ಉತ್ತರ ಕನ್ನಡ: ಸರ್ಕಾರಕ್ಕೆ ಕೋಟಿಗಟ್ಟಲೆ ವಂಚಿಸಿದ ಅನಧಿಕೃತ ಪ್ರವಾಸೋದ್ಯಮ ಸಂಸ್ಥೆಗಳು; ಕೈಕಟ್ಟಿ ಕುಳಿತ ಜಿಲ್ಲಾಡಳಿತ
ಜಿಲ್ಲೆಗೆ ವರ್ಷದಲ್ಲಿ ಕೋಟಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಜೊತೆಗೆ ಪ್ರವಾಸೋದ್ಯಮ ಜಿಲ್ಲಾಡಳಿತಕ್ಕೆ ವರಮಾನದ ಮೂಲ ಕೂಡ. ಆದರೆ ಪ್ರವಾಸೋಧ್ಯಮದ ಹೆಸರಿನಲ್ಲಿ ಕೋಟಿಗಟ್ಟಲೇ ವರಮಾನ ಬಂದ್ರೂ ಜಿಲ್ಲಾಡಳಿತಕ್ಕೆ ವರಮಾನ ಕಟ್ಟದೇ ಹಲವು ಸಂಸ್ಥೆಗಳು ವಂಚಿಸುತ್ತಿದೆ.
ಉತ್ತರ ಕನ್ನಡ: ಜಿಲ್ಲೆಗೆ ಕಳೆದ ಒಂದು ವರ್ಷದಲ್ಲಿ ಕೋಟಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದರೆ ಪ್ರವಾಸೋದ್ಯಮ ಸಮಿತಿಗೆ ಪ್ರವಾಸಿಗರ ರಕ್ಷಣೆಗೆ ನೇಮಿಸಿದ ಲೈಪ್ ಗಾರ್ಡ್ಗಳು, ಪ್ರವಾಸಿ ಮಿತ್ರ ಸಿಬ್ಬಂದಿಗೆ ಸಂಬಳ ನೀಡಲು ಹಣವೇ ಇಲ್ಲ. ಜಿಲ್ಲೆಯ ಕರಾವಳಿ ಭಾಗದ ಮುರ್ಡೇಶ್ವರ, ಗೋಕರ್ಣ ,ಹೊನ್ನಾವರದ ಕಡಲತೀರಗಳು ಹಾಗೂ ಜೋಯಿಡಾ ತಾಲೂಕಿನ ದಾಂಡೇಲಿಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಬರುತಿದ್ದು, ಜಲಸಾಹಸ ಕ್ರೀಡೆಗಳು, ಸ್ಕೂಬಾ ಡೈವ್ ಮುಂತಾದ ಚಟುವಟಿಕೆಗಳು ನಡೆಯುತ್ತಿವೆ. ಇನ್ನು ಹೊಮ್ ಸ್ಟೇಗಳು ರೆಸಾರ್ಟ್ಗಳು ಸಾವಿರಾರು ಇವೆ. ಹೀಗಿರುವಾಗ ಜಲಸಾಹಸ ಕ್ರೀಡೆ ಆಯೋಜಿಸುವ ಸಂಸ್ಥೆಗಳು, ರೆಸಾರ್ಟ್ನವರು ಲಾಭದಲ್ಲಿ 20% ನ್ನು ಪ್ರವಾಸೋಧ್ಯಮ ಸಮಿತಿಗೆ ನೀಡಬೇಕು. ಆದರೆ ಜೋಯಿಡಾ ಮತ್ತು ದಾಂಡೇಲಿಯಲ್ಲಿ ನಡೆಯುವ ರಿವರ್ ರ್ಯಾಪ್ಟಿಂಗ್ ಹಾಗೂ ಇನ್ನಿತರ ಜಲಸಾಹಸ ಕ್ರೀಡೆಗಳು ನಿಯಮ ಭಾಹಿರವಾಗಿ ನಡೆದುಕೊಂಡು ಬಂದಿದ್ದು, ಪ್ರವಾಸೋದ್ಯಮ ಇಲಾಖೆಗೆ ಕಟ್ಟಬೇಕಾದ ಹಣವನ್ನೇ ಕಟ್ಟಿಲ್ಲ.
