ರೈತರ ಜಮೀನು ಕಬಳಿಸಲು ಅಧಿಕಾರಿಗಳಿಂದಲೇ ಸಂಚು?: ಪಹಣಿ ಪತ್ರದಲ್ಲಿ ರಾತ್ರೋ ರಾತ್ರಿ ಇಳಿಕೆ ಕಂಡ ಜಾಗದ ವಿಸ್ತೀರ್ಣ!

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ 70 ವರ್ಷಗಳಿಂದ ಉಳುಮೆ ಮಾಡುತ್ತಿದ್ದ 25ಕ್ಕೂ ಹೆಚ್ಚು ರೈತರ ಜಮೀನಿನ ಪಹಣಿ (RTC) ವಿಸ್ತೀರ್ಣವು ರಾತ್ರೋರಾತ್ರಿ ಕಡಿಮೆಯಾಗಿದ್ದು, ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಜಮೀನು ಕಬಳಿಕೆಯ ಗಂಭೀರ ಆರೋಪ ಕೇಳಿಬಂದಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯ ಬಾಗಿಲು ತಟ್ಟಿದ್ದು, ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ರೈತರ ಜಮೀನು ಕಬಳಿಸಲು ಅಧಿಕಾರಿಗಳಿಂದಲೇ ಸಂಚು?: ಪಹಣಿ ಪತ್ರದಲ್ಲಿ ರಾತ್ರೋ ರಾತ್ರಿ ಇಳಿಕೆ ಕಂಡ ಜಾಗದ ವಿಸ್ತೀರ್ಣ!
ಸಂತ್ರಸ್ತ ರೈತರು
Image Credit source: Tv9 Kannada
Edited By:

Updated on: Aug 05, 2026 | 7:20 PM

ಮುಖ್ಯಾಂಶಗಳು

  • ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ
  • ರೈತರ ಜಮೀನು ಕಬಳಿಸಲು ಸಂಚು ನಡೆಸಿರುವ ಬಗ್ಗೆ ದೂರು
  • ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲು ಹತ್ತಿರುವ ದಾಂಡೇಲಿಯ ರೈತರು

ದಾಂಡೇಲಿ, ಆಗಸ್ಟ್​​ 05: ಇಷ್ಟು ವರ್ಷಗಳ ಕಾಲ ಕುಟುಂಬಕ್ಕೆ ಆಧಾರವಾಗಿದ್ದ ಜಮೀನಿನ ಪಹಣಿ ಪತ್ರದಲ್ಲಿ ರಾತ್ರೋರಾತ್ರಿ ವಿಸ್ತೀರ್ಣ ಕಡಿಮೆ ಆಗಿ ನಮೂದಾಗಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಕೇಳಿಬಂದಿದೆ. ಕಳೆದ 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ ಜಮೀನಿನ ದಾಖಲೆ ಕಂಡು ಅನ್ನದಾತರಿಗೆ ತೀವ್ರ ಆಘಾತವಾಗಿದ್ದು, ಕಾಲುವೆ ಪಕ್ಕದ ಜಮೀನು ಅತಿಕ್ರಮಣ ಮಾಡಲು ನೀರಾವರಿ ಇಲಾಖೆಯ ಅಧಿಕಾರಿಗಳೇ ಈ ರೀತಿ ಸಂಚು ರೂಪಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ತಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದಾರೆ.

ಜಮೀನಿನ ಮಾಲೀಕತ್ವದ ಬಗ್ಗೆ ಆತಂಕ

ಸ್ಥಳೀಯರು ಹೇಳುವ ಪ್ರಕಾರ, ಒಂದೇ ರಾತ್ರಿಯಲ್ಲಿ ಕಾಲುವೆ ಪಕ್ಕ ಜಮೀನು ಹೊಂದಿರುವ ಸುಮಾರು 25ಕ್ಕೂ ಹೆಚ್ಚು ರೈತರ ಪಹಣಿಯಲ್ಲಿ ಈ ರೀತಿ ಆಗಿದೆ. ರೈತರ ಪಹಣಿಯಲ್ಲಿ ಜಮೀನಿನ ವಿಸ್ತೀರ್ಣ ಕಡಿಮೆ ಮಾಡಿ, ಇಲಾಖೆಯ ಹೆಸರನ್ನು ದಾಖಲಿಸಲಾಗಿದೆ. ಸಾಲದ್ದಕ್ಕೆ ನೀರಾವರಿ ಕಾಲುವೆ ಪಕ್ಕದ ಜಮೀನು ಸಣ್ಣ ನೀರಾವರಿ ಇಲಾಖೆಗೆ ಸೇರಿದೆ ಎಂದು ನೋಟಿಸ್ ಕೂಡ ನೀಡಲಾಗಿದ್ದು, ಇದರಿಂದಾಗಿ ತಮ್ಮದೇ ಜಮೀನಿನ ಮಾಲೀಕತ್ವದ ಬಗ್ಗೆ ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಅಧಿಕಾರಿಗಳ ಕೈವಾಡ ಇದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್: ಪಟ್ಟಿಯಲ್ಲಿ ಹೆಸರಿದ್ದರೂ ಮಂಕಾಳು ವೈದ್ಯಗೆ ತಪ್ಪಿದ ಮಂತ್ರಿಗಿರಿ; ಟೈಪಿಂಗ್ ಮಿಸ್ಟೇಕ್ ಎಂದ ಎಐಸಿಸಿ!

ಉಗ್ರ ಹೋರಾಟದ ಎಚ್ಚರಿಕೆ

ವಿಚಿತ್ರ ಅಂದರೆ ಇಲ್ಲಿ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಪರಿಹಾರವನ್ನೂ ನೀಡಲಾಗಿಲ್ಲ. ಆದರೆ ರೈತರ ಹೆಸರಿನಲ್ಲಿದ್ದ ಜಮೀನು ಮಾತ್ರ ಪಹಣಿಯಲ್ಲಿ ಮಾಯವಾಗಿದೆ. ಹೀಗಾಗಿ ಇದೇ ಜಮೀನಿನ ದಾಖಲೆ ಆಧಾರದಲ್ಲಿ ಬ್ಯಾಂಕ್‌ಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದ ರೈತರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಹಣಿಯಲ್ಲಿ ಜಮೀನಿನ ವಿಸ್ತೀರ್ಣ ಕಡಿಮೆಯಾಗಿರುವ ಕಾರಣ ಸಾಲ ಮರುಪಾವತಿಗೆ ಬ್ಯಾಂಕ್‌ಗಳು ಒತ್ತಡ ಹೇರುವ ಭೀತಿಯೂ ಎದುರಾಗಿದೆ. ಅಧಿಕಾರಿಗಳ ಈ ಕ್ರಮದಿಂದ ಕಂಗಾಲಾದ ರೈತರು ಜಿಲ್ಲಾಧಿಕಾರಿ ಕಚೇರಿಗೆ ದೂರು ಸಲ್ಲಿಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಪಹಣಿಯಲ್ಲಿನ ತಪ್ಪು ದಾಖಲೆಯನ್ನು ಕೂಡಲೇ ಸರಿಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:08 pm, Wed, 5 August 26

Loading...
Unable to load recommendations.
Follow Us