
ಕಾರವಾರ, ಮಾರ್ಚ್ 22: ಎಲ್ಪಿಜಿ ಗ್ಯಾಸ ಸಿಲಿಂಡರ್ (gas cylinder) ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇದರ ಎಫೆಕ್ಟ್ ಬೇರೆ ಉದ್ಯಮಗಳ ಮೇಲೂ ಬೀರಿದೆ. ಪ್ರವಾಸಿ ತಾಣಗಳಲ್ಲಿ ಸಮರ್ಪಕ ಎಲ್.ಪಿ.ಜಿ ಗ್ಯಾಸ್ ಸಿಗದೆ ಎಲ್ಲಾ ಬಗೆಯ ಅಡುಗೆ ಮಾಡಲಾಗುತ್ತಿಲ್ಲ. ಹೀಗಾಗಿ ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಪ್ರವಾಸಿಗರಿಗೆ ಕರಾವಳಿಯ ಖಾದ್ಯ ಸವಿಯಲು ಸಿಗದೇ ನಿರಾಶರಾಗಿದ್ದಾರೆ. ಇನ್ನೂ ಕೆಲವರು ಬುಕ್ಕಿಂಗ್ ಮಾಡಿರುವುದನ್ನ ಕ್ಯಾನ್ಸಲ್ ಮಾಡಿಕೊಳ್ಳುತ್ತಿದ್ದಾರೆ.
ಇರಾನ್-ಇಸ್ರೇಲ್ ಯುದ್ಧ ಆರಂಭವಾಗಿ ಇಂದಿಗೆ 23 ದಿನ. ಇದೇ ಯುದ್ಧ ನಮ್ಮ ದೇಶದ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಮೊದಮೊದಲು ಸಿಲಿಂಡರ್ ಗ್ಯಾಸ್ ಸಿಗದೆ ಹೊಟೇಲ್ ಉದ್ಯಮಕ್ಕೆ ದೊಡ್ಡ ನಷ್ಟ ಸಂಭವಿಸಿದೆ. ಆದರೆ ಸಿಲಿಂಡರ್ ಎಫೆಕ್ಟ್ನ ನಷ್ಟ ಕೇವಲ ಹೋಟೆಲ್ ಉದ್ಯಮಕ್ಕೆ ಸೀಮಿತವಾಗಿಲ್ಲ. ಬೇರೆಬೇರೆ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ.
ಇದನ್ನೂ ಓದಿ: ಕಾರವಾರ: ಪ್ರವಾಸಿಗರು ಹೆಚ್ಚಳದ ಮಧ್ಯೆ ದರ ಸಮರ: ಏಜೆಂಟರು ಮತ್ತು ಕಂಪನಿಗಳ ನಡುವೆ ಬಿಗ್ ಫೈಟ್
ಉತ್ತರ ಕನ್ನಡ ಜಿಲ್ಲೆಯನ್ನ ಪ್ರವಾಸಿಗರ ಸ್ವರ್ಗ ಎಂದು ಕರೆಯಲಾಗುತ್ತದೆ. ಕೇವಲ ಪ್ರೇಕ್ಷಣೀಯ ತಾಣಗಳಿಗಷ್ಟೇ ಅಲ್ಲ, ಇಲ್ಲಿನ ಖಾದ್ಯಗಳು ಕೂಡ ಸಾಕಷ್ಟು ಫೇಮಸ್. ಇಲ್ಲಿನ ಕರಾವಳಿ ಖಾದ್ಯ ಸವಿಯಲು ರಾಜ್ಯ, ಹೊರರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಆದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಿಲಿಂಡರ್ ಅಭಾವದಿಂದ ಎಲ್ಲಾ ಬಗೆಯ ಖಾದ್ಯಗಳನ್ನು ಮಾಡಲಾಗುತ್ತಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಪ್ರವಾಸಿತಾಣಗಳಿವೆ. ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಮನಸೋಲದವರಿಲ್ಲ. ಇಂತಹ ಪ್ರಕೃತಿ ಸೌಂದರ್ಯದ ಮಧ್ಯೆ ತಯಾರಿಸುವ ರುಚಿಕರ ಫಿಶ್ ಹಾಗೂ ತಂದೂರಿ ಐಟಂಗಳಿಗೆ ಭಾರಿ ಬೇಡಿಕೆ ಇದೆ. ಪ್ರವಾಸಿ ತಾಣದ ಜೊತೆಗೆ ಇಲ್ಲಿನ ಖಾದ್ಯ ಸವಿಯಲೆಂದೇ ರಾಜ್ಯ, ಹೊರರಾಜ್ಯಗಳಿಂದ ಜನ ಬರುತ್ತಾರೆ. ಆದರೆ ಗ್ಯಾಸ ಅಭಾವ ಹಿನ್ನೆಲೆ ಇಲ್ಲಿನ ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರಿಗೆ ಕರೆ ಮಾಡಿ ಖಾದ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಖಾದ್ಯ ಸಿಗುತ್ತಿಲ್ಲ ಎಂಬ ಮಾಹಿತಿ ಬರುತ್ತಿದ್ದಂತೆ ಬುಕ್ಕಿಂಗ್ ಕೂಡ ಕ್ಯಾನ್ಸಲ್ ಮಾಡುತ್ತಿದ್ದಾರೆ.
