ಕೇಂದ್ರದ ಬಜೆಟ್​ನಲ್ಲಿ ರಾಜ್ಯಕ್ಕೆ ಈ ಬಾರಿ ಏನೆಲ್ಲಾ ಸಿಗಬಹುದು? ಉದ್ದವಿದೆ ನಿರೀಕ್ಷೆಗಳ ಪಟ್ಟಿ!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದು, ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಈ ಬಜೆಟ್ ಪಂಚರಾಜ್ಯಗಳ ಚುನಾವಣಾ ತಂತ್ರಗಾರಿಗೆ ಸೀಮಿತಗಲಿದೆಯಾ ಅಥವಾ ದಕ್ಷಿಣದ ಆರ್ಥಿಕ ಶಕ್ತಿ ಕರ್ನಾಟಕದ ಪಾಲಿಗೆ ಉತ್ತಮ ಕೊಡುಗೆ ಸಿಗಲಿದೆಯಾ ಎಂಬ ಕುತೂಹಲ ಮೂಡಿಸಿದೆ. ಮೂಲಸೌಕರ್ಯದ ಬಗ್ಗೆ ರಾಜ್ಯ ಸರ್ಕಾರ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಕೇಂದ್ರದ ಬಜೆಟ್​ನಿಂದ ರಾಜ್ಯಕ್ಕೆ ಈ ಬಾರಿ ಏನೆಲ್ಲಾ ಸಿಗಬಹುದು?

ಕೇಂದ್ರದ ಬಜೆಟ್​ನಲ್ಲಿ ರಾಜ್ಯಕ್ಕೆ ಈ ಬಾರಿ ಏನೆಲ್ಲಾ ಸಿಗಬಹುದು? ಉದ್ದವಿದೆ ನಿರೀಕ್ಷೆಗಳ ಪಟ್ಟಿ!
ಸಾಂದರ್ಭಿಕ ಚಿತ್ರ
Edited By:

Updated on: Jan 30, 2026 | 7:16 AM

ಬೆಂಗಳೂರು, ಜನವರಿ 30: ಒಂದು ಕಡೆ ಪಂಚರಾಜ್ಯಗಳ ಚುನಾವಣಾ ಅಬ್ಬರ, ಇನ್ನೊಂದೆಡೆ ಭರಪೂರ ನಿರೀಕ್ಷೆಯಲ್ಲಿರುವ ಕರ್ನಾಟಕ. ಹೀಗಿರುವಾಗ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ (Union Budget) ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ದೇಶದಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕವೂ ಕೂಡ ಒಂದಾಗಿದ್ದು, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಅಸಮಾನತೆ ಸರಿಪಡಿಸುವುದು ಮತ್ತು ನನೆಗುದಿಗೆ ಬಿದ್ದಿರುವ ಬೃಹತ್ ಯೋಜನೆಗಳಿಗೆ ಮರುಜೀವ ನೀಡುವುದು ಕೇಂದ್ರಕ್ಕೆ ಈಗ ದೊಡ್ಡ ಸವಾಲಾಗಿದೆ.

ಕೇಂದ್ರ ಬಜೆಟ್​: ಕರ್ನಾಟಕದ ಬೇಡಿಕಗಳೇನು?

  • ನೀರಾವರಿ: ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ, ಮಹದಾಯಿ ಯೋಜನೆಗೆ ‘ರಾಷ್ಟ್ರೀಯ ಯೋಜನೆ’ ಮಾನ್ಯತೆ ನಿರೀಕ್ಷೆ.
  • ಭದ್ರಾ ಮೇಲ್ದಂಡೆ: 2023ರಲ್ಲಿ ಘೋಷಣೆಯಾಗಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆಗೆ ಆಗ್ರಹ.
  • ಬೆಂಗಳೂರು ಮೆಟ್ರೋ: ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ ಕೇಂದ್ರದ ಆರ್ಥಿಕ ನೆರವು. ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನ.
  • ಹೈಸ್ಪೀಡ್ ರೈಲು: ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಯೋಜನೆಗೆ ಗ್ರೀನ್ ಸಿಗ್ನಲ್.
  • ಹಾಸನ ಐಐಟಿ, ಶಿರಾಡಿ ಸುಂರಂಗ, ರಾಯಚೂರು ಏಮ್ಸ್, ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಮರುಜೀವ ನಿರೀಕ್ಷೆ.
  • ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ನಿರೀಕ್ಷೆ, ಮೈಸೂರು- ಕುಶಾಲನಗರ ಹೊಸ ರೈಲು ಯೋಜನೆ.

