ಶಿರೂರು ಬಳಿ ಗುಡ್ಡ ಕುಸಿತ: ಮಣ್ಣಿನಡಿ ಬೆಂಜ್ ಕಾರಿನ ಲೊಕೇಶನ್ ಪತ್ತೆ, ಮತ್ತಷ್ಟು ಹೆಚ್ಚಿಸಿದ ಆತಂಕ
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ವರುಣ ಅಬ್ಬರಿಸುತಿದ್ದಾನೆ. ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದೆ. ಮಣ್ಣಿನಡಿಯಲ್ಲಿ ಬೆಂಜ್ ಕಾರ್ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ತಜ್ಞರು ಲೊಕೇಶನ್ ಪತ್ತೆ ಹಚ್ಚಿದ್ದಾರೆ. ಘಟನೆಯಲ್ಲಿ ಚಾಲಕ ಸಮೇತ ಲಾರಿ ಕೂಡ ನಾಪತ್ತೆ ಆಗಿದೆ.
ಉತ್ತರ ಕನ್ನಡ, ಜುಲೈ 17: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ (Hill collapse) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಣ್ಣಿನಡಿಯಲ್ಲಿ ಸಿಲುಕಿರುವ ಬೆಂಜ್ ಕಾರಿನ (Benz car) ಲೊಕೇಶನ್ ಅನ್ನು ತಜ್ಞರು ಪತ್ತೆ ಹಚ್ಚಿದ್ದಾರೆ. ತಜ್ಞರ ಮಾಹಿತಿಯಂತೆ ಬೆಂಜ್ ಕಾರಿನ ಲೊಕೇಶನ್ ಪತ್ತೆ ಆಗಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಆ ಮೂಲಕ ಮಣ್ಣಿನಡಿಯಲ್ಲಿ ಬೆಂಜ್ ಕಾರ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ಕೇವಲ ಶೇ.30ರಷ್ಟು ಮಣ್ಣು ತೆರವುಗೊಳಿಸಲಾಗಿದೆ. ಇನ್ನೂ ಶೇಕಡಾ 70ರಷ್ಟು ಮಣ್ಣು ತೆರವು ಕಾರ್ಯ ಮಾಡಬೇಕಿದೆ.
ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾದ ಗಂಗಾವಳಿ ನದಿಯಲ್ಲಿನ ಗ್ಯಾಸ್ ಟ್ಯಾಂಕರ್
ಒಂದು ಕಡೆ ಮಣ್ಣು ತೆರವು ಕಾರ್ಯಾಚರಣೆಗೆ ಗುಡ್ಡ ಕುಸಿತದ ಆತಂಕ ಎದುರಾಗಿದ್ದು, ಇನ್ನೊಂದು ಕಡೆ ಗಂಗಾವಳಿ ನದಿಯಲ್ಲಿ ಬಿದ್ದಿರುವ ಗ್ಯಾಸ್ ಟ್ಯಾಂಕರ್ ಆತಂಕ ಸೃಷ್ಟಿಸಿದೆ. ಗ್ಯಾಸ ಟ್ಯಾಂಕರ್ ಸದ್ಯಕ್ಕೆ ಗ್ಯಾಸ್ ರಿಲಿಸ್ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ ಟ್ಯಾಂಕರ ಮುಂದೆ ಕೊಚ್ಚಿ ಹೋಗಿ ಬಂಡೆಗೆ ಅಪ್ಪಳಿಸುವ ಆತಂಕ ಎದುರಾಗಿದೆ.
