ಕುಸಿಯುವ ಹಂತಕ್ಕೆ ತಲುಪಿದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ; ನವೀಕರಣಕ್ಕೆ ಬೇಕಿದೆ ಪುರಾತತ್ವ ಇಲಾಖೆಯ ಅನುಮತಿ
ದಕ್ಷಿಣ ಕಾಶಿ ಎಂದೆ ಪ್ರಸಿದ್ದ ಪಡೆದಿರುವ ಗೋಕರ್ಣದ ಮಹಾಬಲೆಶ್ವರ ದೇವಸ್ಥಾನದ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ. ಶತಮಾನಗಳ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನದ ಕಟ್ಟಡ ನವೀಕರಣಕ್ಕೆ ಪುರಾತತ್ವ ಇಲಾಖೆಯ ಅನುಮತಿ ಬೇಕಿದೆ. ಸದ್ಯ ಭಕ್ತರು ಭಯದಲ್ಲೇ ದೇವರ ದರ್ಶನ ಪಡೆಯುವಂತಾಗಿದೆ.
ಉತ್ತರ ಕನ್ನಡ, ಡಿ.13: ಗೋಕರ್ಣ ಮಹಾಬಲೇಶ್ವರ ದೇವಸ್ಥಾನ (Gokarna Mahabaleshwar Temple) ಎಂದರೇ ಶಿವಭಕ್ತರಿಗೆ ಪುಣ್ಯ ಕ್ಷೇತ್ರ. 11 ನೇ ಶತಮಾನದ ಪೂರ್ವದಲ್ಲೇ ನಿರ್ಮಿತವಾಯಿತು ಎಂಬ ಐತಿಹ್ಯವುಳ್ಳ ಈ ದೇವಸ್ಥಾನ, ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿದೆ. ಈ ಕ್ಷೇತ್ರಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದ್ರೆ, 18 ನೇ ಶತಮಾನದಲ್ಲಿ ಬ್ರಿಟೀಷರಿಂದ ಪುನರ್ ನಿರ್ಮಿಸಿದ ಚಂದ್ರ ಶಾಲೆಯ ದ್ವಾರದ ಭಾಗ ಹಲವು ಭಾಗಗಳು ಶಿಥಿಲಾವಸ್ತೆ ತಲುಪಿದ್ದು, ಇದೀಗ ಯಾವ ಸಂದರ್ಭದಲ್ಲಿಯಾದರೂ ಬೀಳುವ ಹಂತದಲ್ಲಿದೆ.
ಆಡಳಿತ ಮಂಡಳಿ ಶೀಘ್ರ ಸರಿಪಡಿಸಬೇಕು ಎಂದು ಭಕ್ತರ ಆಗ್ರಹ
ಮಹಾಬಲೇಶ್ವರ ದೇವಸ್ಥಾನಕ್ಕೆ ಎರಡು ದ್ವಾರಗಳಿದ್ದು, ಭಕ್ತರು ದಕ್ಷಿಣ ದ್ವಾರ ಹಾಗೂ ಪಶ್ಚಿಮ ದ್ವಾರದ ಮೂಲಕ ದೇವರ ದರ್ಶನ ಮಾಡಿ ಆತ್ಮಲಿಂಗ ಪೂಜೆಗೈಯುತ್ತಾರೆ. ಆದ್ರೆ, ದಕ್ಷಿಣ ದ್ವಾರದಲ್ಲಿ ಪ್ರವೇಶಿಸಿ ಆತ್ಮಲಿಂಗ ಪೂಜೆಗೆ ತೆರಳಿದರೇ ಪುಣ್ಯ ಹೆಚ್ಚು ಎಂಬ ನಂಬಿಕೆಯಿದೆಯೋ, ಆ ದ್ವಾರದ ಚಾವಣಿಯೇ ಬೀಳುವ ಹಂತ ತಲುಪಿದೆ. ಚಾವಣಿಯ ಮೇಲ್ಭಾಗದಲ್ಲಿ ಗೋಡೆಗಳು, ನೆಲಹಾಸುವಿನಲ್ಲಿ ದೊಡ್ಡ ದೊಡ್ಡ ಬಿರುಕು ಮೂಡಿದೆ. ಗೋಡೆಯ ಒಂದು ಭಾಗ ಕಿತ್ತು