ವಿಜಯನಗರ: ಸಿದ್ದರಾಮಯ್ಯ ಶಿಷ್ಯನ ವಿರುದ್ದ ಭುಗಿಲೆದ್ದ ಅಸಮಾಧಾನ, ಪ್ರಶ್ನಿಸಿದಕ್ಕೆ ಪಕ್ಷದಿಂದಲೇ ಉಚ್ಘಾಟನೆ
ಆ ಶಾಸಕನ ವಿರುದ್ದ ಯಾರು ಪ್ರಶ್ನೆ ಮಾಡುವ ಹಾಗಿಲ್ಲ. ಯಾರಾದರು ಪ್ರಶ್ನೆ ಮಾಡಿದರೆ ಪಕ್ಷದಿಂದಲೇ ಉಚ್ಛಾಟನೆ ಆಗುವುದು ಪಕ್ಕಾ. ಹೌದು ಕಾಂಗ್ರೆಸ್ ಶಾಸಕನ ವರ್ತನೆಯ ಬಗ್ಗೆ ಪ್ರಶ್ನೆ ಮಾಡಿದವರನ್ನ ಇದೀಗ ಪಕ್ಷದಿಂದಲೇ ಉಚ್ಛಾಟನೆ ಮಾಡಿದ ಪ್ರಕರಣವೊಂದು ನಡೆದಿದೆ. ಏನಿದು ಕಥೆ ಅಂತೀರಾ? ಇಲ್ಲಿದೆ ನೋಡಿ
ವಿಜಯನಗರ: ಶಾಸಕನ ಅಕ್ರಮದ ದಾಖಲೆಗಳ ಪ್ರದರ್ಶನ ಮಾಡುತ್ತಿರುವ ಮುಖಂಡರು. ಕಾಂಗ್ರೆಸ್ ಶಾಸಕನಿಗೆ ಟಿಕೆಟ್ ಕೊಡಬೇಡಿ ಎನ್ನುತ್ತಿರುವ ಕ್ಷೇತ್ರದ ನಾಯಕರು. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕೈ ಶಾಸಕನ ತುಘಲಕ ದರ್ಬಾರ್ ವಿರುದ್ದ ಕೆಂಡಾ ಮಂಡಲವಾದ ಕಾರ್ಯಕರ್ತರು. ಸಿದ್ದು ಶಿಷ್ಯನ ವಿರುದ್ದ ಸಿಡಿದೆದ್ದ ಕ್ಷೇತ್ರದ ಕಾರ್ಯಕರ್ತರು, ಮುಖಂಡರು. ಹೌದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್(MLA Bheema Naik) ವಿರುದ್ದ ಕ್ಷೇತ್ರದ ನಾಯಕರು ಸಿಡಿದೆದ್ದಿದ್ದಾರೆ. ಒಂದು ಭಾರಿ ಜೆಡಿಎಸ್ ಮತ್ತೊಂದು ಭಾರಿಗೆ ಕಾಂಗ್ರೆಸ್ ಶಾಸಕರಾಗಿರುವ ಭೀಮಾನಾಯ್ಕ್ ವಿರುದ್ದ ಕಾರ್ಯಕರ್ತರು ಭುಗಿಲೆದ್ದಿದ್ದಾರೆ. ಸಿದ್ದರಾಮಯ್ಯನ ಪರಮಾಪ್ತ ಶಿಷ್ಯನ ತುಘಲಕ ದರ್ಬಾರ್ ವಿರುದ್ದ ಕ್ಷೇತ್ರದ ನಾಯಕರು ಸಿಡಿದೆದ್ದಿದ್ದಾರೆ. ಶಾಸಕ ಭೀಮಾನಾಯ್ಕ್ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತಗೆದುಕೊಳ್ಳುತ್ತಿಲ್ಲ. ಅಧಿಕಾರದ ಮದದಿಂದ ಮುಖಂಡರನ್ನ ಅವಮಾನಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕ ಹಾಗೂ ಶಾಸಕನ ಪುತ್ರನ ವರ್ತನೆಯಿಂದ ನಾವೆಲ್ಲ ಬೇಸತ್ತಿದ್ದೇವೆ. ಶಾಸಕ ಭೀಮಾನಾಯ್ಕ್ಗೆ ಟಿಕೇಟ್ ನೀಡಬಾರದೆಂದು ಪಕ್ಷದ ನಾಯಕರಿಗೆ ಮನವಿ ಮಾಡಿದ್ದೇವೆ ಎನ್ನುತ್ತಿದ್ದಾರೆ ಕ್ಷೇತ್ರದ ಮುಖಂಡರು.
