ಕಡ್ಲೆಪುರಿ ಮಾರುತ್ತಿದ್ದ ಕಮಲಾಕರ ಭಟ್ ಜ್ಯೊತಿಷಿ ಆಗಿದ್ಹೇಗೆ? ಬಗೆದಷ್ಟೂ ಬಯಲಾಗ್ತಿದೆ ಬಂಡವಾಳ

ವೀಳ್ಯದೆಲೆ ಮತ್ತು ಕಡ್ಲೆಪುರಿ ಮಾರುತ್ತಿದ್ದ ಸಿದ್ದಾಪುರದ ಕಮಲಾಕರ ಭಟ್, ಕೇರಳದಲ್ಲಿ ಜ್ಯೋತಿಷ್ಯ ಕಲಿತು ಕೋಟ್ಯಾಧಿಪತಿ ಜ್ಯೋತಿಷಿಯಾಗಿ ಬೆಳೆದಿದ್ದು ಹೇಗೆಂಬ ಪ್ರಶ್ನೆ ಮೂಡಿದೆ. ಸುಚಿತ್ರಾ ಜತೆ ಸೇರಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾದ ನಂತರ, ಭಟ್ ಪ್ರಭಾವಿ ಸ್ಥಾನ ಮತ್ತು ಅಕ್ರಮ ಸಂಪಾದನೆಯ ರಹಸ್ಯಗಳು ಒಂದೊಂದಾಗಿ ಬಯಲಾಗುತ್ತಿವೆ.

ಕಡ್ಲೆಪುರಿ ಮಾರುತ್ತಿದ್ದ ಕಮಲಾಕರ ಭಟ್ ಜ್ಯೊತಿಷಿ ಆಗಿದ್ಹೇಗೆ? ಬಗೆದಷ್ಟೂ ಬಯಲಾಗ್ತಿದೆ ಬಂಡವಾಳ
ಬಗೆದಷ್ಟೂ ಬಯಲಾಗ್ತಿದೆ ಕಮಲಾಕರ ಭಟ್ ಬಂಡವಾಳ
Image Credit source: tv9
Edited By:

Updated on: Feb 07, 2026 | 1:32 PM

ಕಾರವಾರ, ಫೆಬ್ರವರಿ 7: ಉತ್ತರ ಕನ್ನಡದ ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಜ್ಯೋತಿಷಿ ಕಮಲಾಕರ ಭಟ್ (Kamalakara Bhat) ಮತ್ತು ಸುಚಿತ್ರಾ ಹಿನ್ನೆಲೆ ಬಗ್ಗೆ ಬಗೆದಷ್ಟೂ ರಹಸ್ಯಗಳು ಬಯಲಾಗುತ್ತಿವೆ. ಪ್ರಭಾವಿ ಜ್ಯೋತಿಷಿ ಕಮಲಾಕರ ಭಟ್ ಅವರ ನಿಗೂಢ ಹಿನ್ನೆಲೆ ಮತ್ತು ಸಂಪತ್ತಿನ ಬಗ್ಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ. ಸಾಮಾನ್ಯ ವ್ಯಕ್ತಿಯಾಗಿ ವೀಳ್ಯದೆಲೆ ಮತ್ತು ಕಡ್ಲೆಪುರಿ ಮಾರಾಟ ಮಾಡುತ್ತಿದ್ದ ಕಮಲಾಕರ ಭಟ್ ಕೋಟ್ಯಧಿಪತಿ ಜ್ಯೋತಿಷಿಯಾಗಿದ್ದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಕಮಲಾಕರ ಭಟ್ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. 2005ರ ಮೊದಲು, ಅವರು ತಮ್ಮ ಊರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಡ್ಲೆಪುರಿ ಮತ್ತು ವೀಳ್ಯದೆಲೆಯನ್ನು ಮಾರಾಟ ಮಾಡುತ್ತಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಅವರು, ಇದ್ದಕ್ಕಿದ್ದಂತೆ 2005ರಲ್ಲಿ ಊರಿನಿಂದ ನಾಪತ್ತೆಯಾಗುತ್ತಾರೆ. ನಂತರ ಅವರು ಕೇರಳಕ್ಕೆ ತೆರಳಿ ಅಲ್ಲಿ ಜ್ಯೋತಿಷ್ಯ ಹಾಗೂ ವಶೀಕರಣ ಶಾಸ್ತ್ರವನ್ನು ಕಲಿತರೆಂದು ಹೇಳಲಾಗುತ್ತಿದೆ. ಕಲಿಕೆ ನಂತರ ಗ್ರಾಮಕ್ಕೆ ಮರಳಿ ಜ್ಯೋತಿಷ್ಯ ವೃತ್ತಿಯನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಅಷ್ಟೇನೂ ಹೆಸರು ಮಾಡದಿದ್ದರೂ, ನಂತರ ಅವರು ಬೆಂಗಳೂರಿಗೆ ತೆರಳಿದ ಮೇಲೆ ಅವರ ಜೀವನದ ದಿಕ್ಕೇ ಬದಲಾಯಿತು.

