ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಜೂನ್ 28ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಬಹುಕೋಟಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಳ ಅಭಿವೃದ್ಧಿ ನಿಗಮ ಹಗರಣದ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಜೂನ್ 28ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.
ಬೆಂಗಳೂರು, ಜೂನ್ 15: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಳ ಅಭಿವೃದ್ಧಿ ನಿಗಮದಲ್ಲಿ (Valmiki Scheduled Tribes Development Corporation) ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರದ ವಿರುದ್ಧ ಜೂನ್ 28ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ (BJP) ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಎಸ್ಟಿ ಮುಖಂಡರ ಸಭೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಯಿತು. ಇದೇ ವೇಳೆ, ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಸುದೀರ್ಘ ಅವಧಿಯ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಸಿದ್ದರಾಮಯ್ಯ ಸರ್ಕಾರ ಎಸ್ಸಿ, ಎಸ್ಟಿಗೆ ಅನ್ಯಾಯ ಮಾಡುತ್ತಿದೆ: ಶ್ರೀರಾಮುಲು ಟೀಕೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಉಲ್ಲೇಖಿಸಿ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಸರ್ಕಾರ ಎಸ್ಸಿ, ಎಸ್ಟಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಶಿಕ್ಷಣ, ಮನೆ, ಮೂಲಸೌಕರ್ಯ ಕೊಡಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಪ್ರತಿ ಇಲಾಖೆ ಶೇಕಡಾ 24ರಷ್ಟು ಹಣ ಮೀಸಲಿಡುತ್ತೆ. ಸಿದ್ದರಾಮಯ್ಯ ಸರ್ಕಾರ ಕಳೆದ ವರ್ಷ 11,000 ಕೋಟಿ ರೂ. ಬಳಸಿದೆ. ಈ ವರ್ಷ 14 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿದೆ. ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ 25,000 ಕೋಟಿ ರೂ. ದುರ್ಬಳಕೆಯಾಗಿದೆ ಎಂದು ರಾಮುಲು ಆರೋಪಿಸಿದರು.
ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಮುದಾಯದ ಸಚಿವಾಲಯ ಮಾಡಿದ್ದರು. ಸಚಿವರನ್ನು ನೇಮಕ ಮಾಡಿ ಸಮುದಾಯ ಅಭಿವೃದ್ಧಿಗೆ ಮುನ್ನಡಿ ಬರೆದಿದ್ದರು. ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಶೇ 7ಕ್ಕೆ ಹೆಚ್ಚಿಸಿದ್ದರು. ವಾಲ್ಮೀಕಿ ನಿಗಮದ ಅಮಾಯಕ ಅಧಿಕಾರಿ ನೇಣಿಗೆ ಶರಣಾಗಿದ್ದಾರೆ. ಸಚಿವರ ಮೌಖಿಕ ಆದೇಶದಂತೆ ತೆಲಂಗಾಣಕ್ಕೆ ಹಣ ವರ್ಗಾವಣೆಯಾಗಿದೆ. ವೈನ್ ಶಾಪ್, ಚಿನ್ನದ ಅಂಗಡಿಗಳಲ್ಲಿ ದಲಿತರ ಹಣ ಡ್ರಾ ಮಾಡಿದ್ರು. ಮುಖ್ಯಮಂತ್ರಿಗೆ ಮಾಹಿತಿ ಇಲ್ಲದೆ ಈ ರೀತಿ ಆಗಲು ಸಾಧ್ಯವಿಲ್ಲ. ಹಣಕಾಸು ಇಲಾಖೆಯಲ್ಲೇ ಭ್ರಷ್ಟಾಚಾರ ನಡೆದಿರುವ ಅನುಮಾನ ಇದೆ. ಸಿಎಂ ಸಿದ್ದರಾಮಯ್ಯ ಬಳಿಯೇ ಹಣಕಾಸು ಇಲಾಖೆಯಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ರಾಜೀನಾಮೆ ಸಾಕಾಗಲ್ಲ. ಜೂನ್ 28ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ನಿರ್ಧರಿಸಿದೆ ಎಂದು ರಾಮುಲು ಹೇಳಿದರು.
ಏನಿದು ಹಗರಣ?
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಎಸ್‌ಐಟಿ ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದೆ.
ಈ ಮಧ್ಯೆ, 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಮೊತ್ತವನ್ನು ಮದ್ಯದಂಗಡಿಗಳು, ಚಿನ್ನಾಭರಣ ಮಾರಟ ಮಳಿಗೆಗಳು ಹಾಗೂ ಸಣ್ಣ ಕಂಪನಿಗಳಿಗೆ ವರ್ಗಾಯಿಸಿಕೊಂಡು ನಗದು ಹಣ ಪಡೆದಿರುವ ವಿಚಾರವೂ ವಿಶೇಷ ತನಿಖಾ ತಂಡದ ತನಿಖೆ ವೇಳೆ ಬಯಲಾಗಿತ್ತು.
ಇದನ್ನೂ ಓದಿ: ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಜನ್ಮ ಗುಣ: ಬಿಜೆಪಿ ಹೀಗೆ ಕಿಡಿ ಕಾರಿದ್ದೇಕೆ?
ಹಗರಣ ಸಂಬಂಧ ಈಗಾಗಲೇ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕವೂ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Sat, 15 June 24