ಜನರ ದಾರಿ ತಪ್ಪಿಸುವುದರಲ್ಲಿ, ಮೋಸ ಮಾಡುವುದರಲ್ಲಿ ನಿಸ್ಸೀಮರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಡಿಸಿಎಂ ಗೋವಿಂದ ಕಾರಜೋಳ ವಾಗ್ದಾಳಿ
ಆಲಮಟ್ಟಿ ಡ್ಯಾಂನಲ್ಲಿ ಸಿಎಂ ಸಿದ್ದರಾಮಯ್ಯ ಗಂಗಾಪೂಜೆ, ಬಾಗಿನ ಅರ್ಪಣೆ ವಿಚಾರವಾಗಿ ವಿಜಯಪುರದಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಜನರ ದಾರಿ ತಪ್ಪಿಸುವುದರಲ್ಲಿ, ಮೋಸ ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸೀಮರು ಎಂದು ವಾಗ್ದಾಳಿ ಮಾಡಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ಲಿಸದಿದ್ದರೆ ಅವರು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ ಎಂದಿದ್ದಾರೆ.
ವಿಜಯಪುರ, ಸೆಪ್ಟೆಂಬರ್ 3: ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಕೂಡಲ ಸಂಗಮನಾಥನ ಮೇಲೆ ಆಣೆ ಮಾಡಿ ಹೇಳಿದ್ದರು. ಆದರೆ ಜನರ ದಾರಿ ತಪ್ಪಿಸುವುದರಲ್ಲಿ, ಮೋಸ ಮಾಡುವುದರಲ್ಲಿ ಅವರು ನಿಸ್ಸೀಮರು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಡಿಸಿಎಂ ಗೋವಿಂದ ಕಾರಜೋಳ (Govind Karjol) ವಾಗ್ದಾಳಿ ಮಾಡಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಬಾದಾಮಿಯಲ್ಲಿ ಗೆಲ್ಲಿಸಲಿದ್ರೆ ಅವರು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲಾ ಎಂದು ಕಿಡಿಕಾರಿದ್ದಾರೆ.
2013 ರಿಂದ 18ರ ವರೆಗೆ ಸಿಎಂ ಇದ್ದರು ಐದು ವರ್ಷದಲ್ಲಿ 3600 ಕೋಟಿ ರೂ. ಗಿಂತ ಹೆಚ್ಚು ಖರ್ಚು ಮಾಡಲಿಲ್ಲಾ. ಇವತ್ತು ಸರ್ಕಾರ ಮಲಗಿದೆ, ಏನೂ ಮಾಡುತ್ತಿಲ್ಲ. ನಮ್ಮ ಸರ್ಕಾರ ಇದ್ದಾಗ 53 ಸಾವಿರ ಎಕರೆಗೆ ಭೂ ಸ್ವಾಧೀನ ಮಾಡಿಕೊಂಡಿದ್ದೇವೆ. ಅವರಿಗೆ ಪರಿಹಾರ ಕೊಟ್ಟು, ಕ್ಲೀಯರ್ ಮಾಡಬೇಕಿತ್ತು, ಮಾಡಿಲ್ಲಾ. ಸುಪ್ರೀಂ ಕೋರ್ಟ್ನಲ್ಲಿ ಕೆಲವೇ ದಿನಗಳಲ್ಲಿ ನಮ್ಮ ಪರವಾಗಿ ತೀರ್ಪು ಬರುತ್ತದೆ. ತೀರ್ಪು ಬಂದಾಗ ಪುನರ್ವಸತಿ ಕಲ್ಪಿಸಲು ಇವರು ರೆಡಿ ಇರಬೇಕಲ್ಲಾ ಎಂದು ಪ್ರಶ್ನಿಸಿದ್ದಾರೆ.
130 ಟಿಎಂಸಿ ನೀರು ಬಳಸಲು ಉಪಯೋಜನೆ ಮಾಡಬೇಕಿದೆ. ನೊಟಿಫಿಕೇಷನ್ ಆಗಿರುವ 53 ಸಾವಿರ ಎಕರೆ ರದ್ದಾದರೆ ಮತ್ತೆ ನೊಟಿಫಿಕೇಷನ್ ಮಾಡಲು ಮತ್ತಷ್ಟು ವಿಳಂಬವಾಗಲಿದೆ. ತಕ್ಷಣ ಕೃಷ್ಣಾ ಮೇಲ್ದಂಡೆ ಯೋಜನೆಯ ಆರ್ ಮತ್ತು ಆರ್, ಭೂಸ್ವಾಧಿನ ಹಾಗೂ 3 ನೇ ಹಂತದ ಕಾಮಗಾರಿಗಳನ್ನು ಮುಗಿಸಬೇಕಿದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ನಾಯಕತ್ವ ಕೊರತೆ ಇದೆ, ಅದು ಲೀಡರ್ ಲೆಸ್ ಪಾರ್ಟಿ: ಎಂಎಲ್ಸಿ ಜಗದೀಶ್ ಶೆಟ್ಟರ್ ವಾಗ್ದಾಳಿ
ನಿನ್ನೆ ಸಿದ್ದರಾಮಯ್ಯ ಯುಕೆಪಿ 3 ನೇ ಹಂತದ ಭೂಸ್ವಾಧೀನ ಹಾಗೂ ಆರ್ ಆ್ಯಂಡ್ ಆರ್ ಕುರಿತು ಕಾಟಾಚಾರದ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಆಡಳಿತ ಪಕ್ಷದ ಶಾಸಕರು ಕಂದಾಯ ಸಚಿವರನ್ನು ಯುಕೆಪಿ 3 ನೇ ಹಂತದ ಯೋಜನೆಗೆ ಎಷ್ಟು ಹಣ ಕೊಡುತ್ತಿರೆಂದು ಕೇಳಿದರೆ ಜಿರೋ ಎಂದು ಸನ್ನೆಯ ಮೂಲಕ ತೋರಿಸಿದ್ದಾರೆ. ಯುಕೆಪಿ 3 ನೇ ಯೋಜನೆಗೆ ಹಣವಿಲ್ಲವೆಂದು ಕಂದಾಯ ಸಚಿವರು ಹೇಳಿದ್ದಾರೆ. ಸಂದರ್ಭ ಬಂದಾಗ ಅವರ ಹೆಸರನ್ನು ಹೇಳುತ್ತೇನೆ ಎಂದರು.