ಟಿವಿ, ಸಾಮಾಜಿಕ ಮಾಧ್ಯಮದಿಂದ ಬದಲಾದ ಬದುಕು

ಬೆಂಗಳೂರಿನಲ್ಲಿ ಕೆಲವು ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಪ್ರಚಾರವನ್ನು ಮಾಡಿಕೊಂಡ ಕಮಲಾಕರ ಭಟ್, ಅಲ್ಪಾವಧಿಯಲ್ಲೇ ಅಪಾರ ಜನಪ್ರಿಯತೆ ಗಳಿಸಿದರು. ಸುಮಾರು 10 ರಿಂದ 15 ವರ್ಷಗಳ ಅವಧಿಯಲ್ಲಿ ಅವರು ಕೋಟ್ಯಂತರ ರೂಪಾಯಿ ಸಂಪಾದಿಸಿ, ಬರಿಗೈಯಿಂದ ಕೋಟ್ಯಾಧಿಪತಿಯಾಗಿ ಬೆಳೆದರು. ಅವರ ಈ ಅಸಾಮಾನ್ಯ ಮತ್ತು ಅತಿ ವೇಗದ ಸಂಪಾದನೆಯು ಸಾರ್ವಜನಿಕರಲ್ಲಿ ಹಾಗೂ ಅವರ ಭಕ್ತರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಣವನ್ನು ಕೇವಲ ಜ್ಯೋತಿಷ್ಯದ ಮೂಲಕವೇ ಗಳಿಸಲಾಯಿತೇ ಅಥವಾ ಬೇರೆ ಯಾವುದೇ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದರೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ತಿಂಗಳಿಗೆ ಮೂರ್ನಾಲ್ಕು ಲಕ್ಷ ರೂ. ಕಚೇರಿ ನಿರ್ವಹಣೆಗೆ ಖರ್ಚು!

ಕಮಲಾಕರ ಭಟ್ ಬೆಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ತಮ್ಮ ಕಚೇರಿಗಳನ್ನು ತೆರೆದಿದ್ದರು. ಪ್ರತಿ ಕಚೇರಿಯಲ್ಲಿ 10 ರಿಂದ 15 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಅವರು ಕಚೇರಿ ನಡೆಸುತ್ತಿದ್ದ ಕಟ್ಟದ ಮಾಲೀಕರೂ ಮಾಹಿತಿ ನೀಡಿದ್ದಾರೆ. ತಿಂಗಳಿಗೆ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ತಮ್ಮ ಕಚೇರಿ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕಾಗಿ ಖರ್ಚು ಮಾಡುತ್ತಿದ್ದರು ಎಂಬುದೂ ತಿಳಿದುಬಂದಿದೆ. ಇಷ್ಟು ದೊಡ್ಡ ಪ್ರಮಾಣದ ಖರ್ಚುಗಳನ್ನು ನಿಭಾಯಿಸಲು ಅವರಿಗೆ ತಿಂಗಳ ಆದಾಯ ಎಲ್ಲಿಂದ ಬರುತ್ತಿತ್ತು ಎಂಬ ಬಗ್ಗೆ ಈಗ ಚರ್ಚೆಯಾಗುತ್ತಿದೆ.

ಸಿದ್ದಾಪುರ ಮತ್ತು ಶಿವಮೊಗ್ಗ ಭಾಗದಲ್ಲಿ ಕೆಲವು ಬ್ರೋಕರ್‌ಗಳನ್ನು ನೇಮಿಸಿಕೊಂಡು, ವಶೀಕರಣ ಮತ್ತು ಜ್ಯೋತಿಷ್ಯ ಸೇವೆಗಳಿಗಾಗಿ ಗ್ರಾಹಕರನ್ನು ಕರೆತರುತ್ತಿದ್ದರು. ಇದರಿಂದ ಬ್ರೋಕರ್‌ಗಳಿಗೆ ಕಮಿಷನ್ ನೀಡಿ, ತಮ್ಮ ಪ್ರಚಾರವನ್ನು ಹೆಚ್ಚಿಸಿಕೊಂಡಿದ್ದರು.

ಇದನ್ನೂ ಓದಿ: ‘ಅವಳಿಗಾಗಿ ನಾಯಿ ತರ ಅಲೆದಾಡಿದ್ದೆ’: ಕಮಲಾಕರನ ಒಂದೊಂದೇ ರಂಗಿನಾಟ ಬಯಲು!

ಸುಚಿತ್ರಾ ಕೂಡ ಆರಂಭದಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಸುಚಿತ್ರಾ ಪತಿ ಆಕೆ ಕಮಲಾಕರ ಭಟ್ ಮಾತ್ರವಲ್ಲದೆ, ಇತರೆ ಯುವಕರೊಂದಿಗೂ ಸುಚಿತ್ರಾ ಸಂಬಂಧ ಹೊಂದಿದ್ದರು ಮತ್ತು ಅವರ ಇನ್​ಸ್ಟಾಗ್ರಾಂ ರೀಲ್‌ಗಳು ತಮಗೆ ಬೇಸರ ತಂದಿದ್ದವು ಎಂದು ಈಗಾಗಲೇ ಆರೋಪಿಸಿದ್ದಾರೆ. ಇದೀಗ ಕಮಲಾಕರ ಭಟ್ ಬಂಧನದೊಂದಿಗೆ ಅವರ ಪ್ರಭಾವ ಮತ್ತು ಸಂಪತ್ತಿನ ಮೂಲದ ಕುರಿತಾದ ರಹಸ್ಯಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊಬೀಳುವ ನಿರೀಕ್ಷೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