ಲಂಚ ಪಡೆಯುವಾಗ ಸಿಕ್ಕಿಬಿದ್ದ ಸರ್ಜನ್: ವೈದ್ಯನ ಕಿರುಕಳಕ್ಕೆ ಪತ್ನಿ ತಾಳಿ ಅಡವಿಟ್ಟಿದ್ದ ಗುತ್ತಿಗೆದಾರ!

ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ಅಥವಾ ಮಂಗಳೂರಿಗೆ ಹೋಗಬೇಕಾಗುತ್ತದೆ. ಹಾಗಾಗಿ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಅನಿವಾರ್ಯವಾಗಿ ಬಡವರು ಹೆಚ್ಚಾಗಿ ಬರುತ್ತಾರೆ. ಆದರೆ, ಜಿಲ್ಲಾಸ್ಪತ್ರೆ ಮುಖ್ಯ ವೈದ್ಯಾಧಿಕಾರಿ (ಜಿಲ್ಲಾ ಸರ್ಜನ್) ಮಾತ್ರ ಲಂಚ ಇಲ್ಲದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಈಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದಿದ್ದಾರೆ.

ಲಂಚ ಪಡೆಯುವಾಗ ಸಿಕ್ಕಿಬಿದ್ದ ಸರ್ಜನ್: ವೈದ್ಯನ ಕಿರುಕಳಕ್ಕೆ ಪತ್ನಿ ತಾಳಿ ಅಡವಿಟ್ಟಿದ್ದ ಗುತ್ತಿಗೆದಾರ!
ಉತ್ತರ ಕನ್ನಡ ಜಿಲ್ಲಾ ಆಸ್ಪತ್ರೆ
Edited By:

Updated on: Jul 11, 2025 | 12:35 PM

ಕಾರವಾರ, ಜುಲೈ 11: ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kananda) ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಕೂಗು ಬಹಳ ಹಿಂದಿನಿಂದಲೂ ಇದೆ. ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಸಾವನ್ನಪ್ಪಿದವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಜಿಲ್ಲೆಯಲ್ಲಿ ಸದ್ಯ ಇರುವ ಜಿಲ್ಲಾ ಆಸ್ಪತ್ರೆಯೇ (Uttara Kananda District Hospital) ಜಿಲ್ಲೆಯ ಜನರ ಸಂಜೀವಿನಿ ಆಗಿದೆ. ಬಹುತೇಕ ಜಿಲ್ಲೆಯ ಜನರು ಜಿಲ್ಲಾ ಆಸ್ಪತ್ರೆಗೆ ಆಗಮಿಸುತ್ತಾರೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಆರೋಪ ಹಿಂದಿನಿಂದಲೂ ಕೇಳುತ್ತಿತ್ತು. ಆಸ್ಪತ್ರೆಯ ಜಿಲ್ಲಾ ಸರ್ಜನ್ ಅವರೇ ಲಂಚ ಪಡೆಯುವಾಗ ಗುರುವಾರ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕಾರವಾರದ ಜಿಲ್ಲಾ ಆಸ್ಪತ್ರೆಯ ಸರ್ಜನ್ ಆಗಿರುವ ಡಾ. ಶಿವಾನಂದ ಕುಡ್ತಲಕರ್ ಗುತ್ತಿಗೆದಾರರೊಬ್ಬರಿಂದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಆಸ್ಪತ್ರೆಯ ರೋಗಿಗಳಿಗೆ ಬೆಡ್ ಶೀಟ್, ಪೀಠೋಪಕರಣ ಖರೀದಿಗೆ 3.43 ಲಕ್ಷದ ಟೆಂಡರ್ ಕರೆಯಲಾಗಿತ್ತು. ಅಂಕೋಲಾದ ವಿಶಾಲ್ ಫರ್ನಿಚರ್ ಎನ್ನುವ ಸಂಸ್ಥೆಯ ಮಾಲಿಕ ಮೌಸೀನ್ ಅಹಮ್ಮದ್ ಶೇಖ್ ಎನ್ನುವವರಿಗೆ ಈ ಟೆಂಡರ್ ಆಗಿತ್ತು. ಟೆಂಡರ್ ಹಣ ಬಿಡುಗಡೆ ಮಾಡಲು ಕುಡ್ತಲಕರ್ 75,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಗುರುವಾರ 30,000 ರೂ. ಹಣ ಪಡೆಯುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕುಡ್ತಲಕರ್ 75,000 ರೂ. ಹಣ ಕೊಡದೇ ಇದ್ದರೆ ಯಾವುದೇ ಕಾರಣಕ್ಕೂ ಟೆಂಡರ್​​ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಹೇಳಿದ್ದರು ಎಂಬ ಆರೋಪ ಇದೆ. ಬುಧವಾರ ರಾತ್ರಿ ಮನೆಗೆ ಕರೆಸಿ ಕೇಳಿದ್ದಕ್ಕೆ ಗುತ್ತಿಗೆದಾರರು 20,000 ರೂಪಾಯಿ ಕೊಟ್ಟಿದ್ದರು. ಆದರೆ, ಇನ್ನೂ ಹಣ ಬೇಕೆಂದು ಪಿಡಿಸುತ್ತಿದ್ದುದಕ್ಕೆ ಗುರುವಾರ 30 ಸಾವಿರ ರೂಪಾಯಿ ಕಚೇರಿಯಲ್ಲಿಯೇ ಕೊಡಲು ತೆರಳಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್​ಪಿ ಕುಮಾರಚಂದ್ರ ನೇತೃತ್ವದಲ್ಲಿ ದಾಳಿ ನಡೆಸಿ ಕುಡ್ತಲಕರ್​ರನ್ನು ಬಂಧಿಸಲಾಗಿದೆ.

