ಪೋಸ್ಟಿಂಗ್‌ಗಾಗಿ ಲಕ್ಷಾಂತರ ರೂ ಡೀಲ್: ಪಿಎಸ್‌ಐಗಳ ಆಡಿಯೋ ವೈರಲ್​​; ಮೂವರ ತಲೆದಂಡ

PSI Posting Viral Audio: ಹಳಿಯಾಳ PSI ಪೋಸ್ಟಿಂಗ್‌ಗೆ ಹಣದ ಡೀಲ್ ಬಗ್ಗೆ ಆಡಿಯೋ ವೈರಲ್ ಆಗಿದ್ದು, ಮೂವರು PSIಗಳ ಅಮಾನತಿಗೆ ಕಾರಣವಾಗಿದೆ. ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರ, ಮೇಲಾಧಿಕಾರಿಗಳಿಗೆ ತಿಂಗಳು ಹಪ್ತಾ ವಸೂಲಿ ಆರೋಪಗಳು ಕೇಳಿಬಂದಿವೆ. ಸದ್ಯ ಈ ಪ್ರಕರಣದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪೋಸ್ಟಿಂಗ್‌ಗಾಗಿ ಲಕ್ಷಾಂತರ ರೂ ಡೀಲ್: ಪಿಎಸ್‌ಐಗಳ ಆಡಿಯೋ ವೈರಲ್​​; ಮೂವರ ತಲೆದಂಡ
ಮೂವರು ಪಿಎಸ್ಐಗಳ ಅಮಾನತು
Image Credit source: tv9 kannada
Edited By:

Updated on: Aug 31, 2026 | 7:54 PM

ಕಾರವಾರ, ಆಗಸ್ಟ್​ 31: ಪೊಲೀಸ್ ಠಾಣೆಯ ಪ್ರಮುಖ ಪೋಸ್ಟಿಂಗ್‌ಗಾಗಿ (PSI Posting) ಲಕ್ಷಾಂತರ ರೂ ಡೀಲ್ ಹಾಗೂ ಮೇಲಾಧಿಕಾರಿಗಳಿಗೆ ಮಾಸಿಕ ಹಪ್ತಾ ನೀಡುವ ಕುರಿತು ಸ್ವತಃ ಪಿಎಸ್‌ಐಗಳೇ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ (uttara kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಕರ್ತವ್ಯಲೋಪ ಹಾಗೂ ಶಿಸ್ತು ಉಲ್ಲಂಘನೆ ಆರೋಪದಡಿ ಮೂವರು ಪಿಎಸ್‌ಐಗಳನ್ನು ಅಮಾನತುಗೊಳಿಸಿ (Suspension) ಆದೇಶಿಸಿದ್ದಾರೆ.

ಏನಿದು ಪ್ರಕರಣ?

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ‌ ಪೊಲೀಸ್ ಠಾಣೆಯ ಒಂದು ಹುದ್ದೆ ಇದೀಗ ಇಡೀ ಪೊಲೀಸ್ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದೆ. ಹಳಿಯಾಳ ಠಾಣೆಯ ಲಾ ಆ್ಯಂಡ್​ ಆರ್ಡರ್ ಪಿಎಸ್​ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್​ಐ ಕೃಷ್ಣ ಅರಿಕೆರೆ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್​ಐ ಆಗಿದ್ದ ಮುಂಡಗೋಡ ಪಿಎಸ್​ಐ ವಿನೋದ್ ರೆಡ್ಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.

ಇದನ್ನೂ ಓದಿ: ರಾಮನಗರದಲ್ಲಿ ಖೋಟಾ ನೋಟು ಜಾಲ ಪತ್ತೆ: ನಿರ್ಮಾಣ ಹಂತದ ಮನೆಯಲ್ಲಿ ನಡೆಯುತ್ತಿದ್ದ ದಂಧೆ

ಈ ಆಡಿಯೋವನ್ನು ಜೆಡಿಎಸ್​ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಆಡಿಯೋದಲ್ಲಿ ಪೊಲೀಸ್ ಇಲಾಖೆಯೊಳಗಿನ ಪೋಸ್ಟಿಂಗ್‌ಗಾಗಿ ಹಣ ನೀಡುವ ಬಗ್ಗೆ ಮಾತನಾಡಲಾಗಿದೆ. ಅಷ್ಟೇ ಅಲ್ಲದೆ ಮೇಲಾಧಿಕಾರಿಗಳಿಗೆ ತಿಂಗಳಾ ಹಪ್ತಾ ವಸೂಲಿ ಮಾಡಿಕೊಡಬೇಕು ಎಂಬ ವಿಚಾರವೂ ಚರ್ಚೆಯಾಗಿದೆ.

