ಮುಸ್ಲಿಂ ಸಮುದಾಯಕ್ಕೆ ಸೇರಿರುವ ವಿಜಯಪುರ ಪಾಲಿಕೆಯ ಮೇಯರ್- ಆಯುಕ್ತರು ಹಿಂದೂ ವಿರೋಧಿ ನೀತಿ ಪಾಲಿಸುತ್ತಿದ್ದಾರಾ?
Vijayapura Mahanagara Palike: ವಿಜಯಪುರ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪನೆಗೆ ಮೇಯರ್ ಮಹೆಜಬೀನ್ ಹೊರ್ತಿ ಹಾಗೂ ಆಯುಕ್ತ ಬದ್ರೂದಿದ್ದೀನ್ ಸೌದಾಗರ ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದ್ದಾರೆನ್ನಲಾಗಿದೆ. ಇತ್ತ ಬಿಜೆಪಿ ಸದಸ್ಯರು ಕೂಡಲೇ ಪಾಲಿಕೆಯ ಪ್ರವೇಶ ದ್ವಾರದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಮುನ್ನ ರಾಮಮಂದಿರ ಉದ್ಘಾಟನೆಯಾಗಿದ್ದು ರಾಜಕೀಯ ಪಕ್ಷಗಳಿಗೆ ಚುನಾವಣಾ ವಿಚಾರವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ್ದು ನಮ್ಮ ಸಾಧನೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ರಾಮ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಜೆಪಿ ತಿರುಗೇಟು ನೀಡಿದೆ. ಈ ಮಧ್ಯೆ, ವಿಜಯಪುರ ಮಹಾನಗರ ಪಾಲಿಕೆಯಲ್ಲಿ (Vijayapura Mahanagara Palike -VMP) ನಡೆದ ಆ ಘಟನೆ ಕಾಂಗ್ರೆಸ್ (Congress) ಹಿಂದೂ (Hinduism) ವಿರೋಧಿಯಾ ಎಂಬ ಬಿಜೆಪಿ ಆರೋಪಕ್ಕೆ ಪುಷ್ಟಿ ನೀಡಿದೆ. ಮುಸ್ಲೀಂ ಸಮಾಜದ ಮಹಿಳೆ (Muslim community) ಪಾಲಿಕೆಯ ಮೇಯರ್ ಆಗಿದ್ದು ಪಾಲಿಕೆಯ ಆಧಿಕಾರ ಕಾಂಗ್ರೆಸ್ ಪಕ್ಷದ ಕೈಲಿದೆ. ಪಾಲಿಕೆಯಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆಯಾ? ಎನ್ನಲಾಗುತ್ತಿದೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ವಿಜಯಪುರ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪನೆಗೆ ವಿಳಂಬ ನೀತಿ…… ಉದ್ದೇಶ ಪೂರ್ವಕವಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ತಡ ಮಾಡಲಾಗುತ್ತಿದೆ ಎಂದು ಆರೋಪ… ಈ ಕುರಿತು ಆಡಳಿತಾರೂಢ ಕಾಂಗ್ರೆಸ್ಸಿನ ಮೇಯರ್ ಹಾಗೂ ಉಪ ಮೇಯರ್ ವಿರುದ್ದ ಗುಡುಗಿರೋ ಬಿಜೆಪಿ ಸದಸ್ಯರು…. ಪಾಲಿಕೆಯಲ್ಲಿ ಗಣೇಶನ ಮೂರ್ತಿ ಇಡಬೇಕೆಂದು ಒತ್ತಾಯ…
ಕಳೆದ 2016 ರಲ್ಲಿ ನಗರದ ಸಭೆಯಾಗಿದ್ದ ವಿಜಯಪುರ ನಗರ ಸಭೆ ಮಹಾನಗರ ಪಾಲಿಕೆಯಾಗಿ ಬಡ್ತಿ ಹೊಂದಿತ್ತು. ಮಹಾನಗರ ಪಾಲಿಕೆಯಾದ ಬಳಿಕ ತಾತ್ಕಾಲಿಕವಾದ ಕಟ್ಟಡದಲ್ಲಿ ಕಚೇರಿಯ ಕೆಲಸ ಕಾರ್ಯಗಳನ್ನು ಮಾಡಲಾಗಿತ್ತು. ಮಹಾನಗರ ಪಾಲಿಕೆಗೆ ಸೇರಿದ್ದ ಕಲ್ಯಾಣ ಮಂಟಪವನ್ನೇ ತಾತ್ಕಾಲಿಕ ಕಚೇರಿಯನ್ನಾಗಿ ಮಾಡಿದ್ದರು.
