ವಿದೇಶಿ ಸಿಮ್ ಬಳಸಿ ತರಕಾರಿ ವ್ಯಾಪಾರಿಗೆ ಕರೆ ಮಾಡಿ ಮಗಳ ಅಶ್ಲೀಲ ಫೋಟೋ ಹರಿಬಿಡುವುದಾಗಿ ಬೆದರಿಕೆ
ಭಟ್ಕಳದ ತರಕಾರಿ ವ್ಯಾಪಾರಿಯೊಬ್ಬರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿದೇಶಿ ಸಿಮ್ ಕಾರ್ಡ್ ಬಳಸಿ ಬೆದರಿಕೆ ಹಾಕಿದ್ದರು. ಪೊಲೀಸರು ಮೊಬೈಲ್ ಟ್ರ್ಯಾಕಿಂಗ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರವಾರ, ಆಗಸ್ಟ್ 24: ತರಕಾರಿ ವ್ಯಾಪಾರಿಯನ್ನು ಹೆದರಿಸಿ 20 ಲಕ್ಷ ರೂ. ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ (Bhatkal) ಶಹರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಭಟ್ಟಗಾಂವ್, ಕಿದ್ವಾಯಿ ರಸ್ತೆಯ ನಿವಾಸಿ ವಿದ್ಯಾಧಿ ಅನ್ವರಭಾಷ (57) ಅಂಗಡಿಯಲ್ಲಿ ಇದ್ದಾಗ ಆಗಸ್ಟ್ 16ರ ರಾತ್ರಿ ಓರ್ವ ಅಪರಿಚಿತನಿಂದ ಕರೆ ಬಂದಿದೆ. “ನಿನ್ನ ಮಗಳ ಖಾಸಗಿ ಫೋಟೋ, ವೀಡಿಯೋ ನನ್ನ ಬಳಿ ಇದೆ. ತಕ್ಷಣ 20 ಲಕ್ಷ ಕೊಡಬೇಕು, ಇಲ್ಲವಾದರೆ ಎಲ್ಲರಿಗೂ ಕಳುಹಿಸಿ ನಿನ್ನ ಮಾನ ಹಾಳು ಮಾಡುತ್ತೇನೆ” ಎದು ಬೆದರಿಕೆ ಹಾಕಿದ್ದನು.
ನಂತರ ಆಗಸ್ಟ್ 18 ಮತ್ತು 19ರಂದು ವ್ಯಾಪಾರಿಯ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ, “15 ಲಕ್ಷ ಆದರೂ ಕೊಡಬೇಕು” ಎಂದು ಹೇಳಿದ್ದಾನೆ. ಬೆದರಿಕೆಗಳಿಂದ ಕಂಗಾಲಾದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಮ್. ಹಾಗೂ ಪಿ.ಎಸ್.ಐ ನವೀನ್ ಎಸ್. ನಾಯ್ಕ ನೇತೃತ್ವದ ತಂಡ ತನಿಖೆಗೆ ಇಳಿಯಿತು. ಪೊಲೀಸರ ತಂಡ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿದಾಗ ಭಟ್ಕಳದಲ್ಲೇ ಲೊಕೇಶನ್ ತೋರಿಸಿದೆ. ಬಳಿಕ, ಪೊಲೀಸರು ಭಟ್ಕಳ್ಗೆ ತೆರಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಪೈಪ್ ಕದ್ದ ಶಿರಸಿ ನಗರಸಭೆ ಸದಸ್ಯನನ್ನು ಲಾಕ್ ಮಾಡಿದ ಲೋಕಾಯುಕ್ತ
ಮೊಹಮ್ಮದ್ ಪಾರಿಸ್ (20), ಅರ್ಷದ್ (22), ಅಮನ್ (20) ಬಂಧಿತರು. ಆರೋಪಿಗಳು ವಿದೇಶಿ ಸಿಮ್ ಬಳಸಿ ಕರೆ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದರು. ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾರ್ಯಾಚರಣೆ ಮಹೇಶ್ ಎಂ.ಕೆ.ಮಾರ್ಗದರ್ಶನದಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಗಳಾದ ದಿನೇಶ ನಾಯಕ, ವಿನಾಯಕ ಪಾಟೀಲ್, ನಾಗರಾಜ ಮೊಗೇರ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗುಣಸಿ ಮತ್ತು ಲೊಕೇಶ ಕತ್ತಿ, ಮಹೇಶ ಅಮಗೋತ ರಾಘವೇಂದ್ರ ಗೌಡ, ಜಗದೀಶ ನಾಯ್ಕ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ಬಬನ್ ಮತ್ತು ಉದಯ ಗುಣಗಾ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




