ಉತ್ತರ ಕನ್ನಡ: ಅಣಶಿ ಗುಡ್ಡ ಕುಸಿತ; ಕಾರವಾರ-ಜೋಯಿಡಾ ಮಾರ್ಗದ ಸಂಚಾರ ಬಂದ್
ಉತ್ತರ ಕನ್ನಡ ಜಿಲ್ಲೆಯ ಅಣಶಿ ಗುಡ್ಡ ನಾಲ್ಕು ಬಾರಿ ಕುಸಿತಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 34ರ ಕಾರವಾರ-ಜೋಯಿಡಾ ಮಾರ್ಗದ ಸಂಚಾರ ಬಂದಾಗಿದೆ.
ಉತ್ತರ ಕನ್ನಡ: ಉತ್ತರ ಕನ್ನಡ (Uttar Kannada) ಜಿಲ್ಲೆಯ ಅಣಶಿ ಗುಡ್ಡ (Anais Hills) ಕುಸಿತಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ (National Highway) 34ರ ಕಾರವಾರ-ಜೋಯಿಡಾ ಮಾರ್ಗದ ಸಂಚಾರ ಬಂದಾಗಿದೆ. ನಿರಂತರ ಮಳೆಯಿಂದಾಗಿ ಹೆದ್ದಾರಿಯಲ್ಲಿ ಅಣಶಿ ಗುಡ್ಡ ಸತತ ನಾಲ್ಕು ಬಾರಿ ಕುಸಿತಗೊಂಡಿದೆ. ಈ ಸಂಬಂಧ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ನೆರೆ ನಿಂತಿಲ್ಲ. ಅರೆಂದೂರು ಹಳ್ಳ ತುಂಬಿ ಹರಿದು ಕೃಷಿಭೂಮಿ ಜಲಾವೃತಗೊಂಡಿದೆ. ಸಿದ್ದಾಪುರ ತಾಲೂಕಿನ ಕವಚೂರು ಗ್ರಾ.ಪಂ. ವ್ಯಾಪ್ತಿಯ ಅರೆಂದೂರು, ಕಲ್ಯಾಣಪುರ ಗ್ರಾಮಗಳ 500ಕ್ಕೂ ಹೆಚ್ಚು ಎಕರೆ ಭತ್ತ, ಕಬ್ಬು, ಜೋಳ ಬೆಳೆ ಜಲಾವೃತಗೊಂಡಿದೆ. ಇದರಿಂದ ಅನ್ನದಾತ ಕಂಗಾಲಾಗಿದ್ದಾನೆ.
ಭದ್ರಾ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಲು ನಿರ್ಧಾರ
ಶಿವಮೊಗ್ಗ: ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ಜುಲೈ 13 ರ ರಾತ್ರಿಯಿಂದ 120 ದಿನಗಳ ವರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಜಿ.ಎಸ್.ಪಟೇಲ್ ಹೇಳಿದ್ದಾರೆ.
ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಮುಂಗಾರು ಬೆಳೆಗಳಿಗಾಗಿ ಜುಲೈ 13 ರ ರಾತ್ರಿಯಿಂದ ಭದ್ರಾ ಎಡದಂಡೆ, ಬಲದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಿಗೆ ನೀರು ಬಿಡಲಾಗುತ್ತದೆ. ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿದೆ.
ಎಡದಂಡೆ ನಾಲೆಯಲ್ಲಿ 150 ಮತ್ತು ಬಲದಂಡೆ ನಾಲೆಯಲ್ಲಿ 1000 ಕ್ಯೂಸೆಕ್ಸ್ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗುವುದು.
ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿವಮೊಗ್ಗ ನಗರದ ಬಾಪೂಜಿನಗರದಲ್ಲಿ ಮಳೆಗೆ ಮನೆ ಕುಸಿದಿದೆ. ನಿನ್ನೆ (ಜುಲೈ 11) ರಾತ್ರಿ ಸುರಿದ ಮಳೆಗೆ ಮನೆಯ ಗೋಡೆಗಳು ಕುಸಿದಿವೆ. ಮನೆ ಕಳೆದುಕೊಂಡ ಕುಟುಂಬದ ಸದಸ್ಯರು ಬೀದಿಗೆ ಬಿದ್ದಿದ್ದಾರೆ.
ಸಂತ್ರಸ್ತೆ ವಿದ್ಯಾರ್ಥಿನಿ ಶೋಭಿತಾ ಟಿವಿ9 ಜೊತೆ ಮಾತನಾಡಿ ತಂದೆ ಇಲ್ಲದ ನಾವು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ನಮ್ಮ ಕುಟುಂಬದಲ್ಲಿ ಗಂಡು ಮಕ್ಕಳು ಯಾರೂ ಇಲ್ಲ. ನಾವು ಮೂವರು ಸಹೋದರಿಯರು ಇದ್ದೇವೆ. ತಾಯಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಾರೆ. ನಾನು 10ನೇ ತರಗತಿ ಓದುತ್ತಿದ್ದು, ಓದಲು ತೊಂದರೆ ಆಗಿದೆ. ನಮ್ಮ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವಂತೆ ಶೋಭಿತಾ ಅಳಲು ತೋಡಿಕೊಂಡಿದ್ದಾರೆ.
ಕೃಷ್ಣಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು
ಯಾದಗಿರಿ: ಕೃಷ್ಣಾ ನದಿಗೆ ಹರಿದು ಅಪಾರ ಪ್ರಮಾಣದ ನೀರು ಬರುತ್ತಿದ್ದು, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಸಂಬಂಧ ಸುರಪುರ ಠಾಣೆಯ ಪೊಲೀಸರಿಂದ ಶೆಳ್ಳಗಿ, ಮುಷ್ಟಳ್ಳಿ, ದೇವಪುರ ಗ್ರಾಮದಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸಲಾಗುತ್ತಿದೆ.
ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪಂಪ್ಸೆಟ್ಗಳನ್ನು ತೆಗೆಯಲು ನದಿಗೆ ಇಳಿಯ ಬೇಡಿ. ನದಿ ತೀರಕ್ಕೆ ಜಾನುವಾರು ಹೋಗದಂತೆ ನೋಡಿಕೊಳ್ಳಿ. ನದಿ ತೀರಕ್ಕೆ ತೆರಳದಂತೆ ಪೊಲೀಸರು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
Published On - 7:48 pm, Tue, 12 July 22