ಹೈಕೋರ್ಟ್ ಆದೇಶ ನೀಡಿದರೂ ರೈತರಿಗೆ ಪರಿಹಾರ ನೀಡದ ಸರ್ಕಾರ, ಕೋರ್ಟ್​ಗೆ ಬೆಲೆ ಇಲ್ವಾ?

ವಿವಿಧ ಭಾಗ್ಯಗಳನ್ನು ನೀಡುವ ಸರ್ಕಾರ ದಿವಾಳಿಯಾಗಿದೆ. ಯಾವುದೇ ಯೋಜನೆಗಳಿಗೆ ಅಭಿವೃದ್ದಿಗಳಿಗೆ ನೀಡಲು ಹಣವೇ ಇಲ್ಲಾ ಎಂಬ ವಿರೋಧ ಪಕ್ಷಗಳ ಆರೋಪ ನಿಜವೆನ್ನಬಹುದು. ಕಾರಣ ವಿಜಯಪುರದ ರೈತರಿಗೆ ಸರ್ಕಾರದಿಂದ ರೈತರಿಗೆ ಬರಬೇಕಾದ ಪರಿಹಾರದ ಹಣವೇ ಬಂದಿಲ್ಲ. ಈ ಕುರಿತು ಹೈಕೋರ್ಟ್ ಆದೇಶ ನೀಡಿದ ಬಳಿಕವೂ ರೈತರಿಗೆ ನ್ಯಾಯಯುತವಾಗಿ ನೀಡಬೇಕಿರುವ ಪರಿಹಾರದ ಹಣ ನೀಡದೇ ಸತಾಯಿಸಲಾಗುತ್ತಿದೆ. ಈ ಕುರಿತು ಒಂದು ಸ್ಟೋರಿ ಓದಿ.

ಹೈಕೋರ್ಟ್ ಆದೇಶ ನೀಡಿದರೂ ರೈತರಿಗೆ ಪರಿಹಾರ ನೀಡದ ಸರ್ಕಾರ, ಕೋರ್ಟ್​ಗೆ ಬೆಲೆ ಇಲ್ವಾ?
ಹೈಕೋರ್ಟ್ ಆದೇಶ ನೀಡಿದರೂ ರೈತರಿಗೆ ಪರಿಹಾರ ನೀಡದ ಸರ್ಕಾರ, ಕೋರ್ಟ್​ಗೆ ಬೆಲೆ ಇಲ್ವಾ?
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2024 | 7:32 PM

ವಿಜಯಪುರ, ಆ.30: ಸದ್ಯ ವಿವಿಧ ಏತ ನೀರಾವರಿ ಯೋಜನೆಗಳಿಂದ ಸ್ವಲ್ಪ ಮಟ್ಟಿಗೆ ಬರದ ಛಾಯೆ ಕಡಿಮೆಯಾಗಿದೆ. ಇಷ್ಟರ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆಗೆ ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆ ಉದ್ದೇಶಕ್ಕಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಲಾಗಿದೆ. ಇಂತಹ ಒಂದು ಜಿನುಗು ಕೆರೆಯನ್ನು ಇಂಡಿ ಪಟ್ಟಣದ ವಸಂತ ನಗರದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ 2004 ರಲ್ಲಿ ನಿರ್ಮಾಣ ಮಾಡಲಾಗಿದ್ದು, ಅದಕ್ಕೋಸ್ಕರ 14 ಜನ ರೈತರಿಂದ ಒಟ್ಟು 16 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ಹೆಚ್ಚಿನ ಪರಿಹಾರದ ಹಣ ನೀಡಲು ಕೋರ್ಟ್​ ಮೊರೆ

