ಅಪಘಾತ: ದಾವಣಗೆರೆಯಿಂದ ರುದ್ರಪ್ಪ ಲಮಾಣಿ ದಿಢೀರ್ ಬೆಂಗಳೂರಿಗೆ ಶಿಫ್ಟ್​!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜೆ.ಜೆ.ಹಳ್ಳಿ ಗ್ರಾಮದ ಬಳಿ ನಿನ್ನೆ(ಮಾರ್ಚ್​ 14) ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಧಾನಸಭೆ ಡೆಪ್ಯೂಟಿ ಸ್ಪೀಕರ್​ ರುದ್ರಪ್ಪ ಲಮಾಣಿ ಅವರು ಗಾಯಗೊಂಡಿದ್ದು, ದಾವಣಗೆರೆ S.S.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ S.S.ಆಸ್ಪತ್ರೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.

ಅಪಘಾತ: ದಾವಣಗೆರೆಯಿಂದ ರುದ್ರಪ್ಪ ಲಮಾಣಿ ದಿಢೀರ್ ಬೆಂಗಳೂರಿಗೆ ಶಿಫ್ಟ್​!
Edited By:

Updated on: Mar 15, 2025 | 10:15 AM

ಬೆಂಗಳೂರು, (ಮಾರ್ಚ್​ 15): ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್​ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ (ಮಾರ್ಚ್​ 14) ಬಜೆಟ್​​ ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಹಾವೇರಿಗೆ ತೆರಳುವ ಮಾರ್ಗ ಮಧ್ಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜೆ.ಜೆ.ಹಳ್ಳಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನು ದಾವಣಗೆರೆಯ S.S.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ, ಇದೀಗ ಏಕಾಏಕಿ ರುದ್ರಪ್ಪ ಲಮಾಣಿ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದ್ದು, ಸಹಜವಾಗಿಯೇ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.

ರುದ್ರಪ್ಪ ಲಮಾಣಿ ಅವರು ನಿನ್ನೆ (ಮಾರ್ಚ್ 14) ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಸ್ವಕ್ಷೇತ್ರ ಹಾವೇರಿಗೆ ತೆರಳುತ್ತಿದ್ದರು. ಆದ್ರೆ, ಎಳ್ಳನೀರು ಕುಡಿಯಲೆಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆಜೆ ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿಕ ಕಾರನ್ನು ಸೈಡಿಗೆ ಹಾಕಿ ಇಳಿದಿದ್ದಾರೆ. ಅದೇ ವೇಳೆ ವೇಗವಾಗಿ ಬಂದ ಬೈಕ್​ವೊಂದು ರುದ್ರಪ್ಪ ಲಮಾಣಿ ಅವರಿಗೆ ಗುದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಹಣೆ, ಹಲ್ಲು, ಗದ್ದ ಮತ್ತು ಬಲ ಮೊಣಕಾಲಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಹಿರಿಯೂರಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ದಾವಣಗೆರೆಯ ಎಸ್​ಎಸ್​ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಡೆಪ್ಯೂಟಿ ಸ್ಪೀಕರ್​ ರುದ್ರಪ್ಪ ಲಮಾಣಿಗೆ ಗಾಯ, ಆಸ್ಪತ್ರೆಗೆ ದಾಖಲು

ಎಸ್​ಎಸ್​ ಆಸ್ಪತ್ರೆತಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸಿಟಿ ಸ್ಕ್ಯಾನ್ ಸೇರಿದಂತೆ ಇತರೆ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿದುಬಂದಿತ್ತು. ಆದ್ರೆ, ಇದೀಗ ಇಂದು (ಮಾರ್ಚ್ 15) ಬೆಳಗ್ಗೆ ಏಕಾಏಕಿ ದಾವಣಗೆರೆ ಎಸ್​​ಎಸ್​ ಆಸ್ಪತ್ರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಸದ್ಯ ರುದ್ರಪ್ಪ ಲಮಾಣಿ ಅವರ ಆರೋಗ್ಯದ ಬಗ್ಗೆ ವೈದ್ಯರಾಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ನಿನ್ನೆ ರಾತ್ರಿಯವರೆಗೂ ಚೆನ್ನಾಗಿದ್ದಾರೆ , ಸಣ್ಣಪುಟ್ಟ ಗಾಯಗಳಾಗಿವೆ ಅಷ್ಟೇ ಎಂದು ತಿಳಿದುಬಂದಿತ್ತು. ಆದ್ರೆ ಇದೀಗ ದಿಢೀರ್​ ಬೆಂಗಳೂರಿಗೆ ಶಿಫ್ಟ್ ಮಾಡಿದ್ದು, ಅವರ ಬೆಂಬಲಿಗರಿಗೆ ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 am, Sat, 15 March 25