AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ಮುಂದುವರೆದ ಕೃಷಿ ಹೊಂಡ ಸಾವಿನ ಸರಣಿ: 20 ದಿನದಲ್ಲಿ ಮಕ್ಕಳು ಸೇರಿ 9 ಜನ ಸಾವು

ಕೋಲಾರ ಜಿಲ್ಲೆಯಲ್ಲಿ ಕೃಷಿ ಹೊಂಡಗಳು ಮೃತ್ಯು ಕೂಪಗಳಾಗಿ ಮಾರ್ಪಟ್ಟಿವೆ. ಏಕೆಂದರೆ ಕಳೆದ 20 ದಿನಗಳಲ್ಲಿ ಮಕ್ಕಳು ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. ಜಿಲ್ಲಾಧಿಕಾರಿ ತಂತಿ ಬೇಲಿ ಅಳವಡಿಕೆ ಸೇರಿದಂತೆ ಸುರಕ್ಷತಾ ಕ್ರಮಗಳಿಗೆ ಒಂದು ವಾರದ ಗಡುವು ನೀಡಿದ್ದರೂ, ಆ ಬಳಿಕವೂ ಸಾವಿನ ಸರಣಿ ಮುಂದುವರೆದಿವೆ.

ಕೋಲಾರದಲ್ಲಿ ಮುಂದುವರೆದ ಕೃಷಿ ಹೊಂಡ ಸಾವಿನ ಸರಣಿ: 20 ದಿನದಲ್ಲಿ ಮಕ್ಕಳು ಸೇರಿ 9 ಜನ ಸಾವು
ಕೃಷಿ ಹೊಂಡImage Credit source: tv9 kannada
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: May 26, 2026 | 4:39 PM

Share

ಕೋಲಾರ, ಮೇ 26: ಜಿಲ್ಲೆಯಲ್ಲಿ ಕೃಷಿ ಹೊಂಡಗಳು (Farm Ponds) ಅಕ್ಷರಶಃ ಮೃತ್ಯು ಕೂಪಗಳಾಗಿ ಮಾರ್ಪಟ್ಟಿವೆ. ನಿನ್ನೆ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಮತ್ತೆ ಇಬ್ಬರು ಸಹೋದರರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಬಳಿ ನಡೆದಿದೆ. ಆ ಮೂಲಕ ಕಳೆದ ಇಪ್ಪತ್ತು ದಿನದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು 9 ಜನರು ಮೃತಪಟ್ಟಿದ್ದಾರೆ. ಕೃಷಿಹೊಂಡಗಳಿಗೆ ತಂತಿ ಬೇಲಿ ಅಳವಡಿಸಿ, ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶದ ನಡುವೆಯೂ ಸಾವಿನ ಸರಣಿ ಮುಂದುವರೆದಿದೆ.

ಮುಖ್ಯಾಂಶಗಳು

  • ಕೋಲಾರದಲ್ಲಿ ಮೃತ್ಯು ಕೂಪವಾದ ಕೃಷಿ ಹೊಂಡಗಳು
  • ಕಳೆದ 20 ದಿನದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು 9 ಜನರ ಸಾವು
  • ಕೃಷಿಹೊಂಡ ಮುಚ್ಚಲು ಜಿಲ್ಲಾಧಿಕಾರಿ ಖಡಕ್​ ಸೂಚನೆ

ತಾತನ ಮನೆಗೆ ಬಂದಿದ್ದ ಅಣ್ಣತಮ್ಮ ಕೃಷಿ ಹೊಂಡಕ್ಕೆ ಬಿದ್ದು ಸಾವು

ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟವರ ಸಂಖ್ಯೆ ಏರಿಕೆ ಆಗುತ್ತಿದೆ. ಕೃಷಿ ಹೊಂಡಗಳಿಗೆ ಮುಳ್ಳುತಂತಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂಆರ್​​ ರವಿ ಒಂದು ವಾರದ ಗಡುವು ನೀಡಿದ್ದರು. ಒಂದು ವಾರದ ನಂತರವೂ ಸಾವಿನ ಸರಣಿ ಮುಂದುವರೆದಿದೆ. ನಿನ್ನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಬಳಿ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಮುಳುಗಿ ಇಬ್ಬರು ಸಹೋದರರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಮೃತ್ಯುಕೂಪವಾದ ಕೃಷಿ ಹೊಂಡಗಳು: 15 ದಿನದಲ್ಲಿ 7 ಮಂದಿ ಸಾವು

