ಪುರಾಣ ಪ್ರಸಿದ್ದಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಿಗೆ ಹಣ ಕಟ್ಟುವಂತೆ ಆದಾಯ ಇಲಾಖೆ ನೋಟಿಸ್; ಎಷ್ಟು ಗೊತ್ತಾ?
ಪುರಾಣ ಪ್ರಸಿದ್ದಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕೊಟ್ಟಿದೆ. ಸುಮಾರು 1.38 ಕೋಟಿ ರೂಪಾಯಿ ಆದಾಯ ತೆರಿಗೆ ಹಣವನ್ನು ಕಟ್ಟುವಂತೆ ನೋಟಿಸ್ ಕೊಟ್ಟು ನಾಲ್ಕು ತಿಂಗಳು ಕಳೆದರೂ, ಇದುವರೆಗೂ ತೆರಿಗೆ ಕಟ್ಟದೆ, ಆಡಿಟ್ ಸಮಸ್ಯೆ ಆಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಬೂಬು ನೀಡುತ್ತಿದ್ದಾರೆ.
ಉತ್ತರ ಕನ್ನಡ, ಜ.27: ಶಿವನ ಆತ್ಮ ಲಿಂಗವಿರುವ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ (gokarna Mahabaleshwar Temple) ಕ್ಕೆ ಪ್ರತಿನಿತ್ಯ ದೇಶ-ವಿದೇಶದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇನ್ನು ದೇವಸ್ಥಾನದ ಆಡಳಿತ ವಿವಾದ ಸುಪ್ರೀಂ ಕೋರ್ಟ್ವರೆಗೆ ಹೋಗಿದ್ದು ಸದ್ಯ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ಅಡಿಯಲ್ಲಿ ಇರುವ ಆಡಳಿತ ಮಂಡಳಿ ಕೈಯಲ್ಲಿ ದೇವಸ್ಥಾನ ಇದೆ. ಸದ್ಯ ಇದೇ ಮಹಾಬಲೇಶ್ವರ ದೇವಸ್ಥಾನಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ದೇವಸ್ಥಾನದಿಂದ ಸುಮಾರು 1.38 ಕೋಟಿ ರೂ. ಆದಾಯ ತೆರಿಗೆ ಹಣವನ್ನು ಕಟ್ಟುವಂತೆ ಆಡಳಿತ ಮಂಡಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಇನ್ನು ಆದಾಯ ತೆರಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದೇವಸ್ಥಾನದ ಮೇಲ್ವಿಚಾರಣಾ ಸಮಿತಿಯ ಸದಸ್ಯರು ಆನ್‌ಲೈನ್ ಮೂಲಕ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ 2008 ರಿಂದ ಪ್ರಸ್ತುತ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಲೆಕ್ಕ ಪರಿಶೋಧಕರನ್ನು ನೇಮಿಸಲು ನಿರ್ಧರಿಸಲಾಗಿದ್ದು, ಅವರು ನೀಡಿದ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಂಡಿದ್ದರು.
ಇದನ್ನೂ ಓದಿ:ಗೋಕರ್ಣ ಮಹಾಬಲೇಶ್ವರ ದೇಗುಲ ಆಡಳಿ ನಿರ್ವಹಣೆ ವಿವಾದ: ರಾಜ್ಯ ಸರ್ಕಾರ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಇತ್ತ ದೇವಸ್ಥಾನದ ಆಡಳಿತವನ್ನ 2015-16ನೇ ಸಾಲಿನಲ್ಲಿ ರಾಮಚಂದ್ರಾಪುರ ಮಠ ನಡೆಸುತ್ತಿತ್ತು. ಆ ಸಂದರ್ಭದಲ್ಲಿ ಹಣಕಾಸಿನ ವ್ಯವಹಾರದಲ್ಲಿ ವ್ಯತ್ಯಯ ಕಂಡು ಬಂದ ಕಾರಣ ಆಡಳಿತ ಮಂಡಳಿಗೆ ಆದಾಯ ತೆರಿಗೆ ಇಲಾಖೆ ತೆರಿಗೆ ಹಣವನ್ನ ಕಟ್ಟುವಂತೆ ನೋಟಿಸ್ ನೀಡಿದೆ. ಇನ್ನು ಆದಾಯ ತೆರಿಗೆ ಇಲಾಖೆ ತಿಳಿಸಿದ ತೆರಿಗೆ ಹಣ ಕಟ್ಟುವ ವರೆಗೆ ಇಲಾಖೆಗೆ ದಂಡದ ಮೊತ್ತದ ಶೇ.20 ರಷ್ಟು ಪಾವತಿಸುವಂತೆ ಸೂಚಿಸಿತ್ತು. ಇಷ್ಟೆಲ್ಲಾ ಸೂಚನೆ ಕೊಟ್ಟಿದ್ರೂ ಎಚ್ಚೆತ್ತ ಕೊಳ್ಳದೆ ಇದುವರೆಗೂ ಆದಾಯ ತೆರಿಗೆ ನೋಟಿಸ್ ಬಗ್ಗೆ ಆಡಳಿತ ಮಂಡಳಿ ತಲೆ ಕೆಂಡಿಸಿಕೊಂಡಿಲ್ಲ.
ಒಟ್ಟಿನಲ್ಲಿ ಐತಿಹಾಸಿಕ ಪ್ರಸಿದ್ದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಆದಾಯ ತೆರಿಗೆ ನೋಟಿಸ್ ನೀಡಿದ ವಿಚಾರ ಇದೀಗ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದು ದೇವಸ್ಥಾನ ಆಡಳಿತ ಮಂಡಳಿ ಈ ಬಗ್ಗೆ ಯಾವ ನಿಲುವು ತೆಗೆದುಕೊಳ್ಳಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