ಅನುದಾನ ಕೊರತೆಯಿಂದ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ ಬಾಕಿ ಉಳಿದಿವೆ. ರಾಜ್ಯದ ಕೆಲವು ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ ಶೇ 90ರಷ್ಟು ಅನುದಾನ ಕೇಂದ್ರದಿಂದಲೇ ಸಿಗಲಿದೆ. ಇದು ಬರಪೀಡಿತ 23 ಜಿಲ್ಲೆಗಳ 150ಕ್ಕೂ ಹೆಚ್ಚು ತಾಲೂಕುಗಳಿಗೆ ವರದಾನವಾಗಲಿದೆ.

2023ರಲ್ಲಿ ಚುನಾವಣೆ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸ್ವತಃ ಕೇಂದ್ರ ಸರಕಾರವೇ ಘೋಷಣೆ ಮಾಡಿದ್ದ 5,300 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಹಣಬಿಡುಗಡೆ ಮಾಡುವಂತೆ ರಾಜ್ಯ ಸಾಕಷ್ಟು ಬಾರಿ ಮನವಿ ಮಾಡಿದೆ. ಘೋಷಣೆ ಮಾಡಿದ್ದ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಈ ಬಜೆಟ್ ನಲ್ಲಿ ಉತ್ತರ ಸಿಗಬಹುದಾ ಎಂಬ ನಿರೀಕ್ಷೆ ರಾಜ್ಯದ ಜನರಿಗಿದೆ. ಇನ್ನು ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಅಧಿಕೃತ ಮುದ್ರೆ ಒತ್ತಬೇಕಿದೆ.

ರೈಲ್ವೆ ಮತ್ತು ಕರಾವಳಿ ಅಭಿವೃದ್ಧಿಗೆ ಬೂಸ್ಟ್?

ರಾಜ್ಯದ ರೈಲ್ವೆ ಯೋಜನೆಗಳಿಗೆ ಈ ಬಾರಿ ಹೆಚ್ಚಿನ ಬಲ ಸಿಗುವ ಸಾಧ್ಯತೆಯಿದೆ. ಧಾರವಾಡ-ಕಿತ್ತೂರು-ಬೆಳಗಾವಿ, ಗಿಣಿಗೇರಾ-ರಾಯಚೂರು ಮಾರ್ಗಗಳ ಜೊತೆಗೆ ಕಲಬುರಗಿ ರೈಲ್ವೆ ವಿಭಾಗದ ಕನಸು ನನಸಾಗಬೇಕಿದೆ. ಇನ್ನು 360 ಕಿಲೋ ಮೀಟರ್ ಉದ್ದದ ಕಡಲ ತೀರ ಹೊಂದಿದ್ದರೂ ಅಭಿವೃದ್ಧಿ ಕಾಣದ ಕರ್ನಾಟಕದ ಬಂದರುಗಳಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್ ಸಿಗುವ ನಿರೀಕ್ಷೆಯಿದೆ. ಜೊತೆಗೆ ಕೈಗಾರಿಕೆಗಳಿಗೆ ಪೂರಕವಾಗಿ ಉಕ್ಕಿನ ಪೂರೈಕೆಗೆ ರಿಯಾಯಿತಿ ಸಿಗಬಹುದು ಎನ್ನಲಾಗುತ್ತಿದೆ.

ಅತಿವೃಷ್ಟಿ,ಬರ ಮತ್ತು ಆರ್ಥಿಕ ಸವಾಲುಗಳು

ರಾಜ್ಯದಲ್ಲಿ ಸಾಲದ ಹೊರೆ ಹೆಚ್ಚುತ್ತಿದೆ, ನಿರಂತರ ಅತಿವೃಷ್ಟಿ ಮತ್ತು ಪ್ರವಾಹದಿಂದ ಆರ್ಥಿಕತೆ ನಲುಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ನಿಧಿ ಹಂಚಿಕೆಯಾಗಬೇಕಿದೆ. ಗುಜರಾತ್, ಯುಪಿ ಮಾದರಿಯಲ್ಲಿ ಕರ್ನಾಟಕಕ್ಕೂ ಬೃಹತ್ ತಾಂತ್ರಿಕ ಯೋಜನೆಗಳನ್ನು ನೀಡುವ ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂಬುದು ಉದ್ಯಮ ಕ್ಷೇತ್ರದ ಒತ್ತಾಯವಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2026: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ಒಟ್ಟಿನಲ್ಲಿ 2026ರ ಬಜೆಟ್ ಕರ್ನಾಟಕದ ಪಾಲಿಗೆ ಕೇವಲ ಭರವಸೆಯ ಮೂಟೆಯಾಗುತ್ತಾ ಅಥವಾ ನಿಜವಾಗಿಯೂ ಅಭಿವೃದ್ಧಿಯ ಹಾದಿ ತೆರೆಯುತ್ತಾ ಎಂಬುದು ಭಾನುವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