ಕಾನ್ಫರೆನ್ಸ್ ಕಾಲ್​​ನಲ್ಲಿ ಮಾತುಕತೆ 

ಇನ್ನು ಈ ಪ್ರಕರಣದ ಹಿನ್ನೆಲೆಯೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿಂದೆ ಹಳಿಯಾಳ ಪೊಲೀಸ್ ಠಾಣೆಯ PSI ಆಗಿದ್ದ ಬಸವರಾಜ್ ಮದನೂರು ಅವರನ್ನು ರೌಡಿಶೀಟರ್ ಮಚ್ ಮಂಜಾ ರಂಪಾಟದ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಲಾಗಿತ್ತು. ಸುಮಾರು ಎರಡು ತಿಂಗಳ ಹಿಂದೆ ನಡೆದ ಈ ಅಮಾನತಿನಿಂದ ಹಳಿಯಾಳ ಠಾಣೆಯ PSI ಹುದ್ದೆ ತೆರವಾಗಿತ್ತು. ಈ ಸ್ಥಾನಕ್ಕೆ ಈ ಹಿಂದೆ ಹಳಿಯಾಳ ಠಾಣೆಯ ಕ್ರೈಂ ವಿಭಾಗದಲ್ಲಿ PSI ಆಗಿ ಕೆಲಸ ಮಾಡಿದ್ದ ವಿನೋದ್ ರೆಡ್ಡಿ ಮತ್ತೆ ಬರಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ ಅಂತಿಮವಾಗಿ ದಾಂಡೇಲಿ ಠಾಣೆಯ PSI ಆಗಿದ್ದ ಕಿರಣ್ ಪಾಟೀಲ್ ಅವರನ್ನು ಹಳಿಯಾಳ ಠಾಣೆಗೆ ನಿಯೋಜನೆ ಮಾಡಲಾಗಿತ್ತು.

ಕಿರಣ್ ಪಾಟೀಲ್ ಹಳಿಯಾಳಕ್ಕೆ ನಿಯೋಜನೆಗೊಳ್ಳುವ ಮುನ್ನವೇ ವಿನೋದ್ ರೆಡ್ಡಿ, ಕೃಷ್ಣ ಅರಿಕೆರೆ ಹಾಗೂ ಕಿರಣ್ ಪಾಟೀಲ್ ನಡುವೆ ಕಾನ್ಫರೆನ್ಸ್ ಕಾಲ್‌ನಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಲ್ಲಿಂದಲೇ ಪೋಸ್ಟಿಂಗ್‌ಗಾಗಿ ಹಣದ ಡೀಲ್ ಆರೋಪದ ಆಡಿಯೋ ಹೊರಬಂದಿದೆ.

ಪ್ರಾಥಮಿಕ ತನಿಖೆ ಬೆನ್ನಲ್ಲೇ ಎಸ್ಪಿ ಕಠಿಣ ಕ್ರಮ

ಈ ಆಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಎಸ್.ಪಿ ದೀಪನ್ ತನಿಖೆಗೆ ಆದೇಶಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಲಾಯಿತು. ತನಿಖೆಯಲ್ಲಿ ಲಭ್ಯವಾದ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ಇದೀಗ ಹಳಿಯಾಳದ PSI ಕಿರಣ್ ಪಾಟೀಲ್, ಕ್ರೈಂ PSI ಕೃಷ್ಣ ಅರಿಕೆರೆ ಹಾಗೂ ಈ ಹಿಂದೆ ಹಳಿಯಾಳ PSI ಆಗಿದ್ದ ವಿನೋದ್ ರೆಡ್ಡಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇಲಾಖಾ ವಿಚಾರಣೆ ಬಾಕಿ ಇರಿಸಿ, ಮೂವರನ್ನೂ ಅಮಾನತು ಮಾಡಲಾಗಿದೆ.

ರಾಜಕೀಯ ವಲಯದಲ್ಲೂ ಕಿಡಿ

ಇತ್ತ ಈ ಆಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಜೆಡಿಎಸ್, ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ವರ್ತನೆ ಹಾಗೂ ಪೊಲೀಸ್ ಇಲಾಖೆಯಲ್ಲಿನ ಪೋಸ್ಟಿಂಗ್ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ಇದನ್ನೂ ಓದಿ: ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗಾವಣೆ, ಟಿವಿ9 ವರದಿ ಬೆನ್ನಲ್ಲೇ ಕ್ರಮ

ಒಟ್ಟಿನಲ್ಲಿ‌ ಖಾಕಿ ತೊಟ್ಟ ಅಧಿಕಾರಿಗಳೇ ಪೋಸ್ಟಿಂಗ್‌ಗಾಗಿ ಹಣದ ಡೀಲ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಡಿಯೋದಲ್ಲಿನ ಧ್ವನಿ ಯಾರದು? ಹಣದ ವ್ಯವಹಾರ ನಿಜವಾಗಿಯೂ ನಡೆದಿತ್ತಾ? ಮೇಲಾಧಿಕಾರಿಗಳಿಗೆ ತಿಂಗಳು ಹಪ್ತಾ ನೀಡುವ ಆರೋಪದ ಸತ್ಯಾಸತ್ಯತೆ ಏನು? ಇದಕ್ಕೆಲ್ಲಾ ಇಲಾಖಾ ವಿಚಾರಣೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us