ಇದನ್ನೂ ಓದಿ: ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ: 6 ಜನರ ಮೃತದೇಹಗಳು ಪತ್ತೆ, ಉಳಿದವರಿಗಾಗಿ ಮುಂದುವರಿದ ಶೋಧ
ನಿನ್ನೆ ನದಿಯ ರಭಸಕ್ಕೆ ಟ್ಯಾಂಕರ್ ಶಿರೂರದಿಂದ ಸಗಡಗೆರೆ ಗ್ರಾಮದ ಬಳಿ ಸುಮಾರು 6 ಕಿ.ಮೀ ಹರಿದು ಬಂದಿದೆ. ಸದ್ಯಕ್ಕೆ ಒಂದು ಕಡೆ ಸಿಲುಕಿಕೊಂಡ್ರೆ ಅಲ್ಲಿಂದ ಯಾವಾಗ ಬೇರೆ ಕಡೆ ಹೋಗುತ್ತೆ ಗೊತ್ತಿಲ್ಲ. ಇದೀಗ ಎನ್ಡಿಆರ್ಎಫ್ ತಂಡ ಟ್ಯಾಂಕರ್ ಕಟ್ಟಿ ಹಾಕುತ್ತಿದೆ. ಸ್ಥಳದಲ್ಲಿ ಕುಮಟಾ ಎಸಿ ಕಲ್ಯಾಣಿ ಕಾಂಬ್ಳೆ ಹಾಗೂ ಕುಮಟಾ ಎಇಒ ಸುನೀಲ ಸೇರಿದಂತೆ ಆಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ.
ದಯವಿಟ್ಟು ನಮ್ಮ ಚಾಲಕ ಅರ್ಜುನ ನನ್ನು ಬದುಕಿಸಿ ಕೊಡಿ: ಟಿವಿ9 ಬಳಿ ಅಳಲು ತೊಡಿಕೊಂಡ ಲಾರಿ ಮಾಲೀಕ
ಘಟನೆಯಲ್ಲಿ ಚಾಲಕ ಸಮೇತ ಮತ್ತೊಂದು ಟಿಂಬರ್ ಲಾರಿ ನಾಪತ್ತೆ ಆಗಿದೆ. ಈ ಬಗ್ಗೆ ದೂರು ಕೊಟ್ಟರು ಪೊಲೀಸರು ಸ್ವಿಕರಿಸುತ್ತಿಲ್ಲ ಎಂದು ಟಿವಿ9 ಬಳಿ ಲಾರಿ ಮಾಲೀಕ ಮುಬೀನ್ ಅಳಲು ತೊಡಿಕೊಂಡಿದ್ದಾರೆ. ನಮ್ಮ ಲಾರಿ ಚಾಲಕ ಅರ್ಜುನ ನಿನ್ನೆಯಿಂದ ನಾಪತ್ತೆ ಆಗಿದ್ದಾನೆ. ಬೆಳಿಗ್ಗೆ 11 ಗಂಟೆಯಿಂದ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಜಿಪಿಎಸ್ನಲ್ಲಿ ಗುಡ್ಡ ಕುಸಿತದ ಸ್ಥಳದಲ್ಲೇ ಲಾರಿ ಇದೆ ಎಂದು ತೋರಿಸುತ್ತಿದೆ. ಈ ಬಗ್ಗೆ ಸ್ಥಳಿಯ ಪೊಲೀಸ್ ಠಾಣೆಗೆ ಅಂಕೋಲಾಗೆ ದೂರು ಕೊಡಲು ಹೋಗಿದ್ದೆವು. ಆದರೆ ಅವರು ನಮ್ಮ ದೂರನ್ನ ಸ್ವಿಕರಿಸಲಿಲ್ಲ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಸಂಚಾರ ಅಸ್ತವ್ಯಸ್ತ; ಪರ್ಯಾಯ ಮಾರ್ಗದ ವಿವರ ಇಲ್ಲಿದೆ
ಜಿಪಿಎಸ್ ನೋಡುವಂತೆ ಹೇಳಿದರು ಕೇಳುತ್ತಿಲ್ಲ. ಫೋನ್ ಟ್ರ್ಯಾಕ್ ಮಾಡುವಂತೆ ಮನವಿ ಮಾಡಿದರು ಕೇರ್ ಮಾಡುತ್ತಿಲ್ಲ. ದಯವಿಟ್ಟು ನಮ್ಮ ಚಾಲಕ ಅರ್ಜುನ ನನ್ನು ಬದುಕಿಸಿ ಕೊಡಿ ಎಂದು ಅಳಲು ತೊಡಿಕೊಂಡಿದ್ದಾರೆ. ಜೋಯಿಡಾ ತಾಲೂಕಿನ ರಾಮನಗರದಿಂದ ಕಟ್ಟಿಗೆ ತುಂಬಿಕೊಂಡು ಕೆರಳ ಮೂಲದ ಲಾರಿ ಚಾಲಕ ಅರ್ಜುನ್ ಬಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.