ಇನ್ನು ಈ ಬಗ್ಗೆ ಪ್ರಿಮಿಯರ್ ಹೋಟೆಲ್ ಮಾಲೀಕ ಎಂ.ಜಿ ರಾಣೆ ಮಾತನಾಡಿದ್ದು, ಪ್ರತಿವರ್ಷ ಸಾಲು ಸಾಲು ರಜೆ ಇದ್ದರೆ ನಮ್ಮ ಹೋಟೆಲ್ ತುಂಬಿರುತ್ತಿತ್ತು. ಯುದ್ಧ ಆರಂಭಕ್ಕೂ ಮುನ್ನ ಮುಂಗಡ ಬುಕ್ಕಿಂಗ್ ಮಾಡಿದ್ದರು. ಕಳೆದ ವಾರ ಬಹಳಷ್ಟು ಜನ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದಾರೆ. ಕಾರವಾರದ ದೇಸಿ ಫುಡ್ನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. ದೇಸಿ ಫುಡ್ ತಿನ್ನಲು ದೂರದೂರಿನಿಂದ ವಿಐಪಿ ಗೆಸ್ಟ್ ಬರ್ತಾರೆ. ಆ ಗ್ಯಾಸ್ ಅಭಾವದಿಂದ ಬಹಳಷ್ಟು ಐಟಂ ಮಾಡುತ್ತಿಲ್ಲ. ಹೀಗಾಗಿ ಬಹಳಷ್ಟು ಜನ ಕಾರವಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರೆಸಾರ್ಟ್, ಹೋಮ್ ಸ್ಟೆಗಳಲ್ಲು ಇದೆ ರೀತಿಯ ಪರಿಸ್ಥಿತಿ ಇದೆ. ನಿರೀಕ್ಷಿಸಿದಷ್ಟು ಲಾಭ ಸಿಕ್ಕಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮಲ್ಪೆಯಲ್ಲಿ ಮೀನಿನ ಬೆಲೆ ಪಾತಾಳಕ್ಕೆ! ಮಾಂಜಿ, ಅಂಜಲ್ ಬೆಲೆ ಎಷ್ಟಿದೆ ಗೊತ್ತಾ? : ಮೀನಿನ ದರ ಪಟ್ಟಿ ಇಲ್ಲಿದೆ ನೋಡಿ
ಒಟ್ಟಾರೆ ಸಾಲು ಸಾಲು ರಜೆ ಹಾಗೂ ಮಕ್ಕಳ ಬೆಸಿಗೆ ರಜೆ ಆರಂಭ ಹಿನ್ನೆಲೆ ಬಹಳಷ್ಟು ಜನರು ಕುಟುಂಬ ಸಮೇತ ಪ್ರವಾಸಕ್ಕೆ ಬರುವ ಪ್ಲ್ಯಾನ್ ಹಾಕಿರುತ್ತಾರೆ. ಆದರೆ ಗ್ಯಾಸ್ ಅಭಾವದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಹೆಚ್ಚು ಆದಾಯ ಗಳಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಹೋಟೆಲ್ ಉದ್ಯಮಿಗಳಿಗೆ ನಿರಾಸೆ ಉಂಟಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:54 pm, Sun, 22 March 26