ಇನ್ನು ಪಾಲಿಕೆಯ ಆಡಳಿತ ನಡೆಸಲು ಹೊಸ ಕಟ್ಟಡ ಅವಶ್ಯಕತೆಯನ್ನು ಪರಿಗಣಿಸಲಾಗಿತ್ತು. ಸುಮಾರು 14.5 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಜಲ ನಗರದಲ್ಲಿ ನಿರ್ಮಿಸಿರೋ ನೂತನ ಪಾಲಿಕೆ ಕಟ್ಟಡವನ್ನು 30-09-2022 ರಂದು ಅಂದಿನ ಸಿಎಂ ಉದ್ಘಾಟನೆ ಮಾಡಿದ್ದರು. ಬಳಿಕ ಪಾಲಿಕೆಯ ಚುನಾವಣೆ ನಡೆದು 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, 5 ಪಕ್ಷೇತರರು, 2 ಎಐಎಂಐಎಂ ಹಾಗೂ 1 ಜೆಡಿಎಸ್ ಪಕ್ಷದ ಸದಸ್ಯರು ಆಯ್ಕೆಯಾಗಿದ್ದರು.
ಅದಾದಮೇಲೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೂ ಮೀಸಲಾತಿ ವಿಚಾರದಲ್ಲಿ ವಿಳಂಬವಾಗಿತ್ತು. ನ್ಯಾಯಾಲಯದಲ್ಲಿ ಈ ಕುರಿತ ವ್ಯಾಜ್ಯಕ್ಕೆ ಫುಲ್ ಸ್ಟಾಪ್ ಸಿಕ್ಕ ಬಳಿಕ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷ ಮೆಹಜಬೀನ್ ಹೊರ್ತಿ ಮೇಯರ್ ಆಗಿ ಹಾಗೂ ಕಾಂಗ್ರೆಸ್ಸಿನ ದಿನೇಶ ಹಳ್ಳಿ ಉಪ ಮೇಯರ್ ಆಗಿ ಆಧಿಕಾರ ವಹಿಸಿಕೊಂಡರು.
ಪಾಲಿಕೆಯ ನೂತನ ಆಡಳಿತ ಮಂಡಳಿಯ ಮೊದಲ ಸಾಮಾನ್ಯ ಸಭೆಯಲ್ಲಿ ನೂತನ ಮಹಾನಗರ ಪಾಲಿಕೆಯ ಕಟ್ಟಡದ ಆವರಣದಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪಿಸಲು ತೀರ್ಮಾನ ಮಾಡಲಾಗಿತ್ತು. ಆದರೆ ಇನ್ನೂವರೆಗೂ ಪಾಲಿಕೆಯ ಆವರಣದಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪನೆ ಮಾಡಿಲ್ಲಾ ಎಂದು ಬಿಜೆಪಿ ಸದಸ್ಯರು ಕಿಡಿ ಕಾರಿದ್ಧಾರೆ.
ವಿಜಯಪುರ ನಗರ ಸಭೆ ಇದ್ದಾಗಲೂ ನಗರ ಸಭೆಯ ಕಟ್ಟಡದ ಪ್ರವೇಶ ದ್ವಾರದಲ್ಲಿ ಗಣೇಶನ ಮೂರ್ತಿ ಇರಿಸಲಾಗಿತ್ತು. ಆದೇ ಮಾದರಿಯಲ್ಲಿ ತಾತ್ಕಾಲಿಕ ಕಚೇರಿಯಲ್ಲಿ ಹಿಂದೆ ಗಣೇಶನ ಮೂರ್ತಿ ಇಡಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಆಗಲೇ ಹೊಸ ಗಣೇಶನ ಮೂರ್ತಿಯನ್ನು ನೂತನ ಕಟ್ಟಡದಲ್ಲಿ ಇಡೋಣವೆಂದು ತೀರ್ಮಾನಿಸಲಾಗಿತ್ತು. ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಗಣೇಶನ ಮೂರ್ತಿ ಪ್ರತಿಷ್ಟಾಪಿಸಲು ಸರ್ವಾನುಮತದಿಂದ ಪಕ್ಷ ಬೇಧ ಮರೆತು ಸಮ್ಮತಿಸಲಾಗಿತ್ತು.
