ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ

ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಪೋಕ್ಸೋ ಸಂತ್ರಸ್ತೆ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದು, ರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದೆ. ಮಾನಸಿಕ ಒತ್ತಡದಲ್ಲಿದ್ದ ಬಾಲಕಿಗೆ ನಿರಂತರ ಕೌನ್ಸೆಲಿಂಗ್ ಮತ್ತು ಸೂಕ್ತ ನಿಗಾ ವಹಿಸದಿರುವುದು ಘಟನೆಗೆ ಕಾರಣವಾಗಿದೆ. ಮಕ್ಕಳ ಕಲ್ಯಾಣ ಇಲಾಖೆಯು ಇಂತಹ ಕೇಂದ್ರಗಳಲ್ಲಿ ಮಕ್ಕಳ ಮಾನಸಿಕ ಸ್ವಾಸ್ಥ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈ ಘಟನೆ ಎಚ್ಚರಿಸಿದೆ.

ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Feb 07, 2026 | 8:55 PM

ಕಾರವಾರ, ಫೆ.7: ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಯೊಂದು ನಡೆದಿದೆ. ಘೋರ ದೌರ್ಜನ್ಯಕ್ಕೆ ಒಳಗಾಗಿ ಈಗಾಗಲೇ ನೊಂದಿದ್ದ ಬಾಲಕಿಗೆ ರಕ್ಷಣೆ ಸಿಗಬೇಕಾದ ಜಾಗದಲ್ಲಿಯೇ ಇಂತಹ ನಿರ್ಧಾರ ಮಾಡಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಬಾಲಕಿ ಮೂಲತಃ ಹಳಿಯಾಳ ತಾಲೂಕಿನವಳು. ಕಳೆದ ಆಗಸ್ಟ್‌ನಲ್ಲಿ ಪೋಕ್ಸೋ ಪ್ರಕರಣವೊಂದರ ಅಡಿಯಲ್ಲಿ ಈಕೆಯನ್ನು ರಕ್ಷಿಸಿ ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು.

ಈಕೆ ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಆದರೆ, ಮಾನಸಿಕ ಒತ್ತಡದ ಕಾರಣ ಕಳೆದ ಎರಡು ವಾರಗಳಿಂದ ಶಾಲೆಗೆ ಹೋಗದೆ ಬಾಲಮಂದಿರದಲ್ಲಿಯೇ ಉಳಿದುಕೊಂಡಿದ್ದಳು. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ಯಾರೂ ಇಲ್ಲದ ಸಮಯ ನೋಡಿ ಮೇಲಿನ ಕೋಣೆಗೆ ತೆರಳಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ತಕ್ಷಣ ಗಮನಿಸಿದ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಕಾರವಾರದ ಕ್ರಿಮ್ಸ್ (KRIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಕಿ ಮಾನಸಿಕವಾಗಿ ಕುಗ್ಗಿದ್ದಾಳೆ ಎಂದು ತಿಳಿದಿದ್ದರೂ ಮತ್ತು ಆಕೆಯನ್ನು ಈ ಹಿಂದೆಯೇ ನಿಮಾನ್ಸ್ (NIMHANS) ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರೂ, ಆಕೆಗೆ ನಿರಂತರವಾಗಿ ನೀಡಬೇಕಾದ ‘ಕೌನ್ಸೆಲಿಂಗ್’ ಹಾಗೂ ಆಕೆ ನೀಡಬೇಕಿದ್ದ ರಕ್ಷಣೆಯಲ್ಲಿ ಲೋಪವಾಗಿರುವುದು ಕಂಡುಬರುತ್ತಿದೆ. ಬಾಲಮಂದಿರದಲ್ಲಿ 20 ಬಾಲಕಿಯರಿಗೆ 10 ಮಂದಿ ಸಿಬ್ಬಂದಿ ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಸಿಬ್ಬಂದಿ ಇದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಬಾಲಕಿ ಒಬ್ಬಂಟಿಯಾಗಿ ಬಿಟ್ಟಿರುವುದೇ ತಪ್ಪು. ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾಗಿ ಬರುವ ಮಕ್ಕಳಿಗೆ ಕೇವಲ ಆಶ್ರಯ ನೀಡಿದರೆ ಸಾಲದು, ಅವರಿಗೆ ಮಾನಸಿಕ ಧೈರ್ಯ ತುಂಬುವ ತಜ್ಞರ ಅವಶ್ಯಕತೆ ಇಂತಹ ಕೇಂದ್ರಗಳಲ್ಲಿ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: 6 ವರ್ಷದಿಂದ ಒಂದೇ ರೂಮಿನಲ್ಲಿದ್ದು ಈಗ ನಾನು ಬೇಡ ಅಂತಿದ್ದಾಳೆ: ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಿಯಕರ

ಇದೀಗ ಬಾಲಕಿಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ, ಈ ಘಟನೆಯ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬಾಲಮಂದಿರದ ಭದ್ರತೆ ಮತ್ತು ಮಕ್ಕಳ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಗಳ ಪ್ರಕಾರ, ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯವಾಗಿ, 10 ಮಂದಿ ಸಿಬ್ಬಂದಿ ಇರುವಾಗ ಈ ಲೋಪ ಹೇಗೆ ಸಂಭವಿಸಿತು ಎಂಬ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ. ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು CWC ವಿಚಾರಣೆ ನಡೆಸುತ್ತಿದೆ. ಬಾಲಕಿ ಈ ಹಿಂದೆಯೇ ಆತ್ಮಹತ್ಯೆಯ ಬೆದರಿಕೆ ಹಾಕಿದ್ದರೂ ಆಕೆಯ ಮೇಲೆ ವಿಶೇಷ ನಿಗಾ ವಹಿಸದಿದ್ದಕ್ಕೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