ಬಿದ್ದಿದ್ದು, ನೆಲಹಾಸಿನ ಬಾರಕ್ಕೆ ಕಂಬದ ಬಳಿ ಒಂದು ಭಾಗ ಕುಸಿದು ಬೀಳುವ ಹಂತ ತಲುಪಿದೆ. ಇದೇ ಭಾಗದಲ್ಲಿ ಪೊಲೀಸ್ ಉಪಠಾಣೆ ಸಹ ಇದೆ. ಮುಂಭಾಗದ ದಕ್ಷಿಣ ದ್ವಾರದಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಸಾಗುತಿದ್ದು, ಒಂದು ವೇಳೆ ಕುಸಿದು ಬಿದ್ದರೇ ಸಾವು- ನೋವು ಸಂಭವಿಸುವ ಆತಂಕವಿದೆ. ಹೀಗಾಗಿ ಅವಘಡ ಸಂಭವಿಸುವ ಮುಂಚೆ ಶೀಘ್ರ ಆಡಳಿತ ಮಂಡಳಿ ಸರಿಪಡಿಸಬೇಕು ಎಂದು ಭಕ್ತರಾದ ಪ್ರವೀಣ್ ಎಂಬುವವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಧಾರವಾಡದಲ್ಲಿ ಮತ್ತೆ ಮುನ್ನೆಲೆಗೆ ಬಂದ ಧರ್ಮ ದಂಗಲ್; ದೇವಸ್ಥಾನಗಳಲ್ಲಿ ಅನ್ಯ ಧರ್ಮದವರ ವ್ಯಾಪಾರ ನಿಷೇಧಕ್ಕೆ ಆಗ್ರಹ
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಪುರಾತತ್ವ ಇಲಾಖೆಗೆ ಸೇರುತ್ತದೆ. ಇಲ್ಲಿಯ ಯಾವ ವಸ್ತುಗಳನ್ನು ಸರಿಪಡಿಸಬೇಕು ಅಥವಾ ಹೊಸದಾಗಿ ನಿರ್ಮಿಸಬೇಕು ಎಂದಾದರೇ ಪುರಾತತ್ವ ಇಲಾಖೆ ಅನುಮತಿ ಅವಶ್ಯ. ಆದ್ರೆ, ಹೀಗೆ ಬಿರುಕು ಬಿಟ್ಟರೂ ಪುರಾತತ್ವ ಇಲಾಖೆ ಮಾತ್ರ ಸರಿಪಡಿಸುವ ಗೋಜಿಗೆ ಹೋಗದೇ ನಿರ್ಲಕ್ಷಿಸಿದೆ. ಇನ್ನು ಜಿಲ್ಲಾಡಳಿತ ಸಹ ಈ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದೆ. ಇದಲ್ಲದೇ ಹಲವು ಭಾಗದಲ್ಲಿ ಶಿಥಿಲಗೊಂಡಿದ್ದು, ಕೆಲವು ಭಾಗ ಹೊಸದಾಗಿ ನಿರ್ಮಿಸಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಹೀಗಾಗಿ ಕೇಂದ್ರದ ಪುರಾತತ್ವ ಇಲಾಖೆಯಿಂದ ಅನುಮತಿಗಾಗಿ ಕಾಯುತ್ತಿದೆ. ಸದ್ಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ದಕ್ಷಿಣ ದ್ವಾರ ಭಾಗವು ಯಾವ ಸಂದರ್ಭದಲ್ಲಾದರೂ ಬೀಳುವ ಆತಂಕ ವಿದ್ದು, ಶೀಘ್ರ ಸರಿಪಡಿಸದೇ ನಿರ್ಲಕ್ಷಿಸಿದಲ್ಲಿ ಅವಘಡ ಸಂಭವಿಸುವ ಸಾಧ್ಯತೆಗಳಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Wed, 13 December 23