ಹೊಸ ಕಟ್ಟಡದಲ್ಲಿ ಗಣೇಶನ ಮೂರ್ತಿ ಇಡಲೂ ಸಹ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ನಗರದ ಕಲಾವಿದರ ಕೈಯ್ಯಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಗಣೇಶನ ಕಲ್ಲಿನ ಮೂರ್ತಿಯನ್ನು ನಿರ್ಮಾಣ ಮಾಡಿಸಲಾಗಿದೆ. ಆದರೆ ಪಾಲಿಕೆಯ ಹೊಸ ಕಟ್ಟಡದಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪಿಸಲು ಇನ್ನೂ ಮುಂದಾಗಿಲ್ಲಾ ಎಂದು ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾವು ಜಾತಿ ಬೇಧ ಪಕ್ಷ ಬೇಧ ಮರೆತು ಗಣೇಶನ ಮೂರ್ತಿ ಸ್ಥಾಪಿಸಲು ತೀರ್ಮಾನಿಸಲಾಗಿತ್ತು. ಗಣೇಶನ ಮೂರ್ತಿಯೂ ಸಿದ್ದವಾಗಿದೆ. ಆದರೆ ಉದ್ದೇಶ ಪೂರ್ವಕವಾಗಿ ತಡ ಮಾಡಲಾಗುತ್ತಿದೆ. ವಿಘ್ನ ವಿನಾಶಕನ ಮೂರ್ತಿ ಪಾಲಿಕೆಯ ಪ್ರವೇಶದ ದ್ವಾರದ ಬಳಿ ಪ್ರತಿಷ್ಟಾಪನೆ ಮಾಡುವುದರಿಂದ ತೊಂದರೆಗಳು ನಿವಾರಣೆಯಾಗುತ್ತವೆ. ಸದ್ಯ ಎಲ್ಲರೂ ಸಿದ್ದವಾಗಿದ್ದರೂ ಗಣೇಶನ ಮೂರ್ತಿ ಪ್ರತಿಷ್ಟಾಪನೆ ಮಾಡದೇ ಇರೋದು ಹಲವಾರು ಸಂಶಯಗಳಿಗೆ ಕಾರಣವಾಗುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಅದರಲ್ಲೂ ಮೇಯರ್ ಹಾಗೂ ಆಯಕ್ತರು ಮುಸ್ಲಿಂ ಸಮಾಜದವರಾಗಿದ್ದು ಗಣೇಶನ ಮೂರ್ತಿ ಇಡಲು ಮನಸ್ಸು ಮಾಡುತ್ತಿಲ್ಲಾ ಎಂದು ಹೇಳಿದ್ದಾರೆ.
ಸದ್ಯ ವಿಜಯಪುರ ಮಹಾನಗರ ಪಾಲಿಕೆಯ ಹೊಸ ಕಟ್ಟಡಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪನೆಯ ವಿಚಾರ ವಿವಾದಕ್ಕೆ ಈಡಾಗುತ್ತಿದೆ. ಸಾಮಾನ್ಯ ಸಭೆಯಲ್ಲಿ ಗಣೇಶನ ಮೂರ್ತಿ ಸ್ಥಾಪನೆ ಮಾಡಲು ಸರ್ವ ಸಮ್ಮತದಿಂದ ಒಪ್ಪಿಗೆ ನೀಡಿದ್ದರೂ ಈಗಾ ವಿಳಂಬ ಮಾಡುತ್ತಿರೋದು ಹಲವಾರು ಸಂಶಯಗಳಿಗೆ ಕಾರಣವಾಗುತ್ತಿದೆ.
ಮೇಯರ್ ಮಹೆಜಬೀನ್ ಹೊರ್ತಿ ಹಾಗೂ ಆಯುಕ್ತ ಬದ್ರೂದಿದ್ದೀನ್ ಸೌದಾಗರ ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದ್ದಾರೆನ್ನಲಾಗಿದೆ. ಇದರ ಹೊರತಾಗಿ ಕೂಡಲೇ ಪಾಲಿಕೆಯ ಪ್ರವೇಶ ದ್ವಾರದಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪಿಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುತ್ತದೆ ಎಂದು ಬಿಜೆಪಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಪಾಲಿಕೆಯ ಮೇಯರ್ ಮತ್ತು ಆಯುಕ್ತರು ಕಾಳಜಿ ವಹಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