ಪ್ರವಾಸಿಗರ ಗಮನಕ್ಕೆ: 4 ತಿಂಗಳು ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪ ಬಂದ್
ಮಲ್ಪೆ ಬೀಚ್‌ನಲ್ಲಿ ನೀರಿನ ಕ್ರೀಡೆಗಳು ಮತ್ತು ಸೇಂಟ್ ಮೇರಿ ದ್ವೀಪಕ್ಕೆ ಮೇ 15 ರಿಂದ ಸೆಪ್ಟೆಂಬರ್ 15 ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮಳೆಗಾಲದಲ್ಲಿ ಅಲೆಗಳ ಅಬ್ಬರ ಹಿನ್ನೆಲೆ ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮಕೈಗೊಂಡಿದೆ. ಇದರಿಂದ ಸಾಕಷ್ಟು ಪ್ರವಾಸಿಗರು ನಿರಾಶರಾಗಿದ್ದಾರೆ.

ಉಡುಪಿ, ಮೇ 19: ಬೇಸಿಗೆ ಆರಂಭವಾದರೆ ಪ್ರವಾಸಿಗರ (Tourist) ದಂಡು ಉಡುಪಿಯ ಕಡೆಗೆ ಮುಖ ಮಾಡುತ್ತೆ. ಉಡುಪಿಗೆ ಬಂದರೆ ಮಲ್ಪೆ ಬೀಚ್ (Malpe Beach), ಸೈಂಟ್ ಮೇರಿಸ್, ಕೊಲ್ಲೂರು, ಕೃಷ್ಣಮಠ ಹೋಗುವ ಪ್ಲ್ಯಾನ್ ಜೊತೆಗೆ ಬರುತ್ತಾರೆ. ಆದರೆ ಸದ್ಯ ಬರುವ ಪ್ರವಾಸಿಗರಿಗೆ ನಿರಾಶೆ ಕಾದಿದೆ. ಅದರಲ್ಲೂ ಸಮುದ್ರದಲ್ಲಿ ವಾಟರ್ ಸ್ಪೋರ್ಟ್ಸ್ನಲ್ಲಿ ಎಂಜಾಯ್ ಮಾಡಬೇಕು, ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗಬೇಕು ಯೋಚನೆ ಇದ್ದರೆ ಇನ್ನೂ ನಾಲ್ಕು ತಿಂಗಳು ಕಾಯಬೇಕಾದ ಅನಿವಾರ್ಯತೆ ಉಂಟಾಗಿದೆ.
ಅವಧಿಗೂ ಮುನ್ನ ಮುಂಗಾರು ಮಳೆ ಶುರುವಾಗುವ ಮುನ್ಸೂಚನೆ ಇರುವುದರಿಂದ ಮತ್ತು ಮುಂಗಾರುಪೂರ್ವ ಮಳೆ ಹೆಚ್ಚಾಗಿರುವ ಕಾರಣ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವೇಶ 4 ತಿಂಗಳ ಕಾಲ ನಿರ್ಬಂಧಿಸಲಾಗಿದೆ. ಹಾಗಾಗಿ ಇದೀಗ ಪ್ರವಾಸಿಗರಿಗೆ ನಿರಾಶೆ ಮೂಡಿದೆ. ಜತೆಗೆ ಎಲ್ಲ ಜಲಸಾಹಸ ಕ್ರೀಡೆಗಳನ್ನು ಮಳೆಗಾಲ ಮುಗಿಯುವವರೆಗೂ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಮಳೆಗಾಲದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಕಾರಣ ದ್ವೀಪಕ್ಕೆ ತೆರಳುವುದು ಅಪಾಯಕಾರಿ. ಈ ಕಾರಣಕ್ಕಾಗಿ ಪ್ರತಿ ವರ್ಷ ಮೇ 15 ರಿಂದ ಸೆಪ್ಟೆಂಬರ್ 15ರ ವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸುತ್ತದೆ. ಮಳೆಗಾಲದಲ್ಲಿ ಪಶ್ಚಿಮ ಕರಾವಳಿಯಲ್ಲಿ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ. ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಪ್ರತಿ ವರ್ಷ ಸ್ಥಗಿತಗೊಳಿಸಲಾಗುತ್ತದೆ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಈಗ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಈ ಸುಂದರ ದ್ವೀಪಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಟ್ ಹಾಗೂ ಜಲಸಾಹಸ ಕ್ರೀಡೆಗೆ ಕೆಲವು ದಿನಗಳ ಮಟ್ಟಿಗೆ ಅವಕಾಶ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಇನ್ನು ನಿಯಮಗಳ ಪ್ರಕಾರ ಮೇ 16ರಿಂದ 4 ತಿಂಗಳು ನಿಷೇಧವಿರಲಿದೆ. ಬಳಿಕ ಬೀಚ್‌ನ ಉದ್ದಕ್ಕೂ ತಡೆಬೇಲಿ ಹಾಕಲಾಗುತ್ತದೆ. ಹಾಗಾಗಿ ದೂರದೂರುಗಳ ಪ್ರವಾಸಿಗರು ಉಡುಪಿಗೆ ಆಗಮಿಸಿದರೆ ನಿರಾಶೆ ಗ್ಯಾರಂಟಿ. ಸಮುದ್ರ ತೀರದಲ್ಲಿ ವಾತಾವರಣದ ಅನುಕೂಲ ಆಧರಿಸಿ ಜೂನ್ 1ರ ವರೆಗೆ ನೀರಿಗಿಳಿಯಬಹುದು.
ಇದನ್ನೂ ಓದಿ: Bangalore Rains: ಬೆಂಗಳೂರು ಮಳೆ ಸೃಷ್ಟಿಸಿದ ಅಧ್ವಾನ ಒಂದೆರಡಲ್ಲ; ಎಲ್ಲೆಲ್ಲಿ ಏನೇನಾಯ್ತು ನೋಡಿ!
ಮಳೆಗಾಲ ಆರಂಭವಾಗುತ್ತಿದಂತೆ ಸಮುದ್ರ ರಫ್ ಆಗುವ ಕಾರಣ ನಿರ್ಬಂಧ ವಿಧಿಸಲಾಗುತ್ತದೆ. ಪ್ರವಾಸಿಗರ ಹಿತದೃಷ್ಟಿಯಿಂದ ಈ ನಿರ್ಬಂಧ ಅನಿವಾರ್ಯವಾದರೂ ಪ್ರವಾಸಿಗರಿಗೂ ನಿರಾಸೆ ಆಗುವುದು ಮಾತ್ರ ಸತ್ಯ. ಹಾಗಾಗಿ ಮಳೆಗಾಲದ ನಂತರವೇ ಉಡುಪಿಗೆ ಪ್ರವಾಸ ಪ್ಲ್ಯಾನ್ ಮಾಡುವುದು ಉತ್ತಮ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:54 pm, Mon, 19 May 25