ಕರಾವಳಿ ತೀರ ಪ್ರದೇಶದಲ್ಲಿ ಜಲಸಾಹಸ ಚಟುವಟಿಕೆಯನ್ನು ಕೆಲವೇ ಕೆಲವು ಸಂಸ್ಥೆಗಳು ಅನುಮತಿ ಪಡೆದು ನಡೆಸಿದರೇ ಹಲವು ಸಂಸ್ಥೆಗಳು ಪರವಾನಿಗೆ ಪಡೆಯದೇ ನಡೆಸುತಿದ್ದು, ಪ್ರವಾಸಿಗರ ಸುರಕ್ಷತೆಯ ಬಗ್ಗೆ ಕ್ರಮ ತೆಗೆದುಕೊಳ್ಳದೇ ಪ್ರವಾಸಿಗರ ಜೀವದ ಜೊತೆ ಚಲ್ಲಾಟ ಆಡುತಿದ್ದಾರೆ. ಇನ್ನು ನಿಯಮ ಬಾಹಿರವಾಗಿ ಹೋಮ್ ಸ್ಟೇ ಹಾಗೂ ರೆಸಾರ್ಟ್ಗಳನ್ನು ನಡೆಸುವ ಮೂಲಕ ಸರ್ಕಾರದ ಬೋಕ್ಕಸಕ್ಕೆ ಕೋಟಿಗಟ್ಟಲೇ ಹಣವನ್ನು ಉಂಡೆ ನಾಮ ಹಾಕಲಾಗುತ್ತಿದೆ.
ಇನ್ನು ಜೋಯಿಡಾ ಮತ್ತು ದಾಂಡೇಲಿಯಲ್ಲಿ ಅನಧಿಕೃತ ರಿವರ್ ರ್ಯಾಪ್ಟಿಂಗ್, ಹೋಮ್ ಸ್ಟೇ, ರೆಸಾರ್ಟ್ಗಳು ಕರಾವಳಿ ಭಾಗದಲ್ಲಿ ಅನುಮತಿ ಪಡೆಯದೇ ಜಲಸಾಹಸ ಕ್ರೀಡೆ ನಡೆಸುತ್ತಿರುವ ಸಂಸ್ಥೆಗಳು ಇರುವ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಇದೀಗ ಮಾಹಿತಿ ಕಲೆಹಾಕುತ್ತಿದೆ . ಇದಲ್ಲದೇ ಸಿಬ್ಬಂದಿ ನೇಮಕ, ಜಲಸಾಹಸ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸುವ ಜೊತೆಗೆ ಆದಾಯ ನಷ್ಟವಾಗದಂತೆ ಆ್ಯಪ್ ನ್ನು ಸಿದ್ದಪಡಿಸುತಿದ್ದು, ಪ್ರವಾಸೋಧ್ಯಮ ಇಲಾಖೆಯ ಆ್ಯಪ್ ಮೂಲಕವೇ ಪ್ರವಾಸಿಗರು ಇನ್ನುಮುಂದೆ ಜಲಸಾಹಸ ಕ್ರೀಡೆಗೆ ನೊಂದಣಿ ಮಾಡಿಕೊಳ್ಳಬೇಕಿದೆ. ಈ ಮೂಲಕ ಕೋಟಿಗಟ್ಟಲೇ ಹಿಂದೆ ನಷ್ಟವಾದ ಹಣವನ್ನು ಸರಿದೂಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಇನ್ನು ಪ್ರವಾಸೋಧ್ಯಮಕ್ಕೆ ಸಂಬಂಧಿಸಿದ ಸಂಸ್ಥೆಗೆ ಫೆಬ್ರವರಿ 30 ರವರೆಗೆ ನೊಂದಣಿಗೆ ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ:ಉತ್ತರ ಕನ್ನಡ: ಪ್ರವಾಸಿಗರ ಜೀವ ಉಳಿಸುವ ಲೈಫ್ ಗಾರ್ಡ್ ಮೇಲೆಯೇ ಪ್ರವಾಸಿಗರಿಂದ ಹಲ್ಲೆ, ಕಾರಣವೇನು?
ಉಂಡುಹೋದ ಕೊಂಡುಹೋದ ಎನ್ನುವಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಸಂಸ್ಥೆಗಳು ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ವಂಚಿಸಿದ್ದಾರೆ. ಇನ್ನಾದರೂ ಎಚ್ಚೆತ್ತು ಸಂಬಂಧ ಪಟ್ಟ ಇಲಾಖೆ ಆಗುತ್ತಿರುವ ನಷ್ಟವನ್ನು ತಪ್ಪಿಸುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Sat, 28 January 23