ಎಣ್ಣೆ, ಬತ್ತಿ ಇಲ್ಲದೇ 45 ವರ್ಷದಿಂದ ಉರಿಯುತ್ತಿದ್ದ 3 ದೀಪಗಳು ಆರಿ ಹೋದವು: ಕೇಡು ಕಾದಿದ್ಯಾ?
ಎಣ್ಣೆ, ಬತ್ತಿ ಇಲ್ಲದೇ ಸತತ 45 ವರ್ಷಗಳಿಂದ ಉರಿಯುತ್ತಿದ್ದ ಪ್ರತಿಷ್ಠಿತ ಉತ್ತರ ಕನ್ನಡ ಜಿಲ್ಲೆಯ ದೀಪನಾಥೇಶ್ವರ ದೇವಾಲಯದ ಮೂರಕ್ಕೆ ಮೂರು ದೀಪಗಳು ಇದೀಗ ಏಕಾಏಕಿ ಆರಿ ಹೋಗಿವೆ. ಈ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಜನರು ಆತಂಕ ವ್ಯಕ್ತಪಡಿಸಿದ್ದಾರೆ. 45 ವರ್ಷಗಳಿಂದ ಉರಿಯುತ್ತಿದ್ದ ದೀಪಗಳು ಈಗ ದಿಢೀರ್ ಆರಿ ಹೋಗಿದ್ದರಿಂದ ಸಹಜವಾಗಿಯೇ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ರಾಜ್ಯವನ್ನಾಳುವವರಿಗೆ ಏನಾದರೂ ಕೇಡು, ಕಂಟಕ ಕಾದಿದ್ಯಾ ಎನ್ನುವ ಚರ್ಚೆಗಳು ಶುರುವಾಗಿವೆ. ಹಾಗಾದ್ರೆ, 45 ವರ್ಷದ ಹಿಂದೆ ಈ ದೀಪಗಳನ್ನು ಯಾರು ಯಾವಾಗ ಹಚ್ಚಿದ್ದರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕಾರವಾರ, (ಫೆಬ್ರವರಿ 07): ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದದಲ್ಲಿ ಮೂರು ದೀಪಗಳು ಯಾವುದೇ ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಅಂದರೆ 4 ದಶಕದಿಂದಲೂ ನಿರತಂರವಾಗಿ ಉರಿಯುತ್ತಿದ್ದವು. ಆದರೆ ಏನಾಯಿತೋ ಏನೋ ಗೊತ್ತಿಲ್ಲ. ಇದೀಗ ಏಕಾಏಕಿ ಮೂರಕ್ಕೆ ಮೂರು ದೀಪಗಳು ಒಮ್ಮೆಗೆ ಆರಿ ಹೋಗಿವೆ. ಇದರಿಂದ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ದೀಪಗಳು ಇದ್ದಾಗ ನಿತ್ಯ ಜನರು, ಇವುಗಳನ್ನು ನೋಡಲೆಂದೇ ದೇವಾಲಯಕ್ಕೆ ಬರುತ್ತಿದ್ದರು. ಆದ್ರೆ, ಈಗ ಏಕಾಏಕಿ ದೀಪಗಳು ಆರಿ ಹೋಗಿದ್ದರಿಂದ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ದೀಪ ಆರಿದ್ರೆ ರಾಜ್ಯವನ್ನಾಳುವ ರಾಜನಿಗೆ ಕೆಡಕು ಎಂಬ ನಂಬಿಕೆ ಇದೆ. ಹೀಗಾಗಿ ಈಗ ದೀಪ ಆರಿದ್ದರಿಂದ ರಾಜನಿಗೆ ಏನೋ ಕೆಡಕು ಕಾದಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಈ ದೀಪಗಳನ್ನು ಯಾರು, ಯಾವಾಗ ಹಚ್ಚಿದ್ರು?
ಚಿಗಳ್ಳಿ ಗ್ರಾಮದ ದೈವಜ್ಞ ಶಾರದಮ್ಮ ಎನ್ನುವರು 1979ರಲ್ಲಿ ಸೀಮೆ ಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಆದರೆ ಅದು ಒಂದು ದಿನ ಕಳೆದರೂ ಆರಿಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಇದರಿಂದ ಕುತೂಹಲಗೊಂಡ ಶಾರದಮ್ಮ, ಒಂದು ವರ್ಷದವರೆಗೆ ಕಾಯ್ದು ಮತ್ತೊಂದು ದೀಪವನ್ನು 1980ರಲ್ಲಿ ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು. 2ನೇ ದೀಪ ಹಚ್ಚಿದ 10-15 ದಿನಗಳ ನಂತರ ಮತ್ತೊಂದು 3ನೇ ದೀಪ ಬೆಳಗಿಸಿದರು. ಪವಾಡ ಎಂಬಂತೆ 3ನೇ ದೀಪ ಸೇರಿ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು.
ಬಳಿಕ ಈ ದೀಪಗಳ ಉಸ್ತುವಾರಿಯನ್ನು ಅರ್ಚಕ ವೆಂಕಡೇಶ್ ಎಂಬುವವರು ನೋಡಿಕೊಳ್ಳುತ್ತಿದ್ದರು. ಆದ್ರೆ, ಅವರು 14 ದಿನದ ಹಿಂದೆ ಮೃತಪಟ್ಟಿದ್ದಾರೆ. ಈ ಸೂತಕದ ಹಿನ್ನಲೆಯಲ್ಲಿ ದೇವಸ್ಥಾನದ ಭಾಗಿಲು ಮುಚ್ಚಲಾಗಿತ್ತು. ಆದ್ರೆ, ಮೊನ್ನೇ ಬುಧವಾರ ದೇವಸ್ಥಾನದ ಬಾಗಿಲು ತೆರೆದಾಗ ಮೂರು ದೀಪಗಳು ಆರಿ ಹೋಗಿದ್ದವು. 1979ರಿಂದ 2025ರ ಫೆಬ್ರುವರಿವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಆರಿ ಹೋಗಿರುವುದು ಕಂಡುಬಂದಿದೆ. ಇದರಿಂದ ಮತ್ತಷ್ಟು ಆತಂಕಗೊಂಡ ಗ್ರಾಮಸ್ಥರು, ಕೆಡುಕಾಗುವ ಭಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿಸಿದ್ದಾರೆ. ಅಲ್ಲದೇ ಸಾರ್ವಜನಿಕರ ವೀಕ್ಷಣೆಗೂ ದೇವಸ್ಥಾನ ಪ್ರವೇಶ ನಿರ್ಬಂಧಿಸಿದ್ದಾರೆ.
Published On - 2:07 pm, Fri, 7 February 25