾರೆ. ಆದರೆ ದುರ್ಘಟನೆ ನಡೆದ ಗಣರಾಜ್ಯೋತ್ಸವದ ದಿನವೇ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಲು ಬೋಟ್​​ನಲ್ಲಿ ತೆರಳಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿಸಿ ಸೇರಿ ಇತರ ಅಧಿಕಾರಿಗಳು ಲೈಫ್ ಜಾಕೆಟ್ ಧರಿಸದಿರುವ ವಿಡಿಯೋವೀಗ ವೈರಲ್​​ ಆಗಿದೆ.

ವೈರಲ್​​ ಆದ ವಿಡಿಯೋದಲ್ಲೇನಿದೆ?

ದುರ್ಘಟನೆ ಬಳಿಕ ಲೈಫ್​​ ಜಾಕೆಟ್​​ ಕಡ್ಡಾಯಗೊಳಿಸಿ ಡಿಸಿ ಆದೇಶಿಸಿದ್ದರೂ ಈ ಬಗ್ಗೆ ಹಿಂದಿನಿಂದಲೂ ಜಿಲ್ಲಾಡಳಿತದ ಸೂಚನೆ ಇದೆ. ಆದರೆ ಅದನ್ನು ಉಲ್ಲಂಘಿಸಿ ಜಾಕೆಟ್ ಧರಿಸದೆ ಬೋಟ್​​ನಲ್ಲಿ ನಿಂತು ಸಚಿವರು, ಅಧಿಕಾರಿಗಳು ಕೈಬೀಸಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಜನರಿಗೆ ಹೇಳಬೇಕಿರುವ ಇವರೇ ಹೀಗೆ ನಡೆದುಕೊಂಡರೆ ಹೇಗೆ ಎಂಬ ಮಾತುಗಳೀಗ ಕೇಳಿ ಬಂದಿವೆ.

ಇದನ್ನೂ ಓದಿ: ಉಡುಪಿಯಲ್ಲಿ ಪ್ರವಾಸಿ ಬೋಟ್ ದುರಂತ ಸಂಬಂಧ ಮತ್ತೋರ್ವ ಯುವತಿ ಸಾವು; ಮೃತರ ಸಂಖ್ಯೆ ಮೂರಕ್ಕೇರಿಕೆ

ಉಡುಪಿಯ ಕೋಡಿಬೆಂಗ್ರೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಮಗುಚಿ ಬಿದ್ದ ಪರಿಣಾಮ ಒಟ್ಟು ಮೂವರು ಮೃತಪಟ್ಟಿದ್ದರು. ಮೈಸೂರಿನ ಸರಸ್ವತಿಪುರಂನಿಂದ ಪ್ರವಾಸಕ್ಕೆ ಆಗಮಿಸಿದ್ದ ಬಿಪಿಒ ಕಾಲ್ ಸೆಂಟರ್ ಉದ್ಯೋಗಿಗಳ 28 ಮಂದಿಯ ತಂಡವು ಎರಡು ಪ್ರವಾಸಿ ಬೋಟ್‌ಗಳಲ್ಲಿ ವಿಹಾರಕ್ಕೆ ತೆರಳಿತ್ತು. ಒಂದೊಂದು ಬೋಟ್‌ನಲ್ಲಿ 14 ಮಂದಿ ಇದ್ದು, ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ಸಮುದ್ರದ ಭಾರೀ ಅಲೆಗಳಿಗೆ ಸಿಲುಕಿದ ಒಂದು ಬೋಟ್ ಅಚಾನಕ್ಕಾಗಿ ಮಗುಚಿ ಬಿದ್ದ ಪರಿಣಾಮ ಅವಘಡ ನಡೆದಿತ್ತು. ಆ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದ ಉಡುಪಿ ಡಿಸಿ, ಪ್ರವಾಸಿ ಬೊಟುಗಳಲ್ಲಿ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ. ಲೈಫ್ ಜಾಕೆಟ್ ಬಳಕೆ ಬಗ್ಗೆ ಕರಪತ್ರ ಪ್ರಕಟಿಸಬೇಕು ಎಂದು ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.