ಶಾಸಕ ಭೀಮಾನಾಯ್ಕ್ ವರ್ತನೆಯಿಂದ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಅಲ್ಲದೇ ಕುರುಬ ಸಮುದಾಯಕ್ಕೆ ಸೇರಿದ ಬಡ ಕುಟುಂಬಕ್ಕೆ ಸೇರಿದ ಭೂಮಿಯನ್ನ ಖರೀದಿ ಮಾಡಿ ಅನ್ಯಾಯ ಮಾಡಿದ್ದಾರಂತೆ. ಜೊತೆಗೆ ಶಾಸಕರ ಈ ವರ್ತನೆ ಸೇರಿದಂತೆ ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಿಕೆ ಬಗ್ಗೆ ಮಾಡಿ ಎಂದವರಿಗೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಶಾಸಕರ ತುಘಲಕ ದರ್ಬಾರ್ ಪ್ರಶ್ನೆ ಮಾಡಿದವರನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ದು ಸರಿನಾ ಎಂದು ಕ್ಷೇತ್ರದ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ಹೆಸರಿನಲ್ಲಿ ಭೀಮಾನಾಯ್ಕ್ ಕ್ಷೇತ್ರದಲ್ಲಿ ಸಾಕಷ್ಟು ಅಕ್ರಮ ಮಾಡುತ್ತಿದ್ದು ಅವರಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಭೀಮಾನಾಯ್ಕ್ ಸೋಲಿಸುತ್ತೇವೆ ಎಂದು ಕ್ಷೇತ್ರದ ಮುಖಂಡರು ಹೋರಾಟಕ್ಕೆ ಇಳಿದಿದ್ದಾರೆ.
ಶಾಸಕ ಭೀಮಾನಾಯ್ಕ್ ಅಕ್ರಮವನ್ನ ಪ್ರಶ್ನೆ ಮಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂಜೆಎಂ ಹರ್ಷವರ್ದನ್, ಕುರುಬ ಸಮುದಾಯದ ಮುಟುಗನಹಳ್ಳಿ ಕೊಟ್ರೇಶ್, ಬುಡ್ಡಿ ಬಸವರಾಜ ಎನ್ನುವ ಸ್ಥಳೀಯ ಮುಖಂಡರನ್ನ ಕಾಂಗ್ರೆಸ್ ಪಕ್ಷದಿಂದಲೇ ಉಚ್ಛಾಟನೆ ಮಾಡಲಾಗಿದೆ. ಈ ಹಿಂದೆ ಭೀಮಾನಾಯ್ಕ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ ವೇಳೆ ಇದೇ ನಾಯಕರು ಕಾಂಗ್ರೆಸ್ ಕೈ ಹಿಡಿದು ಗೆಲ್ಲಿಸುವಲ್ಲಿ ಶ್ರಮಿಸಿದ್ದರು. ಹೀಗಾಗಿ ಶಾಸಕರ ಅಕ್ರಮ, ದುವರ್ತನೆಯನ್ನ ಪ್ರಶ್ನೆ ಮಾಡುವುದೇ ತಪ್ಪಾ. ಕಾಂಗ್ರೆಸ್ನ ಗೆಲ್ಲಿಸಿದವರಿಗೆ ಇದೆಂಥ ಶಿಕ್ಷೆ ಎಂದು ಸ್ಥಳೀಯ ನಾಯಕರು ಇದೀಗ ಕೈ ಪಕ್ಷದ ವಿರುದ್ದವೇ ಕೆಂಡ ಮಂಡಲವಾಗಿದ್ದಾರೆ.
ವರದಿ: ವಿರೇಶ್ ದಾನಿ ಟವಿ9 ಬಳ್ಳಾರಿ
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Mon, 20 March 23