
ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 11 ಜನರ ಪೈಕಿ ನಿನ್ನೆ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಕೂಡ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ನೀರಿನ ಅಬ್ಬರಕ್ಕೆ 11 ಮಂದಿ ಜಲ ಸಮಾಧಿಯಾಗಿದ್ದರೆ, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಇನ್ನು ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಅವರನ್ನು ಉಳಿಸಲು ಹೋಗಿ ಅವರ ಮಗ ಉಮೇಶ್ ನಾಯ್ಕ್ ಕೂಡ ನೀರುಪಾಲಾಗಿದ್ದಾರೆ. ತಾಯಿ ನೀರಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದರೆ ಮಗ ಉಮೆಶ್, ಬಂಡೆ ಮೇಲೆ ಕಪ್ಪು ಚಿಪ್ಪು ಹೆಕ್ಕುತ್ತಿದ್ದರು. ತಾಯಿ ನೀರಲ್ಲಿ ಮುಳುಗುತ್ತಿದ್ದಿದ್ದು ಕಂಡಿದ್ದೇ ತಡ ಆಕೆಯ ರಕ್ಷಣೆಗೆಂದು ಅವರು ಕೂಡ ನೀರಿಗೆ ಹಾರಿದ್ದರು. ತಾಯಿ ದಪ್ಪ ಇದ್ದಿದ್ದರಿಂದ ಆಕೆಯನ್ನು ಎಷ್ಟೇ ಎಳೆಯಲು ಪ್ರಯತ್ನಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ನೀರಿಂದ ಆತ ಹಿಂದಿರುಗುವ ವೇಳೆ ಮತ್ತಿಬ್ಬರು ತಮ್ಮ ರಕ್ಷಣೆಗಾಗಿ ಉಮೇಶ್ ಕಾಲು ಎಳೆದಿದ್ದಾರೆ. ಹೀಗಾಗಿ ಅವರೂ ನೀರಲ್ಲಿ ಮುಳುಗಿ ಮೃತಪಟ್ಟಿರೋದಾಗಿ ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಕಪ್ಪೆ ಚಿಪ್ಪುಗಾಗಿ ಹೋದವರು ಜಲಸಮಾಧಿ
ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ನೀರುಪಾಲದವರ ಪೈಕಿ ಒಂದೊಂದು ಕುಟುಂಬಗಳ ಕಥೆಯೂ ಮನಕಲಕುವಂತಿದೆ. ಅವಘಡದಲ್ಲಿ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಅಸುನೀಗಿದ್ದು, ತಂದೆ ತಾಯಿ ಇಬ್ಬರೂ ನೀರುಪಾಲಾದ ಹಿನ್ನೆಲೆ ಮಕ್ಕಳಾದ ದರ್ಶನ (23), ಕಿರ್ತನಾ(20) ಈಗ ಅನಾಥರಾಗಿದ್ದಾರೆ. ಮತ್ತೊಂದೆಡೆ ಅವಘಡದಲ್ಲಿ ಮೃತ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಪತಿ ಕೂಡ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಓದುತ್ತಿದ್ದ ನಾಲ್ವರು ಮಕ್ಕಳಿಗೆ ಅಮ್ಮನೇ ಅಧಾರವಾಗಿದ್ದರು. ಆದರೀಗ ಆಕೆಯೂ ಮೃತಪಟ್ಟಿರೋದು ಮಕ್ಕಳಿಗೆ ದಿಕ್ಕು ತೋಚದಂತೆ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:31 am, Mon, 25 May 26