
ಕಾರವಾರ, ಜೂನ್ 30: ದೇಶದ ಹಲವೆಡೆ ಹಲವು ಉದ್ದೇಶಕ್ಕಾಗಿ ನಾಡಬಾಂಬ್‌ಗಳನ್ನು ಬಳಸುತ್ತಾರೆ. ಆದರೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ನಾಡಬಾಂಬ್ ತಯಾರಿಕೆ ಮತ್ತು ವಿಭಿನ್ನ ಬಳಕೆಯ ಸ್ಫೋಟಕ ಮಾಹಿತಿ ಸಿಕ್ಕಿದೆ. ಇತ್ತಿಚೆಗೆ ಉತ್ತರ ಕನ್ನಡ ಮೂಲದ ಪಾಗಲ್ ಪ್ರೇಮಿ ನಾಗೇಂದ್ರ ಪ್ರೇಯಸಿಗೆ ಚಾಕುವಿನಿಂದ ಇರಿದು, ತುಮಕೂರು ಬಳಿ ಕಾರಿನಲ್ಲಿ ಬಾಂಬ್ ಸ್ಫೋಟಿಸಿಕೊಂಡ ಘಟನೆಯ ಜಾಡು ಹಿಡಿದು ಹೊರಟ ಎಸ್ಐಟಿ ತಂಡ, ಮಲೆನಾಡು ಹಾಗೂ ಕರಾವಳಿಯ ದಟ್ಟ ಅರಣ್ಯದ ಒಳಗೆ ಅಡಗಿದ್ದ ನಾಡಬಾಂಬ್ , ಪೆಟ್ರೋಲ್ ಬಾಂಬ್ ಹಾಗೂ ಕಳ್ಳಬಂದೂಕು ತಯಾರಿಸುವ ಬೃಹತ್ ಜಾಲವನ್ನು ಪತ್ತೆಹಚ್ಚಿದ್ದು, ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿದೆ.
ಬಾಂಬ್ ಸ್ಫೋಟದ ತನಿಖೆ ತೀವ್ರಗೊಳಿಸಿರುವ ಪೊಲೀಸರು ಈವರೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುಮಾರು 60ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ ಸ್ಫೋಟದ ಪ್ರಮುಖ ಸೂತ್ರಧಾರಿ ನಾಗೇಂದ್ರಗೌಡನಿಗೆ ಸಹಕರಿಸಿದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಲ್ಲಿ ಇಬ್ಬರು ಅಂಕೋಲಾ ತಾಲೂಕಿನ ಸರಳಬೈಲ್ ಗ್ರಾಮದವರಾಗಿದ್ದು, ಒಬ್ಬ ನಾಗೇಂದ್ರಗೌಡನ ನಿಕಟ ಸಂಬಂಧಿ ಹಾಗೂ ಇನ್ನೊಬ್ಬ ಆತನ ಆಪ್ತ ಸ್ನೇಹಿತ ಎಂದು ಗುರುತಿಸಲಾಗಿದೆ. ಮೂರನೇ ವ್ಯಕ್ತಿಯನ್ನು ಹೊನ್ನಾವರ ತಾಲೂಕಿನ ಚಂದಾವರ ಮೂಲದವನೆಂದು ಗುರುತಿಸಲಾಗಿದ್ದು, ಸದ್ಯ ಇವರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬಾಂಬ್ ಪೂರೈಕೆಯ ಮೂಲ ಹಾಗೂ ಇದರ ಹಿಂದಿರುವ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಲು ಒಟ್ಟು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತುಮಕೂರು ಪೊಲೀಸ್ ತಂಡ, ಅಂಕೋಲಾ ಸಿಪಿಐ ತಂಡ ಹಾಗೂ ಗೋಕರ್ಣ ಸಿಪಿಐ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾಡಿನ ಪ್ರದೇಶಗಳು ಹಾಗೂ ಸಂಶಯಾಸ್ಪದ ಸ್ಥಳಗಳ ಮೇಲೆ ನಿಗಾ ಇಟ್ಟಿವೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ನಾಗೇಂದ್ರಗೌಡ ಬಾಂಬ್ ಖರೀದಿ ಮತ್ತು ಡೀಲಿಂಗ್ ವೇಳೆ ಅತ್ಯಂತ ಚಾಣಾಕ್ಷತನ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ. ಈತ ಬಾಂಬ್ ಖರೀದಿಸಿದವರೊಂದಿಗೆ ಎಲ್ಲೂ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿಲ್ಲ. ಪೊಲೀಸರಿಗೆ ಕಾಲ್ ಲಿಸ್ಟ್ ಸಿಗದಂತೆ ಮಾಡಲು ಖುದ್ದು ತಾನೇ ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದ ಎಂಬ ಆಘಾತಕಾರಿ ವಿಷಯ ಗೊತ್ತಾಗಿದೆ.
