
ಕಾರವಾರ, ಮೇ 31: ಉತ್ತರ ಕನ್ನಡ (uttara-kannada) ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟ್‌ವೊಂದು ಮುಳುಗಡೆಯಾಗಿದ್ದು (boat sinking), ಅದರಲ್ಲಿದ್ದ ಏಳು ಜನ ಮೀನುಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಇಕ್ಬಾಲ್, ಅಬ್ದುಲ್ ಹಾಗೂ ಗಫೂರ್ ಎಂಬುವರಿಂದ 7 ಜನರ ರಕ್ಷಣೆ ಮಾಡಲಾಗಿದೆ. ಹೊನ್ನಾವರ ಸಿಎಸ್ಪಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾದ ಬೆಳಂಬಾರದಿಂದ ಮೀನುಗಾರಿಕೆಗೆ ತೆರಳಿದ್ದ ಮಂಜುನಾಥ್ ಖಾರ್ವಿ ಅವರಿಗೆ ಸೇರಿದ ‘ಶ್ರೀ ನವರತ್ನ’ ಹೆಸರಿನ ಬೋಟ್, ಚಲಿಸುತ್ತಿದ್ದಾಗ ಬೋಟ್‌ನ ಹೊರಭಾಗಕ್ಕೆ ಹಾನಿಯಾದ ಹಿನ್ನೆಲೆ ಸಮುದ್ರದಲ್ಲಿ ಮುಳುಗಲು ಆರಂಭಿಸಿದೆ. ಈ ವೇಳೆ ಬೋಟ್‌ನಲ್ಲಿದ್ದ ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಎಂಬ ಏಳು ಜನ ಮೀನುಗಾರರು ನೀರುಪಾಲಾಗುವ ಭೀತಿಯಲ್ಲಿದ್ದರು.
ಇದನ್ನೂ ಓದಿ: ಧಾರವಾಡದಲ್ಲಿ ಘೋರ ದುರಂತ: ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿ
ಇನ್ನು ಈ ವೇಳೆ ಸ್ಥಳೀಯ ಮೀನುಗಾರರಾದ ಇಕ್ಬಾಲ್, ಅಬ್ದುಲ್ ಹಾಗೂ ಗಫೂರ್ ತಮ್ಮ ಬೋಟ್ ಮೂಲಕ ತಕ್ಷಣವೇ ಸ್ಥಳಕ್ಕೆ ಧಾವಿಸಿ, ನೀರುಪಾಲಾಗುತ್ತಿದ್ದ ಏಳೂ ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಸಿ.ಎಸ್.ಪಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿ ಹೊಂಡದಲ್ಲಿ ಬಿದ್ದು ಅಣ್ಣ ತಮ್ಮ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ದೇವಕಿರಣ್ (12) ಹಾಗೂ ವಿನುತ್ (9) ಮೃತ ಅಣ್ಣ ತಮ್ಮಂದಿರು. ಶಾಲೆಗೆ ಬೇಸಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ತಾತನ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದ ಬಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಕೋಲಾರದಲ್ಲಿ ಮುಂದುವರೆದ ಕೃಷಿ ಹೊಂಡ ಸಾವಿನ ಸರಣಿ: 20 ದಿನದಲ್ಲಿ ಮಕ್ಕಳು ಸೇರಿ 9 ಜನ ಸಾವು
ಕೃಷಿ ಹೊಂಡ ಮಾಡುವ ಉದ್ದೇಶದಿಂದ ಬೃಹತ್ ಹೊಂಡ ತೆಗೆಯಲಾಗಿತ್ತು. ವಸತಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಬೇಸಿಗೆ ರಜೆಗೆಂದು ಅಜ್ಜಿ ತಾತನ ಮನೆಗೆ ಬಂದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:07 pm, Sun, 31 May 26