TJS George passes away: ಖ್ಯಾತ ಪತ್ರಕರ್ತ, ಲೇಖಕ ಟಿಜೆಎಸ್ ಜಾರ್ಜ್ ವಿಧಿವಶ
Veteran journalist TJS George passes away: ಖ್ಯಾತ ಪತ್ರಕರ್ತ, ಲೇಖಕ ಮತ್ತು ಅಂಕಣಕಾರರಾಗಿದ್ದ ಟಿಜೆಎಸ್. ಜಾರ್ಜ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಟಿಜೆಎಸ್ ಜಾರ್ಜ್, ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 03: ಪದ್ಮಭೂಷಣ ಪುರಸ್ಕೃತ ಖ್ಯಾತ ಪತ್ರಕರ್ತ, ಲೇಖಕ ಥೈಲ್ ಜಾಕೋಬ್ ಸೋನಿ ಜಾರ್ಜ್(97) (TJS George) ಅವರು ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಗಣ್ಯರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಟಿಜೆಎಸ್ ಜಾರ್ಜ್ ಯಾರು?
ಥೈಲ್ ಜಾಕೋಬ್ ಸೋನಿ ಜಾರ್ಜ್ ಅವರು ಟಿಜೆಎಸ್ ಜಾರ್ಜ್ ಎಂದೇ ಖ್ಯಾತರಾಗಿದ್ದರು. 1928 ಮೇ 7 ರಂದು ಕೇರಳದಲ್ಲಿ ಜನಿಸಿದ್ದ ಇವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದುಕೊಂಡಿದ್ದರು. ನಂತರ ಮುಂಬೈನ ಫ್ರೀ ಪ್ರೆಸ್ ಜರ್ನಲ್‌ನಲ್ಲಿ ವೃತ್ತಿಜೀವನವನ್ನು ಆರಂಭಿಸಿದ್ದರು.
ಇದನ್ನೂ ಓದಿ: SL Bhyrappa: ಪದ್ಮಭೂಷಣ, ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ ನಿಧನ
ಜಾರ್ಜ್ ಅವರು ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ, ಧಾರ್ಮಿಕ ಅಸಹಿಷ್ಣುತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದರು. ‘ಪಾಯಿಂಟ್ ಆಫ್ ವ್ಯೂ’ ಎಂಬ ಸಾಪ್ತಾಹಿಕ ಅಂಕಣವನ್ನು 25 ವರ್ಷಗಳ ಕಾಲ ಬರೆದಿದ್ದರು.
ಭಾರತೀಯ ಪತ್ರಿಕೋದ್ಯಮ ಸೇರಿದಂತೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆ ಹಿನ್ನಲೆ 2011ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 2019ರಲ್ಲಿ ಕೇರಳದ ಅತ್ಯುನ್ನತ ಮಾಧ್ಯಮದ ಸ್ವದೇಶಾಭಿಮಾನಿ ಕೇಸರಿ ಪ್ರಶಸ್ತಿಯನ್ನು ಸಹ ಪಡೆದಿದ್ದರು. ಅವರು ಹಾಂಗ್ ಕಾಂಗ್‌ನಲ್ಲಿ ಏಷ್ಯಾವೀಕ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಿಎಂ ಸಿದ್ದರಾಮಯ್ಯ ಸಂತಾಪ
ಹಿರಿಯ ಪತ್ರಕರ್ತ, ಸಂಪಾದಕ ಮತ್ತು ಲೇಖಕ ಟಿಜೆಎಸ್ ಜಾರ್ಜ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಹರಿತವಾದ ಲೇಖನಿ ಮತ್ತು ರಾಜಿಯಾಗದ ಧ್ವನಿಯಿಂದ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ್ದರು.
ಸಿಎಂ ಸಿದ್ದರಾಮಯ್ಯ ಟ್ವೀಟ್
Saddened by the passing of veteran journalist, editor & author T J S George.
With his sharp pen and uncompromising voice, he enriched Indian journalism for over six decades.
He was a true public intellectual who made readers think, question and engage.
My heartfelt condolences… pic.twitter.com/OA8IWilqaJ
— Siddaramaiah (@siddaramaiah) October 3, 2025
ಅವರು ಓದುಗರನ್ನು ಯೋಚಿಸುವಂತೆ, ಪ್ರಶ್ನಿಸುವಂತೆ ಮತ್ತು ತೊಡಗಿಸಿಕೊಳ್ಳುವಂತೆ ಮಾಡಿದ ನಿಜವಾದ ಸಾರ್ವಜನಿಕ ಬುದ್ಧಿಜೀವಿಯಾಗಿದ್ದರು. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 pm, Fri, 3 October 25




