ರಾಜ್ಯದ ಗೋಹತ್ಯೆ ನಿಷೇಧ ಕಾಯ್ದೆ, ಮರಾಠ ನಿಗಮ ಸ್ಥಾಪನೆ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಮದಾಸ್ ಅಠಾವಳೆ
ರಾಜ್ಯದ ಗೋಹತ್ಯಾ ನಿಷೇಧ ಕಾಯ್ದೆ, ಮರಾಠ ನಿಗಮ ಸ್ಥಾಪನೆ, ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ರಾಮದಾಸ್ ಅಠಾವಳೆ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು: ಒಂದೆಡೆ ರಾಜ್ಯ ಮತ್ತು ರಾಷ್ಟ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳ ವಿರುದ್ಧ ಜನಾಕ್ರೋಶ, ಆಕ್ಷೇಪಗಳು ಹರಿದುಬರುತ್ತಿದ್ದರೆ ಮತ್ತೊಂದೆಡೆ ಆಡಳಿತ ಪಕ್ಷದ ಸದಸ್ಯರು ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಂಡು ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖ್ಯಸ್ಥ ರಾಮದಾಸ್ ಅಠಾವಳೆ ಕೂಡ ಇದೇ ಹಾದಿ ತುಳಿದಿದ್ದಾರೆ.
ರಾಜ್ಯದ ಗೋಹತ್ಯಾ ನಿಷೇಧ ಕಾಯ್ದೆ, ಮರಾಠ ನಿಗಮ ಸ್ಥಾಪನೆ, ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ರಾಮದಾಸ್ ಅಠಾವಳೆ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಇಂದು (ಭಾನುವಾರ) ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ಹಿಂದೂ ಧರ್ಮದಲ್ಲಿ ಗೋವುಗಳನ್ನು ಪೂಜಿಸಲಾಗುತ್ತದೆ. ಗೋವುಗಳನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಆದ್ದರಿಂದ, ಗೋ ಹತ್ಯೆ ನಡೆಯಬಾರದು. ಗೋವುಗಳನ್ನು ಉಳಿಸಲು ಗೋ ಶಾಲೆ ತೆರೆಯಬೇಕು ಎಂದು ಅಠಾವಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಮರಾಠ ನಿಗಮ ಸ್ಥಾಪನೆ ವಿಚಾರವಾಗಿಯೂ ಅಠಾವಳೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಸಾಕಷ್ಟು ಮರಾಠಿಗರಿದ್ದಾರೆ. ಅವರಿಗಾಗಿ ನಿಗಮ ಸ್ಥಾಪಿಸಿದ್ದು ಸರಿಯಾದ ತೀರ್ಮಾನ ಎಂದು ಸಿಎಂಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರದ ನೂತನ ಕೃಷಿ ಕಾಯ್ದೆಗಳ ಬಗ್ಗೆ ಮಾತನಾಡಿ, ಭೂ ಸುಧಾರಣಾ ತಿದ್ದುಪಡಿ ಬಿಲ್‌ನಿಂದ ತೊಂದರೆ ಆಗುವುದಿಲ್ಲ. ಕೃಷಿ ತಿದ್ದುಪಡಿ ಕಾಯ್ದೆಗಳು ರೈತರಿಗೆ ಮಾರಕವಾಗಿಲ್ಲ ಎಂದು ತಿಳಿಸಿದ್ದಾರೆ. ಯಾವುದೇ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರೆ ಆ ಸಮಸ್ಯೆ ಬಗೆಹರಿಯುವುದಿಲ್ಲ. ರೈತರ ಜತೆ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ನಾವು ಈ ಕಾಯ್ದೆಗೆ ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ ಆದರೆ, ಕಾಯ್ದೆಗಳನ್ನು ವಾಪಸ್ ಪಡೆಯುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ. ಕಾಯ್ದೆಯಿಂದ ಪಂಜಾಬ್ ರೈತರಿಗಷ್ಟೇ ಸಮಸ್ಯೆ ಆಗುತ್ತಿದೆ. ನಾವು ರೈತರ ಜತೆ ಮತ್ತೊಂದು ಸುತ್ತು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ರೈತರ ಸಮಸ್ಯೆ ಬಗೆಹರಿಸಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ. ರೈತರ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಲೂ ತಯಾರಿದೆ. ಆದರೆ, ಪ್ರತಿಭಟನೆಯು ರಾಜಕೀಯ ತಿರುವು ಪಡೆದಿದೆ ಎಂದು ಅಠಾವಳೆ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಸರ್ಕಾರ ಕೊನೆಗೊಳ್ಳಲಿದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿಗಳಿಸಲಿದೆ. ಮಮತಾ ದೀದಿ ಬಂಗಾಳವನ್ನು ಕಂಗಾಲ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ಬಂಗಾಳವನ್ನು ಬಂಗಾರ ರಾಜ್ಯವನ್ನಾಗಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ರಾಮದಾಸ್ ಅಠಾವಳೆ ವಾಗ್ದಾಳಿ ನಡೆಸಿದ್ದಾರೆ.
ಕಂಗನಾ BJP ಸೇರಿದರೆ ತುಂಬು ಹೃದಯದಿಂದ ಸ್ವಾಗತಿಸ್ತೇವೆ -ಕೇಂದ್ರ ಸಚಿವ ಅಠಾವಳೆ
Published On - 4:34 pm, Sun, 20 December 20