ದೇವಕಿರಣ್(12) ಮತ್ತು ವಿನುತ್​(9) ಮೃತ ಸಹೋದರರು. ಬಾಲಕರು ವಸತಿ ಶಾಲೆಯಲ್ಲಿ ಓದುತ್ತಿದ್ದರು. ಬೇಸಿಗೆ ರಜೆ ಹಿನ್ನೆಲೆ ತಾತನ ಮನೆಗೆ ಬಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಾಸ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೃಷಿ ಹೊಂಡಕ್ಕೆ ಬಿದ್ದು ಮೃತರಾದವ ವಿವರ

  • ಮೇ-5ರಂದು ಬಂಗಾರಪೇಟೆ ತಾಲ್ಲೂಕಿನ ಬೋಡೆನಹಳ್ಳಿ ಗ್ರಾಮದ ತನುಶ್ರೀ(15) ಮತ್ತು ಕಾರ್ತಿಕ್ (8) ಮೃತಪಟ್ಟಿದ್ದರು.
  • ಮೇ-8ರಂದು ಶ್ರೀನಿವಾಸಪುರ ‌ತಾಲ್ಲೂಕಿನ ಪಚ್ಚರಮಾಕಲಹಳ್ಳಿಯಲ್ಲಿ ಈಜಲು ಹೋಗಿದ್ದ ನರೇಂದ್ರ (25) ಮತ್ತು ಚಂದನ್ (24) ಮೃತಪಟ್ಟಿದ್ದರು.
  • ಮೇ- 17ರಂದು ಜಿಲ್ಲೆಯ ಮಾಲೂರು ತಾಲ್ಲೂಕು ನಕ್ಕನಹಳ್ಳಿ ಗ್ರಾಮದಲ್ಲಿ ತಂದೆ ಶ್ರೀನಿವಾಸ್ (40), ಮಕ್ಕಳಾದ ಚೇತನ್ (13) ಹಾಗೂ ರಾಜೇಶ್ (8) ಸಾವನ್ನಪ್ಪಿದ್ದರು.
  • ಮೇ-25ರಂದು ಮಾಲೂರು ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ಸೋದರರಾದ ದೇವಿಕಿರಣ್ (12) ಹಾಗೂ ವಿನುತ್(9) ಸಾವನ್ನಪ್ಪಿದ್ದರು. ಸದ್ಯ ಸುರಕ್ಷತಾ ಕ್ರಮಕೈಗೊಳ್ಳದ ಕೃಷಿಹೊಂಡ ಮುಚ್ಚಲು ಜಿಲ್ಲಾಧಿಕಾರಿ ಖಡಕ್​ ಸೂಚನೆ ನೀಡಿದ್ದಾರೆ.

ಹೈವೇಯಲ್ಲಿ ಮತ್ತೊಂದು ಅಪಘಾತ: ಬಾಲಕ ಸಾವು

ಕೋಲಾರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಮೃತಪಟ್ಟಿದ್ದು, ನಾಲ್ಕರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ನಡೆದಿದೆ. ಬಂಗಾರಪೇಟೆ ಮೂಲದ ಮುಜಾಮಿಲ್ (9) ಮೃತ ಬಾಲಕ. ಇನೋವಾ ಕಾರಿನಲ್ಲಿದ್ದ ನಾಲ್ಕು ಜನರಿಗೆ ಗಾಯಗಾಳಾಗಿವೆ.

ಇದನ್ನೂ ಓದಿ: ಗಡಿಪಾರಾಗಿದ್ದ ರೌಡಿಯನ್ನು ಮಗಳ ಮದುವೆ ಮಂಟಪದಿಂದಲೇ ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದ ಪೊಲೀಸರು: ವಿಡಿಯೋ ವೈರಲ್

ಗಾಯಾಳುಗಳಾದ ಸಯ್ಯದ್ ಉಲ್ಲಾ, ಸಯ್ಯದ್ ಅಫ್ರಿದ್, ಯಾಸ್ಮಿನ್ ಹಾಗೂ ಅಸೀಬಾರನ್ನು ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Rajendra Simha BL
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More