ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಮನೆಯೊಳಗೆ ನುಗ್ಗಿದ ಚರಂಡಿ ನೀರು, ವಾಹನ ಸವಾರರು ಪರದಾಟ
ಮತ್ತೆ ಶುರುವಾಗಿದೆ ಮಳೆ ರಗಳೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಜನರು ಪರದಾಡುವಂತ್ತಾಗಿದೆ.
ವಿಜಯಪುರ: ಕಳೆದ ರಾತ್ರಿ ವಿಜಯಪುರ ಜಿಲ್ಲೆಯ ಕೆಲ ಭಾಗಗಳಲ್ಲಿ ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಎತ್ತು ಬಲಿಯಾದಂತಹ ಘಟನೆ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಖಾನಿಕೇರಿ ಗ್ರಾಮದಲ್ಲಿ ನಡೆದಿದೆ. ಖಾನಿಕೇರಿ ಗ್ರಾಮದ ರೈತ ಗದ್ದೆಪ್ಪ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಅಂದಾಜು 80 ಸಾವಿರ ರೂಪಾಯಿ ಮೌಲ್ಯದ ಎತ್ತಾಗಿದ್ದು, ತೋಟದ ಶೆಡ್ನಲ್ಲಿ ಕಟ್ಟಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಕಂದಾಯ ಇಲಾಖೆ ಆಧಿಕಾರಿಗಳು ಭೇಟಿ ನೀಡಿದ್ದು, ರೈತ ಗದ್ದೆಪ್ಪಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ರೇಲ್ವೆ ಅಂಡರ್ ಪಾಸ್ನಲ್ಲಿ ನೀರು; ವಾಹನ ಸವಾರರ ಪರದಾಟ
ದಾವಣಗೆರೆ: ಮಳೆ ರಗಳೆ ಮತ್ತೆ ಶುರುವಾಗಿದ್ದು, ಬೆಣ್ಣೆ ನಗರಿ ದಾವಣಗೆರೆಯಲ್ಲಿ ರೇಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದೆ. ನಗರದ ಮಹಾನಗರ ಪಾಲಿಕೆ ಎದುರು ಇರುವ ಹೊಸ ದಾವಣಗೆರೆ ಹಾಗೂ ಹಳೇ ದಾವಣಗೆರೆ ಸಂಪರ್ಕ ಕಲ್ಪಿಸುವ ರೇಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಹತ್ತು ದಿನಗಳ ಹಿಂದೆ ಸುರಿದ ಮಳೆಗೆ ತುಂಬಕೊಂಡಿದ್ದ ನೀರು ಖಾಲಿಮಾಡಲು ಪಾಲಿಕೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಮಳೆಯಿಂದಾಗಿ ಮನೆಗೆ ನುಗ್ಗಿದ ಚರಂಡಿ ನೀರು
ರಾಯಚೂರು: ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿರುವಂತಹ ಘಟನೆ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಭಾರಿ ಮಳೆ ಹಿನ್ನೆಲೆ ಪಿಂಚಿನಿಪುರ ವಾರ್ಡ್ ನಂಬರ್ 11ರ ಮನೆಗಳಿಗೆ ಚರಂಡಿ ನೀರು ಸಮೇತ ಮನೆಗೆ ನೀರು ನುಗ್ಗಿದೆ. ಹೀಗಾಗಿ ನಿನ್ನೆ ಇಡೀ ರಾತ್ರಿ ನಿವಾಸಿಗಳು ಪೇಚಿಗೆ ಸಿಲುಕಿದ್ದರು. ಮಹಿಳೆಯರು, ಮಕ್ಕಳು, ವೃದ್ಧರಿಂದ ಇಡೀ ರಾತ್ರಿ ಜಾಗರಣೆ ಮಾಡುವಂತ್ತಾಗಿದೆ. ಲಿಂಗಸುಗೂರು ಪಟ್ಟಣದ ಕೆಲ ಹೋಟೆಲ್ ಹಾಗೂ ಗ್ಯಾರೇಜ್ಗಳಿಗೂ ಸಹ ನೀರು ನುಗ್ಗಿದೆ.
ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ ಸಾಧ್ಯತೆ:
ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು (Monsoon) ಪ್ರವೇಶವಾಗುವ ಸಾಧ್ಯತೆಯಿದ್ದು, ಮಳೆಯ ಆರ್ಭಟ ಹೆಚ್ಚಾಗಲಿದೆ. ಜೂನ್ 2ಕ್ಕೆ ಕರ್ನಾಟಕಕ್ಕೂ ಮಾನ್ಸೂನ್ ಪ್ರವೇಶವಾಗಲಿದ್ದು, ಮಳೆಯ ಆರ್ಭಟ ಹೆಚ್ಚಾಗಲಿದೆ. ಜೂನ್ 2ರೊಳಗೆ ಕರ್ನಾಟಕದ (Karnataka Rains) ಕೆಲವು ಭಾಗಗಳಿಗೆ ನೈಋತ್ಯ ಮಾನ್ಸೂನ್ ಅಪ್ಪಳಿಸಲು ಸಿದ್ಧವಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಉತ್ತರ ಕನ್ನಡ, ಕರಾವಳಿ ಜಿಲ್ಲೆಗಳು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಶಿವಮೊಗ್ಗ, ರಾಮನಗರ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಇನ್ನೆರಡು ದಿನದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ವರದಿಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ 7 ಮಿಮೀವರೆಗಿನ ಮಳೆ ಬೀಳಬಹುದು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.