ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ನಿಧನ ಬೆನ್ನಲ್ಲೇ ಸಚಿವರ ವಿಡಿಯೋ ವೈರಲ್
ಉಮೇಶ ಕತ್ತಿ ಸಿಎಂ ಆಗುವ ಕನಸು ಹೊತ್ತು ಬಾರದ ಲೋಕಕ್ಕೆ ತೆರಳಿದ್ದಾರೆ. ಇದೀಗಾ ಇದೇ ವಿಡಿಯೋ ವಿಜಯಪುರ ಜಿಲ್ಲೆಯಲ್ಲಿ ವೈರಲ್ ಆಗಿದೆ.
ವಿಜಯಪುರ: ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ನಿನ್ನೆ ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯುಪುರ ನಗರದಲ್ಲಿ ಈ ಹಿಂದೆ ಮಾತನಾಡಿದ್ದ ಉಮೇಶ್ ಕತ್ತಿ ಅವರ ವಿಡಿಯೋ ವೈರಲ್ ಆಗಿದೆ. ಭವಿಷ್ಯದಲ್ಲಿ ಸಿಎಂ ಆಗುತ್ತೇನೆಂದು ಉಮೇಶ್ ಕತ್ತಿ ಅವರು ಇಂಗಿತ ವ್ಯಕ್ತಪಡಿಸಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ.
ಸಿಎಂ ಬದಲಾವಣೆ ವಿಚಾರದಲ್ಲಿ ಕಳೆದ ಆಗಸ್ಟ್ ನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಕತ್ತಿ, ನನಗೀಗ 60 ವರ್ಷ. ಇನ್ನೂ 15 ವರ್ಷ ಟೈಂ ಇದೆ. ಮುಂದಿನ 15 ವರ್ಷದೊಳಗೆ ನಾನು ಸಿಎಂ ಆಗುತ್ತೇನೆ. ಆದರೆ ಈಗ ಇಲ್ಲಾ, ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು. ಈಗ ಸಿಎಂ ಆಗಲು ನಿಮಗೆ ಅವಕಾಶ ಸಿಕ್ಕರೆ ಎಂದು ಕೇಳಿದ್ದಾಗ, ನನಗೆ ಸಿಎಂ ಆಗಲು ಅವಕಾಶ ಸಿಕ್ಕೆ ಸಿಗುತ್ತದೆ. ನಾನು 9 ಸಲ ಶಾಸಕನಾದವನು, ನನಗೆ ಇನ್ನೂ 15 ವರ್ಷ ಟೈಂ ಇದೆ. ಈಗ ಸಿಎಂ ಆಗಲು ನಾನೇನು ಬೇಡಿಕೆ ಇಟ್ಟಿಲ್ಲ. ನಮ್ಮವರೇ ಮುಖ್ಯಮಂತ್ರಿ ಇದ್ದಾರೆ, ಉತ್ತರ ಕರ್ನಾಟಕದವರೇ ಸಿಎಂ ಆಗಿದ್ದಾರೆ. ನನಗೆ ಮುಂದೆ ಅವಕಾಶ ಸಿಕ್ಕಾಗ ನೋಡೋಣ. ಈಗ ಬೇಡಿಕೆಯಿಡಲ್ಲ ಎಂದಿದ್ದರು.
ಒಂದು ವೇಳೆ ಹೈಕಮಾಂಡ್ ಸಿಎಂ ಸ್ಥಾನ ನೀಡಿದರೆ ಎಂಬ ಮಾಧ್ಯಮದವರ ಪ್ರಶ್ನೆಗೆ ನಾನು ಸಿಎಂ ಆದರೆ ನಿನ್ನ ಸಚಿವನನ್ನಾಗಿ ಮಾಡುತ್ತೇನೆಂದು ಸುದ್ದಿ ವಾಹಿನಿಯ ಮಾಧ್ಯಮದ ಪ್ರತಿನಿಧಿಯೊಬ್ಬರಿಗೆ ಹಾಸ್ಯದ ಉತ್ತರ ನೀಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದ ಕತ್ತಿ ಅವರ ವಿಡಿಯೋ ವೈರಲ್ ಆಗಿದೆ. ಉಮೇಶ ಕತ್ತಿ ಸಿಎಂ ಆಗುವ ಕನಸು ಹೊತ್ತು ಬಾರದ ಲೋಕಕ್ಕೆ ತೆರಳಿದ್ದಾರೆ. ಇದೀಗಾ ಇದೇ ವಿಡಿಯೋ ವಿಜಯಪುರ ಜಿಲ್ಲೆಯಲ್ಲಿ ವೈರಲ್ ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:45 pm, Wed, 7 September 22