ಆಗ ಸ್ವಾಧೀನ ಮಾಡಿಕೊಂಡ ಪ್ರತಿ ಎಕರೆ ಭೂಮಿಗೆ 4.16 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಮಂಜೂರು ಮಾಡಿತ್ತು. ಇದೇ ಜಿನುಗು ಕೆರೆ ನಿರ್ಮಾಣಕ್ಕಾಗಿ ಭೂಮಿಯನ್ನು ಕಳೆದುಕೊಂಡ ರೈತರು ನಮ್ಮ ಭೂಮಿಗೆ ನೀಡಿದ ಪರಿಹಾರ ಕಡಿಮೆಯಾಗಿದೆ ಎಂದು ಪ್ರಶ್ನಿಸಿ, ಹೆಚ್ಚಿನ ಪರಿಹಾರದ ಹಣ ನೀಡಬೇಕೆಂದು 2016 ರಲ್ಲಿ ಕಲಬುರಗಿಯ ಹೈಕೋರ್ಟ್ ಮೊರೆ ಹೋಗಿದ್ದರು. 2016 ರಿಂದ 2022 ರವರೆಗೆ ಸುದೀರ್ಘ ವಿಚಾರಣೆ ಬಳಿಕ 2022 ರಲ್ಲಿ ಕಲಬುರಗಿ ಹೈಕೋರ್ಟ್ 14 ಜನ ರೈತರ ಪ್ರತಿ ಎಕರೆ ಭೂಮಿಗೆ 19.66 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.

ಇದನ್ನೂ ಓದಿ:ರೈತರಿಗೆ ಪರಿಹಾರ ನೀಡದ ಅಧಿಕಾರಿಗಳು: ರಾಯಚೂರು ಸಹಾಯಕ ಆಯುಕ್ತರ ಕಚೇರಿ ವಸ್ತುಗಳು ಜಪ್ತಿ

ಹೈಕೋರ್ಟ್ ಆದೇಶ ಜಾರಿಯಾಗಿ ಎರಡು ವರ್ಷಗಳಾದರೂ ಇನ್ನೂ ಸಣ್ಣ ನೀರಾವರಿ ಇಲಾಖೆ ರೈತರಿಗೆ ಪರಿಹಾರದ ಹಣ ನೀಡಿಲ್ಲ. ಇದಕ್ಕಾಗಿ ನ್ಯಾಯಾಲಯದ ಅನುಮತಿ ಪಡೆದು ವಿಜಯಪುರದ ಸಣ್ಣ ನೀರಾವರಿ ಇಲಾಖೆಯ ಚರಾಸ್ಥಿಗಳನ್ನು ಜಪ್ತಿ ಮಾಡಲಾಯಿತು. ಕೆಲ ಕಂಪ್ಯೂಟರ್​ಗಳನ್ನು ಬಿಟ್ಟರೆ ರೈತರ ಪರವಾಗಿ ಬಂದ ನ್ಯಾಯವಾದಿಗಳಿಗೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ಇಲ್ಲಿನ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಇತರೆ ಅಧಿಕಾರಿಗಳು ತಮ್ಮ ತಮ್ಮ ಕಚೇರಿಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ. ಕೆಟ್ಟು ಹೋದ ಸ್ಥಿತಿಯಲ್ಲಿದ್ದ 16 ಕಂಪ್ಯೂಟರ್​ಗಳನ್ನು ಮಾತ್ರ ಜಪ್ತಿ ಮಾಡಲಾಗಿದೆ. ಈ ವೇಳೆ ರೈತರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೈಕೋರ್ಟ್ ಆದೇಶದಂತೆ ಪರಿಹಾರದ ಹಣ ನೀಡಿ, ಇಲ್ಲವೇ ಆತ್ಮಹತ್ಯೆಗೆ ಶರಣಾಗೋದು ಮಾತ್ರ ಬಾಕಿ ಎಂದು ದುಖಃ ತೊಡಿಕೊಂಡಿದ್ದಾರೆ.

2004 ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇದಿಂದ 14 ಜನ ರೈತರಾದ ವಿಠೋಬಾ ಚೌವ್ಹಾಣ್, ನೇತಾಜಿ ಚೌವ್ಹಾಣ್, ಕಸ್ತೂರಿಬಾಯಿ ರಾಠೋಡ್, ಮಾದು ರಾಠೋಡ್, ಚಂದು ರಾಠೋಡ್, ಪ್ರವೀಣ ರಾಠೋಡ್, ಲಕ್ಷ್ಮಣ ರಾಠೋಡ್, ಕಮಲಾಬಾಯಿ ಚೌವ್ಹಾಣ್, ಸಂಗೀತಾ ರಾಠೋಡ್, ಸಚೀನ್ ಚೌವ್ಹಾಣ್, ಸಾವಳಾಬಾಯಿ ಚೌವ್ಹಾಣ್, ಶಿವಲಾಲ್ ರಾಠೋಡ್ ಹಾಗೂ ಅಣ್ಣಪ್ಪ ರಾಠೋಡ್ ತಮಗಿದ್ದ ಅಲ್ಪಸ್ವಲ್ಪ ಭೂಮಿಯನ್ನು ನೀಡಿದ್ದರು. ಇದೀಗ ಅಲ್ಲಿ ಕೆರೆ ನಿರ್ಮಾಣವಾಗಿ ವರ್ಷಗಳೇ ಕಳೆದಿವೆ. ಆದರೆ, ಇವರಿಗೆ ಸಿಗಬೇಕಾದ ಪರಿಹಾರದ ಹಣ ಸಿಗುತ್ತಿಲ್ಲ.

