ಹೊನ್ನಾವರದ ಬಳಿ ಪಲ್ಟಿಯಾಗಿ ಹೊತ್ತಿ ಉರಿದ ಕಾರು: ಗುರುತು ಸಿಗದಂತೆ ಸುಟ್ಟು ಕರಕಲಾದ ಇಬ್ಬರು!
ಉತ್ತರ ಕನ್ನಡದ ಹೊನ್ನಾವರ ತಾಲೂಕಿನಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದೆ. ಪಲ್ಟಿಯಾದ ಕಾರು ಹೊತ್ತಿ ಉರಿದ ಪರಿಣಾಮ, ಇಬ್ಬರು ಸಜೀವ ದಹನವಾಗಿದ್ದಾರೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯಲ್ಲಿ ನಂಬರ್‌ಪ್ಲೇಟ್ ಸುಟ್ಟು ಹೋಗಿರುವುದರಿಂದ ಮೃತರ ಮತ್ತು ಕಾರಿನ ಗುರುತು ಪತ್ತೆ ಸವಾಲಾಗಿದೆ.

ಕಾರವಾರ/ಚಾಮರಾಜನಗರ: ಪಲ್ಟಿಯಾಗಿ ಕಾರು ಹೊತ್ತಿ ಉರಿದ ಪರಿಣಾಮ ಇಬ್ಬರು ಸಜೀವ ದಹನವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ನಲ್ಲಿ ನಡೆದಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಾರಿನ ನಂಬರ್‌ಪ್ಲೇಟ್ ಕೂಡ ಬೆಂಕಿಯಲ್ಲಿ ಸುಟ್ಟುಹೋಗಿದೆ. ಹೀಗಾಗಿಕಾರು ಮತ್ತು ಕಾರಿನಲ್ಲಿ ಇದ್ದವರ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಮೃತರು ಸಿದ್ದಾಪುರ ಮೂಲದವರೆಂದು ಗೊತ್ತಾಗಿದ್ದು, ಘಟನೆ ಬಗ್ಗೆ ಸಂಬಂಧಿಕರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸಂಪ್ನಲ್ಲಿ ತಾಯಿ-ಮಕ್ಕಳ ಶವ ಪತ್ತೆ; ನಿಗೂಢ ಸಾವಿಗೆ ಕಾರಣ ಏನು?
ಬಸ್-ಲಾರಿ ಮುಖಾಮುಖಿ ಡಿಕ್ಕಿ

ಬಸ್-ಲಾರಿ ಡಿಕ್ಕಿ
KSRTC ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬಳಿ ನಡೆದಿದೆ. ಅಪಘಾತದ ರಭಸಕ್ಕೆ ಅಶ್ವಮೇಧ ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಎರಡು ವಾಹನಗಳ ಚಾಲಕರ ಸ್ಥಿತಿ ಗಂಭೀರವಾಗಿದೆ. ಬೆಂಡರವಾಡಿ ಗ್ರಾಮದ ಶಾಲೆ ಹತ್ತಿರದ ತಿರುವಿನಲ್ಲಿ ನಂಜನಗೂಡು ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್, ಚಾಮರಾಜನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಗಾಯಾಳನ್ನ ನಗರದ ಸಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೆಲ ಕಾಲ ವಾಹನ ಸವಾರರು ಪರದಾಟ ನಡೆಸಬೇಕಾಯ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
