RL Kashyap: ಪದ್ಮಶ್ರೀ ಪುರಸ್ಕೃತ ಆರ್ಎಲ್ ಕಶ್ಯಪ್ ನಿಧನ
ವೇದಗಳ ಅಧ್ಯಯನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ, ಪದ್ಮಶ್ರೀ ಪುರಸ್ಕೃತ ಗಣಿತಜ್ಞ ಆರ್.ಎಲ್. ಕಶ್ಯಪ್ (ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್) ಶುಕ್ರವಾರ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಬೆಂಗಳೂರು: ವೇದಗಳ ಅಧ್ಯಯನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ, ಪದ್ಮಶ್ರೀ ಪುರಸ್ಕೃತ ಗಣಿತಜ್ಞ ಆರ್.ಎಲ್. ಕಶ್ಯಪ್ (RL Kashyap) (ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್) ಶುಕ್ರವಾರ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅಧ್ಯಾತ್ಮಿಕ ಸಂಘಟನೆ ಸಾಕ್ಷಿ ಟ್ರಸ್ಟ್ನ ಸ್ಥಾಪಕರಾಗಿದ್ದ ಅವರನ್ನು 2021ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.
ಗಣಿತಜ್ಞರೂ ಆಗಿದ್ದ ಆರ್.ಎಲ್. ಕಶ್ಯಪ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದಿದ್ದರು. ಬಳಿಕ ಅಮೆರಿಕದ ವರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. 1982ರಲ್ಲಿ ಗಣಿತಶಾಸ್ತ್ರಕ್ಕೆ ಸಂಬಂಧಿಸಿ ‘ಕಶ್ಯಪ್ ಇನ್ಫಾರ್ಮೇಶನ್ ಕ್ರಿಯೇಷನ್ (ಕೆಐಸಿ)’ ಮಂಡನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಪಾತ್ರರಾಗಿದ್ದರು. ಕಂಪ್ಯೂಟರ್ ಪ್ಯಾಟರ್ನ್ ರೆಕಗ್ನಿಷನ್, ಮೆಷಿನ್ ಇಂಟೆಲಿಜೆನ್ಸ್ ಮತ್ತು ವೈದಿಕ ಅಧ್ಯಯನ ಕ್ಷೇತ್ರದಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ.
ವೇದ ಸಂಶೋಧನೆ ಕ್ಷೇತ್ರದಲ್ಲಿ ಗಣನೀಯ ಸಾಧನೆ
ಆರ್.ಎಲ್. ಕಶ್ಯಪ್ ಅವರು ವೇದಗಳ ಕುರಿತಾದ ಅಧ್ಯಯನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವವೇದಗಳ ಸುಮಾರು 25,000 ಶ್ಲೋಕ/ಮಂತ್ರಗಳನ್ನು ಇಂಗ್ಲಿಷ್ಗೆ ಅನುವಾದ ಮಾಡಿದ್ದರು. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ವೇದಗಳಿಗೆ ಸಂಬಂಧಿಸಿ ಕಶ್ಯಪ್ ಅವರು ಬರೆದಿರುವ ಪುಸ್ತಕಗಳು ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿವೆ.
ಸಾಕ್ಷಿ ಟ್ರಸ್ಟ್ ಮೂಲಕ ವೇದ ಮಂತ್ರಗಳು ಮತ್ತು ಉಪನಿಷತ್ತುಗಳ ಆಳವಾದ ಅರ್ಥವನ್ನು ವಿವರಿಸುವ ಸಾಪ್ತಾಹಿಕ ತರಗತಿಗಳನ್ನು ಅವರು ನಿಯಮಿತವಾಗಿ ನಡೆಸುತ್ತಿದ್ದರು. ಅನೇಕ ಅಂತಾರಾಷ್ಟ್ರೀಯ ಮಟ್ಟದ ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಕಶ್ಯಪ್ ಅವರ 250 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿದ್ದವು. ಹಲವಾರು ಪ್ರಮುಖ ಭಾಷಣಗಳೂ ಒಳಗೊಂಡಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ 200 ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಸೇರಿ ಅನೇಕ ಪ್ರಶಸ್ತಿ: 2012ರಲ್ಲಿ ಕಶ್ಯಪ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2013ರಲ್ಲಿ ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ ದೊರೆತಿದೆ. 2013ರಲ್ಲಿ ಭಾರತೀಯ ವಿದ್ಯಾಭವನದಿಂದ ವೇದ ಬ್ರಹ್ಮ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. 2014ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Fri, 11 November 22