ಇದನ್ನೂ ಓದಿ
ನಾಯಕತ್ವ ಬದಲಾವಣೆ ಇಲ್ಲ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಸಂದೇಶ
ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಮತ್ತೆ ರಸ್ತೆಗಿಳಿದ ಬೌನ್ಸ್ ಇವಿ ಸ್ಕೂಟರ್
ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ
ಮೈಸೂರು: ನಡು ರಸ್ತೆಯಲ್ಲೇ ಮಹಿಳೆಯರು, ಯುವಕನ ಮೇಲೆ ಮಾರಣಾಂತಿಕ ದಾಳಿ

ಪತ್ನಿ ತಾಳಿ ಅಡವಿಟ್ಟು ಹಣ ಕೊಟ್ಟಿದ್ದ ಗುತ್ತಿಗೆದಾರ

ಶಿವಾನಂದ ಕುಡ್ತಲಕರ್ ಕಳೆದ 15 ವರ್ಷದಿಂದ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದು ಇವರ ವಿರುದ್ಧ ಭ್ರಷ್ಟಾಚಾರದ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು. ಈ ಹಿಂದೆ ಇದೇ ಗುತ್ತಿಗೆದಾರ 16 ಲಕ್ಷ ರೂಪಾಯಿ ಟೆಂಡರ್ ಪಡೆದಾಗ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕಾಟ ತಡೆಲಾಗದೆ ಪತ್ನಿಯ ಮಾಂಗಲ್ಯ ಅಡ ಇಟ್ಟು ಗುತ್ತಿಗೆದಾರ ಹಣ ಕೊಟ್ಟಿದ್ದರು ಎನ್ನಲಾಗಿದೆ. ಸದ್ಯ ವೈದ್ಯ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಕ್ಕೆ ಸಾರ್ವಜನಿಕರು ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ: ಶಿರಸಿ ಪೈಪ್ ಕಳ್ಳತನ ಕೇಸ್​: ನಗರಸಭೆ ಸದಸ್ಯರು-ಅಧಿಕಾರಿಗಳೇ ಕಳ್ಳರು, ತನಿಖೆಯಲ್ಲಿ ದೃಢ

ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಗುಣಮಟ್ಟದ ಆರೋಗ್ಯ ವ್ಯವಸ್ಥೆ ಸಿಗಲು ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತದೆ. ಆದರೆ ಲಂಚಬಾಕ ಕೆಲ ವೈದ್ಯರು ಮಾನವೀಯತೆ ಮರೆತು ಹಣ ಮಾಡುತ್ತಿದ್ದು, ಸರ್ಜನ್ ಕುಡ್ತಲಕರ್ ಬಂಧನ ಲಂಚ ಪಡೆಯುವ ಇತರ ವೈದ್ಯರಿಗೂ ಪಾಠ ಆದಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