ಉಡುಪಿ: ನಾಲ್ವರ ಕೊಲೆ ಕೇಸ್, ಸ್ಥಳ ಮಹಜರು ವೇಳೆ ಉದ್ರಿಕ್ತರ ಗುಂಪು ಚದುರಿಸಲು ಲಾಠಿಚಾರ್ಜ್
Udupi: ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆಯನ್ನು ಉಡುಪಿಯ ನೇಜಾರು ತೃಪ್ತಿ ನಗರದಲ್ಲಿ ಪೊಲೀಸರಿಂದ ಮಹಜರಕ್ಕೆ ಕರೆತಂದಿದ್ದ ವೇಳೆ ಸ್ಥಳೀಯ ನಿವಾಸಿಗಳು ಉದ್ರಿಕ್ತರಾಗಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಅವರನ್ನು ಚದುರಿಸಿದ್ದಾರೆ.

ಉಡುಪಿ, ನವೆಂಬರ್ 16: ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆಯನ್ನು ಉಡುಪಿ (Udupi) ಯ ನೇಜಾರು ತೃಪ್ತಿ ನಗರದಲ್ಲಿ ಪೊಲೀಸರಿಂದ ಮಹಜರಕ್ಕೆ ಕರೆತಂದಿದ್ದಾರೆ. ಈ ವೇಳೆ ನಮಗೆ ಆರೋಪಿಯನ್ನು ಒಪ್ಪಿಸಿ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಪ್ರವೀಣ್ ಇದ್ದ ಪೊಲೀಸ್ ವಾಹನವನ್ನು ಸ್ಥಳೀಯರು ಸುತ್ತುವರೆದಿದ್ದರು. ಈ ವೇಳೆ ಉದ್ರಿಕ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಚದುರಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಮತ್ತು ಡಿಸಿ ಬರಬೇಕು ಎಂದು ಆಗ್ರಹಿಸಿ, ರಸ್ತೆ ತಡೆದು ಸಾರ್ವಜನಿಕರು ಪ್ರತಿಭಟನೆ ಮಾಡಿದ್ದಾರೆ. ಹಾಗಾಗಿ ಉಡುಪಿಯ ತೃಪ್ತಿನಗರದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜನಾಕ್ರೋಶದ ನಡುವೆ ಪೊಲೀಸರು ಮಹಜರು ಮುಗಿಸಿ ತೆರಳಿದ್ದಾರೆ.
ಇದನ್ನೂ ಓದಿ: ಆರೋಪಿ ಪ್ರವೀಣ್ ಚೌಗುಲೆ ಮತ್ತು ಕೊಲೆಯಾದ ಐನಾಜ್ ಏರ್ ಇಂಡಿಯಾವೊಂದರಲ್ಲಿ ಕರ್ತವ್ಯನಿರತರಾಗಿದ್ದ ವಿಡಿಯೋ ವೈರಲ್
ಸೂಕ್ತ ತನಿಖೆ ನಡೆಸಿ ಶಿಕ್ಷೆ ಕೊಡಿಸುವುದಾಗಿ ಪೊಲೀಸರಿಂದ ಭರವಸೆ ನೀಡಿದ ಬಳಿಕ ಸ್ಥಳೀಯ ನಿವಾಸಿಗಳ ಪ್ರತಿಭಟನೆ ಅಂತ್ಯವಾಗಿದೆ.
ಇದನ್ನೂ ಓದಿ: ಉಡುಪಿಯಲ್ಲಿ ನಾಲ್ವರ ಭೀಕರ ಕೊಲೆ; ಹಂತಕನ ಜಾಡು ಹಿಡಿದಿದ್ದು ಹೇಗೆ ಗೊತ್ತಾ?
ಆರೋಪಿ ಮಹಾರಾಷ್ಟ್ರ ಸಾಂಗಲಿ ಮೂಲದ ಪ್ರವೀಣ್ ಅರುಣ್ ಚೌಗಲೆ ಮಂಗಳೂರು ಏರ್ಪೋರ್ಟ್ ಕೆಲಸ ಮಾಡುತ್ತಿದ್ದ. ಈತ ಹತ್ಯೆ ಮಾಡಿ ಕುಡಚಿಯ ಸಂಬಂಧಿ ಮನೆಯಲ್ಲಿ ಅಡಗಿ ಕುಳಿತಿದ್ದ. ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಪ್ರವೀಣ ಅಡಗಿಕೊಂಡಿದ್ದ ಸಂಬಂಧಿಕರ ಮನೆಯವರನ್ನು ಮಾತನಾಡಿಸಲು ಯತ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಜ್ಞಾತ ಸ್ಥಳದಲ್ಲಿ ಆರೋಪಿ ಪ್ರವೀಣ್ ಚೌಗಲೆ ವಿಚಾರಣೆ
ನಿನ್ನೆಯೇ ಹಂತಕ ಪ್ರವೀಣ್ ಚೌಗಲೆಯನ್ನ ಬಂಧಿಸಿದ್ದ ಪೊಲೀಸರು, ಇವತ್ತು ಬೆಳಗ್ಗೆ 4 ಗಂಟೆಗೆ ಉಡುಪಿಗೆ ಕರೆತಂದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಆರೋಪಿ ಪ್ರವೀಣ್ನನ್ನ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯಾಹ್ನದ ಬಳಿಕ ಹಂತಕನನ್ನ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಘಟನೆ ವಿವರ
ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಂದ ಧಾರುಣ ಘಟನೆ ನಡೆದಿತ್ತು. ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ, ಓರ್ವ ಮಹಿಳೆ ಹಸೀನಾ ಹಾಗೂ ಆಕೆಯ 11ವರ್ಷದ ಬಾಲಕ ಅಫ್ನಾನ್, ಇಬ್ಬರು ಹೆಣ್ಣು ಮಕ್ಕಳಾದ ಅಯ್ನಾಝ್ ಮತ್ತು ಹಾಸೀಂ ಎಂಬುವವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Thu, 16 November 23