
ಕಾರವಾರ, ಏಪ್ರಿಲ್ 02: ಅನೇಕ ಅನುಯಾಯಿಗಳು ತಮ್ಮ ನೆಚ್ಚಿನ ನಾಯಕನ ಅಭಿಮಾನದ ಪ್ರತೀಕವಾಗಿ ದೋಡ್ಡ್ ಬ್ಯಾನರ್ ಹಾಕುವುದು, ಬರ್ತಡೇಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದು, ಬ್ಯಾನರ್ಗಳಿಗೆ ಹಾಲಿನ ಅಭಿಷೇಕ ಮಾಡುವುದನ್ನ ನಾವು ನೋಡಿರುತ್ತೇವೆ. ಆದರೆ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ (Ramakrishna Hegde) ಅವರ ಅನುಯಾಯಿ ಒಬ್ಬರು, ಹೆಗಡೆ ಅವರ ಇಷ್ಟದ ಮೌನ ಎಂಬ ಗೃಂಥಾಲಯ (Library) ಆರಂಭ ಮಾಡಿ ಸಾರ್ವಜನಿಕರಿಗೆ ಓದುವ ಗೀಳನ್ನು ಅಂಟಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.
ಹೌದು! ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಪಕ್ಕಾ ಅನುಯಾಯಿ ಆಗಿರುವ ಪ್ರಮೋದ ಹೆಗಡೆ, ಯಲ್ಲಾಪುರದ ತಮ್ಮ ಮನೆಯಲ್ಲಿ ಮೌನ ಎಂಬ ಹೆಸರಿನ ಗ್ರಂಥಾಲಯ ಆರಂಭ ಮಾಡಿದ್ದಾರೆ. ವಿಷಯ ಏನಂದ್ರೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮನೆಯಲ್ಲಿ ಒಂದು ಗ್ರಂಥಾಲಯ ಇತ್ತು. ವಾರದ ಆರು ದಿನ ನಿರಂತರ ಬಿಜಿ ಆಗಿರುತ್ತಿದ್ದ ದಿವಂಗತ ರಾಮಕೃಷ್ಣ ಹೆಗಡೆಯವರು ಭಾನುವಾರ ಮಾತ್ರ ಆದಷ್ಟು ಕೆಲಸಗಳನ್ನು ಬಿಟ್ಟು ಮೌನವಾಗಿ ಓದುವುದಕ್ಕೆ ಹೆಚ್ಚಿನ ಆದ್ಯತೆಯನ್ನ ಕೊಡುತ್ತಿದ್ದರು.
ಇದನ್ನೂ ಓದಿ: ಏ 6ರಿಂದ ಸುವಿದ್ಯೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ
ಓದಿನ ಮಹತ್ವ ಮತ್ತು ಅದರ ಪ್ರಯೋಜನಗಳ ಬಗ್ಗೆ ತಮ್ಮ ಆಪ್ತರಲ್ಲಿ ಹೇಳಿ ಓದುವುದಕ್ಕೆ ಪ್ರೇರಣೆ ನೀಡುತ್ತಿದ್ದರು ಅಲ್ಲದೇ, ಮೌನ ಎಷ್ಟು ಪ್ರಬುದ್ಧರಾಗಿಸುತ್ತದೆ ಎಂಬುವದರ ಬಗ್ಗೆಯೂ ಅವರು ಆಗಾಗ ಹೇಳುತ್ತಿದ್ದರು ಎಂದು ಪ್ರಮೋದ ಹೆಗಡೆಯವರು ನೆನಪಿಸಿಕೊಂಡರು. ಅವರ ಪಕ್ಕಾ ಅನುಯಾಯಿ ಆಗಿರುವ ಇವರು ಅವರ ನೆನಪಿನಲ್ಲಿ ಮನೆಯಲ್ಲೇ ಒಂದು ಗೃಂಥಲಾಯ ಆರಂಭ ಮಾಡಿದ್ದಾರೆ.
ಈ ಗೃಂಥಾಲಯದ ಮತ್ತೊಂದು ವಿಶೇಷವೇನೆಂದರೆ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಹೊಂದಿರುವ ಈ ಗ್ರಂಥಾಲಯ ಆರಂಭ ಮಾಡಿದ್ದು, ಕೇವಲ ಇವರ ಸ್ವಂತ ಓದಿಗಾಗಿ ಅಲ್ಲ, ಸಾರ್ವಜನಿಕರು ಉಚಿತವಾಗಿ ಇಲ್ಲಿಗೆ ಬಂದು ಓದಿನ ಆಸಕ್ತಿಯನ್ನ ಬೆಳೆಸಲು ಈ ಗ್ರಂಥಾಲಯ ಆರಂಭ ಮಾಡಲಾಗಿದೆ ಎಂದು ಪ್ರಮೋದ ಹೆಗಡೆ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್ಎಂ
ದೇಶ ಸುತ್ತಿನೊಡು ಕೋಶ ಓದಿ ನೋಡು ಎಂಬ ಗಾದೆಗೆ, ಪ್ರೇರಣೆ ನೀಡುವಂತಿರುವ ಈ ಮನೆಗೆ ಬಂದಿರುವ ಅನೇಕರು ಓದಿನ ಗೀಳನ್ನು ಅಂಟಿಸಿಕೊಂಡಿದ್ದಾರೆ. ಮನೆಯ ಹೊರ ವಲಯದಲ್ಲಿರುವ ಬ್ಯಾನರ್ಗಳನ್ನು ನೋಡಿ ಜಿಲ್ಲೆಯನ್ನ ಒಮ್ಮೆ ಸುತ್ತ ಬೇಕು ಎಂಬ ಬಯಕೆ ಆಗುತ್ತೆ ಅಲ್ಲದೆ, ಮನೆಯ ಒಳಗಿನ ಗ್ರಂಥಾಲಯದಿಂದ ಕೋಶ ಓದುವ ಪ್ರೇರಣೆ ಸಿಗುತ್ತದೆ. ಹಾಗಾಗಿ ಈ ಮೌನ ಗ್ರಂಥಲಾಯದಿಂದ ನೂರಾರು ಯುವಕರು ಸದುಪಯೋಗ ಪಡೆಯುತ್ತಿದ್ದಾರೆ. ಅನೇಕರು ಇಲ್ಲಿದ್ದ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಕೂಡ ಓದುತ್ತಾರೆ.
ಒಟ್ಟಾರೆಯಾಗಿ ಬ್ಯಾನರ್ ಹಾಕಿ ಹಾಲಿನ ಅಭಿಷೇಕ ಮಾಡುತ್ತ ಅಭಿಮಾನ ವ್ಯಕ್ತ ಪಡಿಸುವವರ ಮಧ್ಯ ತಮ್ಮ ನೆಚ್ಚಿನ ನಾಯಕ ತಮಗೆ ಕೊಟ್ಟ ಓದುವ ಪ್ರೇರಣೆಯನ್ನೆ, ಸಾರ್ವಜನಿಕರಿಗೆ ನೀಡುತ್ತಾ ತಮ್ಮ ನಾಯಕರ ಬಗ್ಗೆ ಅಭಿಮಾನವನ್ನ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.