ಇದನ್ನೂ ಓದಿ:‘ಸರ್ಕಾರ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ನೀಡುತ್ತಿದೆ, ಆದರೆ ರೈತರಿಗೆ ಪರಿಹಾರ ನೀಡುತ್ತಿಲ್ಲ -ಆರ್.ಅಶೋಕ್

ಸರ್ಕಾರದಲ್ಲಿ ಹಣವಿಲ್ಲವಾ? ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರಿಗೆ ಉದ್ದೇಶಪೂರ್ವಕವಾಗಿ ಹಣ ನೀಡುತ್ತಿಲ್ಲವಾ ಎಂಬ ಪ್ರಶ್ನೆಗಳು ಮೂಡಿವೆ. ಸಣ್ಣ ನೀರಾವರಿ ಇಲಾಖೆಯ ಜಪ್ತಿ ವೇಳೆ 16 ಕಂಪ್ಯೂಟರ್ ಗಳು ಬಿಟ್ಟರೆ ಬೇರೆ ಏನೂ ಸಿಕ್ಕಿಲ್ಲ. ಈ ಕುರಿತು ಸಹಾಯಕ ತಾಂತ್ರಿಕ ಅಭಿಯಂತರ ಶ್ರೀನಿವಾಸ ದೇಸಾಯಿ ಎಂಬುವವರು ಮಾತನಾಡಿ, ‘ಹೈಕೋರ್ಟಿನ ಆದೇಶದಂತೆ ರೈತರಿಗೆ ಪರಿಹಾರದ ಹಣ ನೀಡಬೇಕಿದೆ. ಪರಿಹಾರದ ಹಣದ ವಿಚಾರವಾಗಿ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಕೆಲ ತಾಂತ್ರಿಕ ಕಾರಣಗಳಿಂದ ವಿಳಂಭವಾಗಿದೆ. ಆದಷ್ಟು ಬೇಗನೇ ರೈತರಿಗೆ ಪರಿಹಾರದ ಹಣ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದ್ಧಾರೆ.

2004 ರಲ್ಲಿ ಇಂಡಿ ಪಟ್ಟಣದ ವಸಂತ ನಗರದಲ್ಲಿ ಭೂ ಸ್ವಾಧೀನ ಮಾಡಿಕೊಂಡ ಜಮೀನಿಗೆ 2024 ಆದರೂ ಸರಿಯಾದ ಪರಿಹಾರ ಸಿಗದೇ ಇರೋದು ಇಂದಿನ ಕೆಟ್ಟ ವ್ಯವಸ್ಥೆಗೆ ಉದಾಹರಣೆಯಾಗಿದೆ. 2022 ರಿಂದ ಅಸಲು ಬಡ್ಡಿ ಸಮೇತ 9.50 ಕೋಟಿ ರೂಪಾಯಿ ಪರಿಹಾರದ ಹಣವನ್ನು 14 ಜನ ರೈತರಿಗೆ ನೀಡಬೇಕಿದೆ. ಇತ್ತ ಹಣವೂ ಇಲ್ಲ, ಅತ್ತ ಜಮೀನು ಇಲ್ಲ ಎಂಬ ಸ್ಥಿತಿಯಲ್ಲಿ ರೈತರಿದ್ದಾರೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಸಚಿವರು ಹಾಗೂ ಸರ್ಕಾರ ಗಮನಹರಿಸಬೇಕಿದೆ. ಕೆರೆಗಾಗಿ ಜಮೀನು ತ್ಯಾಗ ಮಾಡಿದ ರೈತರಿಗೆ ಹಣ ಸಂದಾಯ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