ಉತ್ತರ ಕನ್ನಡ: ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ; ಒಂದೇ ತಿಂಗಳಲ್ಲಿ 25 ಕ್ಲಬ್ಗಳು ಬಂದ್
ಕರ್ನಾಟಕದ ಕಾಶ್ಮಿರ ಎಂದೆ ಪ್ರಸಿದ್ಧಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಸದ್ಯ ಜಿಲ್ಲೆಗೆ ಹೊಸ ಎಸ್ಪಿ ಆಗಮನ ಆಗುತ್ತಿದ್ದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದ್ದು, ಕೇಲ ರಾಜಕೀಯ ನಾಯಕರ ಕಂಗೆಣ್ಣಿಗೆ ಪೊಲೀಸ್ ಇಲಾಖೆ ಗುರಿ ಆಗಿದೆ. ಈ ಕುರಿತುಒಂದು ವರದಿ ಇಲ್ಲಿದೆ ಓದಿ.
ಉತ್ತರ ಕನ್ನಡ, ಆ.11: ಪ್ರವಾಸೋದ್ಯಮಕ್ಕೆ ಹೆಸರಾದ ಜಿಲ್ಲೆ ಉತ್ತರ ಕನ್ನಡ(Uttara Kannada). ಜೊತೆಗೆ ಗೋವಾ ಗಡಿಯನ್ನು ಸಹ ಹಂಚಿಕೊಂಡಿದೆ. ಹೀಗಾಗಿ ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ಸಹ ಎಗ್ಗಿಲ್ಲದೇ ಸಾಗುತ್ತಿತ್ತು. ಕೆಲ ದಿನಗಳ ಹಿಂದಷ್ಟೆ ಎಸ್.ಪಿ .ಎಂ ನಾರಾಯಣ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಅಕ್ರಮ ಚಟುವಟಿಕೆ ತಾಣಗಳ ಮೇಲೆ ದಾಳಿ ನಡೆಸಿದೆ. ಒಂದೇ ತಿಂಗಳಲ್ಲಿ ವಿವಿಧ ಪ್ರಕರಣಗಳಡಿ 93 ಜನರ ಮೇಲೆ ಕೇಸ್ ದಾಖಲಿಸಿದೆ. ಜಿಲ್ಲೆಯ ಕ್ಲಬ್ಗಳು ,ಇಸ್ಪಿಟ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದೆ. ಜೊತೆಗೆ ವಿದ್ಯಾರ್ಥಿಗಳು, ಜನರಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ಮುಂದಾಗಿದೆ.
ಜಿಲ್ಲೆಯಲ್ಲಿ 25 ಕ್ಲಬ್ ಬಂದ್
ಜಿಲ್ಲೆಯಲ್ಲಿ ಸರಬರಾಜಾಗುತಿದ್ದ 14.73 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ 1,78,700 ರೂ ಗಳಾಗಿದ್ದು 23 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಓಸಿ, ಮಟ್ಕಾ ನಡೆಸುತಿದ್ದ 23 ಪ್ರದೇಶಗಳಲ್ಲಿ ದಾಳಿ ನಡೆಸಿ 28 ಜನರ ಮೇಲೆ ಪ್ರಕರಣ ದಾಖಲಿಸಿದ್ದು, 35,700 ರೂ. ವಶಕ್ಕೆ ಪಡೆಯಲಾಗಿದೆ. ಇನ್ನು ಗ್ಯಾಂಬಲಿಂಗ್ ನಡೆಸುತ್ತಿದ್ದ ಆರು ಪ್ರಕರಣದಲ್ಲಿ 33 ಜನರನ್ನು ಬಂಧಿಸಿ 48,670 ರೂಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ 25 ಅಕ್ರಮ ಚಟುವಟಿಕೆ ನಡೆಯುತಿದ್ದ ಕ್ಲಬ್ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಲಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡ: ತುಂಬಿದ ಗೇರುಸೊಪ್ಪ ಡ್ಯಾಂ; 5 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ರಾಜಕೀಯ ನಾಯಕರ ಕಂಗೇಣ್ಣಿಗೆ ಗುರಿ ಆದ ಪೊಲೀಸ್ ಇಲಾಖೆ
ಇನ್ನು ಗೋವಾದಿಂದ ಅಕ್ರಮವಾಗಿ ತರುತಿದ್ದ 27,289 ಮೌಲ್ಯದ 78.600 ಲೀಟರ್ ಮದ್ಯ ವಶಪಡಿಸಿಕೊಂಡು 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಅಕ್ರಮವಾಗಿ ಬೇರೆಡೆ ತೆರಳುತಿದ್ದ 1,77,888 ಮೌಲ್ಯದ ಮರಳನ್ನು ವಶಕ್ಕೆ ಪಡೆದು ಎಂಟು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸ್ ಇಲಾಖೆ ಆಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಡುತ್ತಿದ್ದಂತೆ, ಜಿಲ್ಲೆಯ ಕೆಲ ರಾಜಕೀಯ ನಾಯಕರ ಕಣ್ಣು ಕೆಂಪಾಗಿಸಿದೆ. ಕೆಲವರು ಬೇರೆ ಬೇರೆ ಕಡೆಯಿಂದ ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದ್ರೆ, ಇದುವರೆಗೂ ಬಗ್ಗದ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಮುಂದೇನು ಮಾಡ್ತಾರೆ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