ಬಿಜೆಪಿ ಮೇಲೆ ಗೂಬೆ ಕೂರಿಸಿ, ಈ ಮೋಸದಾಟ ಬೇಡ. ಸಿದ್ದರಾಮಯ್ಯ ಒಬ್ಬರು ಲಾಯರ್ ಇದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದ್ದಾಗ ಪ್ರಧಾನಿಯವರು ಏನಾದರೂ ಮಾಡಲು ಆಗುತ್ತಾ? ಕಾವೇರಿಯಿಂದ ಬೆಂಗಳೂರು ಮಹಾನಗರಕ್ಕೆ ನೀರು ಕೊಡಲಾಗುತ್ತಿದೆ. ನೀರು ಬಿಟ್ಟು ಸರ್ವಪಕ್ಷದ ಸಭೆ ಕರೆದು ಮೋಸ ಮಾಡಿದ್ದಾರೆ. ಈ ವರ್ಷ 10 ಸಾವಿರ ಕೋಟಿ ರೂ. ಕೊಟ್ಟು ಯೋಜನೆಗಳನ್ನು ಮಾಡಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರಗಾಲ ಇದೆ, ಬರಗಾಲದಿಂದ ರೈತರಿಗೆ ಕರೆಂಟ್ ಸಿಗುತ್ತಿಲ್ಲಾ. ರಾಜ್ಯ ಕತ್ತಲೆಯಲ್ಲಿದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಲು ಹೊರಟಿದ್ದಾರೆ. ಬರೀ ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರಿಗೆ ಗ್ಯಾರೆಂಟಿ ಕೊಡಬೇಡಿ ಎಂದು ನಾವು ಹೆಳೋದಿಲ್ಲ. ಗ್ಯಾರೆಂಟಿ ಜೊತೆಗೆ ಅಭಿವೃದ್ಧಿಯನ್ನೂ ಮಾಡಬೇಕಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನವರೇ ಕೆಲವರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ: ಬಿಜೆಪಿ ಶಾಸಕ ಡಾ ಸಿಎನ್ ಅಶ್ವತ್ಥ್ ನಾರಾಯಣ ಆರೋಪ
ಈಗ ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಿರೋ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಇಂಡಿಯಾದ ಪಾರ್ಟನರೇ ಇದ್ದಾರಲ್ಲಾ. ತಮಿಳುನಾಡಿಗೆ ನೀರು ಬಿಡಬಾರದಾಗಿತ್ತು. ಇಂಡಿಯಾದ ಪಾರ್ಟ್ ಅವರಿಗೆ ನೀರು ಬಿಟ್ಟು ಖುಷಿ ಪಡಿಸಿದ್ದಾರಲ್ಲಾ. ನೀರು ಬಿಟ್ಟು ಸರ್ವಪಕ್ಷ ಸಭೆ ಕರೆಯಬೇಕಿತ್ತಲ್ಲಾ. ಮೊದಲು ನೀರು ಬಿಟ್ಟು ನಂತರ ಸರ್ವಪಕ್ಷ ಸಭೆ ಕರೆದಿದ್ದು ಮೋಸವಲ್ಲಾ ಎಂದು ವಾಗ್ದಾಳಿ ಮಾಡಿದ್ದಾರೆ.
ಇಡೀ ವಿಶ್ವವೇ ಮೆಚ್ಚುವ ನಾಯಕರು ಬಿಜೆಪಿಯಲ್ಲಿದ್ದಾರೆ
ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎಂದು ಶೆಟ್ಟರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇಡೀ ವಿಶ್ವವೇ ಮೆಚ್ಚುವ ನಾಯಕರು ಬಿಜೆಪಿಯಲ್ಲಿದ್ದಾರೆ. ಹಾಗಾಗಿ ಬಿಜೆಪಿ ಲೀಡರ್ ಲೆಸ್ ಪಾರ್ಟಿ ಅನ್ನೋದು ಹಾಸ್ಯಾಸ್ಪದ. ಆಪರೇಷನ್ ಕಮಲದ ಅವಶ್ಯಕತೆ ನಮಗಿಲ್ಲ. ಅಂತಹ ಪ್ರಸ್ತಾವನೆ ನಮ್ಮ ಪಕ್ಷದ ಸಭೆಯಲ್ಲಿ ಯಾವತ್ತೂ ಬಂದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.