ಕರ್ನಾಟಕದಲ್ಲಿ ಮಹಾ ಮಳೆಗೆ 20 ಜನರು ಸಾವು, 40ಕ್ಕೂ ಹೆಚ್ಚು ಜಾನುವಾರುಗಳು ಮೃತ
ಉತ್ತರ ಕನ್ನಡದಲ್ಲಿ ಸುರಿದ ಭಾರೀ ಮಳೆಗೆ ಇಬ್ಬರು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೆ 20 ಜನರು ಬಲಿಯಾಗಿದ್ದಾರೆ. 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಕಾರವಾರ: ರಾಜ್ಯದಲ್ಲಿ ಇದುವರೆಗೆ ಮಳೆಗೆ (Karnataka Rain) 20 ಜನರು ಬಲಿಯಾಗಿದ್ದು, 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಹೇಳಿದ್ದಾರೆ. ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಮಳೆ ಹಾನಿಗೆ ಸರ್ಕಾರ ಪರಿಹಾರ ಕೊಡಲು ಸಿದ್ದವಿದ್ದು, ಹಾನಿಯಾದ ಮನೆಗಳಿಗೆ 1.25 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದರು.
ನೆರೆ ಪಿಡೀತ ಪ್ರದೇಶಗಳಿಗೆ ಬೇಟಿನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಅಧಿಕಾರಿಗಳ ವರ್ಗಕ್ಕೆ ಚುರುಕು ಮುಡಿಸಲು ಬೇಟಿ ನೀಡುತ್ತಿದ್ದೆವೆ. ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಜುಲೈ ಕೊನೆ ವಾರದವರೆಗೆ ಕಾದುನೋಡಿ ಮೋಡ ಬಿತ್ತನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಕೇಂದ್ರದ ನಿಯಮಗಳ ಅನ್ವಯ ಮೋಡ ಬಿತ್ತನೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಇದನ್ನೂ ಓದಿ: ಕೊಡಗು ಜಿಲ್ಲೆಯಾದ್ಯಂತ ಅಬ್ಬರದ ಮಳೆ; ಅನಾರೋಗ್ಯ ಪೀಡಿತನನ್ನು ಸ್ಟ್ರೆಚರ್ನಲ್ಲಿ ಎತ್ತಿಕೊಂಡು ಪ್ರವಾಹ ದಾಟಿದ ಸ್ಥಳೀಯರು
ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಬೆಟ್ಕುಳಿ ಗ್ರಾಮಕ್ಕೆ ಭೇಟಿ ನೀಡಿದ ಕೃಷ್ಣಭೈರೇಗೌಡ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿದರು. ಘಟನೆ ಸಂಬಂಧ ಮೃತರ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಜಿಲ್ಲೆಯಲ್ಲಿ ಮಳೆ ಹಾನಿಯ ಕುರಿತು ಚರ್ಚೆ ನಡೆಸಲಿದ್ದಾರೆ.
ಅವಶ್ಯಕತೆ ಬಿದ್ದರೆ ಉಡುಪಿ, ಮಂಗಳೂರಿಗೆ ಭೇಟಿ: ಸತೀಶ್ ಜಾರಕಿಹೊಳಿ
ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಆಗುತ್ತಿರುವ ಬಗ್ಗೆ ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕಾರವಾರದಲ್ಲಿ ಸೇತುವೆ ಬಿದ್ದಿರುವ ಮಾಹಿತಿ ಇದೆ. ಎಲ್ಲೇಲ್ಲಿ ಅನಾಹುತ ಆಗಿದೆ ಕೂಡಲೇ ಸರಿಪಡಿಸಲು ಸೂಚಿಸಿದ್ದೇವೆ. ಮಳೆಗಾಲದಲ್ಲಿ ಆ ಭಾಗದಲ್ಲಿ ಕೆಲಸ ಮಾಡಲು ಆಗುವುದಿಲ್ಲ. ನವೆಂಬರ್ ನಂತರ ಕೆಲಸ ಮಾಡಿ ಸರಿ ಪಡಿಸುತ್ತೇವೆ ಈಗ ತಾತ್ಕಾಲಿಕವಾಗಿ ಮಾಡುತ್ತೇವೆ. ಶಿರಾಡಿಘಾಟ್ ಸೇರಿದಂತೆ ಹಲವು ಕಡೆ ಭೂಕುಸಿತ ಆಗುತ್ತೆ ಅದಕ್ಕೆ ತಡೆಗೋಡೆ ನಿರ್ಮಿಸಲಾಗುತ್ತದೆ. ಸರ್ಕಾರಕ್ಕೆ ಚಾಲೆಂಜ್ ಆಗಿತ್ತು ಅದನ್ನ ಟೈಮ್ ಬಾಂಡ್ನಲ್ಲಿ ಮುಗಿಸಲು ಹೇಳಿದ್ದೇವೆ. ಅವಶ್ಯಕತೆ ಬಿದ್ದರೆ ಉಡುಪಿ, ಮಂಗಳೂರಿಗೆ ಭೇಟಿ ನೀಡುತ್ತೇನೆ ಎಂದರು.
ವರದಿ: ವಿನಾಯಕ್ ಬಡಿಗೇರ್ (ಕಾರವಾರ) ಮತ್ತು ಸಹದೇವ್ ಮಾನೆ (ಬೆಳಗಾವಿ)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