ಯಲ್ಲಾಪುರ ಹಾಗೂ ಹಳಿಯಾಳ ಭಾಗದ ದಟ್ಟ ಅರಣ್ಯದ ನಡುವೆ ಈ ನಾಡಬಾಂಬ್‌ಗಳನ್ನು ಅಕ್ರಮವಾಗಿ ತಯಾರಿಸಲಾಗುತ್ತಿದ್ದು, ಕೇವಲ 100 ರಿಂದ 300 ರೂಪಾಯಿಗಳ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ನೈಟ್ರೇಟ್ ಬಳಕೆಯ ಪ್ರಮಾಣದ ಮೇಲೆ ಈ ಬಾಂಬ್‌ಗಳ ತೀವ್ರತೆ ನಿರ್ಧಾರವಾಗುತ್ತದೆ. ಈ ಬಾಂಬ್ ಹಾಗೂ ಗನ್‌ಗಳನ್ನು ಪ್ರಮುಖವಾಗಿ ಪ್ರಾಣಿಗಳ ಬೇಟೆಗಾಗಿ ಬಳಸಲಾಗುತ್ತಿದೆ.
ಕೋಳಿಯ ಮಾಂಸದ ಒಳಗೆ ನಾಡಬಾಂಬ್ ಇಟ್ಟು ಕಾಡಿನ ಅಂಚಿನಲ್ಲಿ ಇಡಲಾಗುತ್ತದೆ. ಆಹಾರ ಅರಸಿ ಬರುವ ಕಾಡುಹಂದಿ ಇದನ್ನು ಅಗಿಯುತ್ತಿದ್ದಂತೆ ಒತ್ತಡಕ್ಕೆ ಸಿಲುಕಿ ಬಾಂಬ್ ಒಮ್ಮೆಲೆ ಬ್ಲಾಸ್ಟ್ ಆಗುತ್ತದೆ. ತಲೆ ಹಾಗೂ ಮುಖದ ಭಾಗ ಛಿದ್ರಗೊಂಡು ಹಂದಿ ಸ್ಥಳದಲ್ಲೇ ಸಾವನ್ನಪ್ಪುತ್ತದೆ. ಹೀಗೆ ಬೇಟೆಯಾಡಿದ ಒಂದು ಹಂದಿ ಕಳ್ಳಮಾರುಕಟ್ಟೆಯಲ್ಲಿ 7 ರಿಂದ 8 ಸಾವಿರ ರೂಪಾಯಿಗೆ ರಹಸ್ಯವಾಗಿ ಮಾರಾಟವಾಗುತ್ತದೆ.
ಇದನ್ನೂ ಓದಿ ಹುಚ್ಚಾಟ ಮೆರೆದು ದಾರುಣ ಅಂತ್ಯಕಂಡ ಪಾಗಲ್ ಪ್ರೇಮಿ: ನಾಗೇಂದ್ರಗೆ ಸ್ಫೋಟಕ ಸಿಕ್ಕಿದ್ದೇಗೆಂದು ಖಾಕಿ ತನಿಖೆ
ಪ್ಲಾಸ್ಟಿಕ್‌ನಲ್ಲಿ ಪೆಟ್ರೋಲ್ ಬಾಂಬ್ ಸುತ್ತಿ ನೀರಿನಾಳಕ್ಕೆ ಬಿಟ್ಟು ಬ್ಲಾಸ್ಟ್ ಮಾಡಲಾಗುತ್ತದೆ. ಈ ಸ್ಫೋಟದ ತೀವ್ರತೆಗೆ ನೂರಾರು ಮೀನುಗಳು ಸತ್ತು ಮೇಲೇಳುತ್ತವೆ ಅಥವಾ ಪ್ರಜ್ಞೆ ತಪ್ಪಿ ಬಲೆಗೆ ಬೀಳುತ್ತವೆ.
ಉಡಾ, ಕಾಡುಕೋಣ, ಕಡವೆ ಬೇಟೆಗೆ ನಾಡಬಂದೂಕು ಬಳಸಲಾಗುತ್ತಿದ್ದು, ಇತ್ತೀಚೆಗೆ ಪೊಲೀಸರ ದಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇವುಗಳನ್ನು ತೋಟ ಹಾಗೂ ಗದ್ದೆಗಳ ಮಣ್ಣಿನಲ್ಲಿ ಬಚ್ಚಿಡಲಾಗುತ್ತಿದೆ. ಸದ್ಯ ಪೊಲೀಸರು ಈ ಇಡೀ ಅಕ್ರಮ ಜಾಲದ ಬೇರು ಸವೆಯಲು ತನಿಖೆ ತೀವ್ರಗೊಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.