ಗ್ರಾಹಕರ ಹಣದ ಸುರಕ್ಷತೆಗೆ ಹೆಸರುವಾಸಿಯಾದ ಪೋಸ್ಟ್ ಆಫೀಸ್​ನಲ್ಲಿಯೂ ಇಲ್ಲ ಹಣಕ್ಕೆ ಭದ್ರತೆ; ಯಾಕೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹಣಕಾಸು ಸಂಸ್ಥೆಗಳು, ಖಾಸಗಿ ಬ್ಯಾಂಕ್​ಗಳು ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಹಣಕಾಸಿನ ದುರುಪಯೋಗದಂತಹ ಘಟನೆಗಳು ನಡೆದಿವೆ. ಈ ಹಿನ್ನಲೆ ಜನರು ಯಾವುದನ್ನೂ ನಂಬದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟರ ಮಧ್ಯೆ ಜನರು ತಮ್ಮ ಹಣ ಸುರಕ್ಷಿತವಾಗಿರಲಿ ಎಂಬ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನರು ಕೇಂದ್ರ ಸರ್ಕಾರದ ಸ್ವಾಮ್ಯದ ಅಂಚೆ ಕಚೇರಿಗಳಲ್ಲಿ ತಮ್ಮ ಹಣವನ್ನು ಡಿಪಾಸಿಟ್ ಮಾಡುತ್ತಿದ್ದಾರೆ. ಆದರೆ, ಈಗಾ ಅದೇ ಪೋಸ್ಟ್ ಆಫೀಸಿನಲ್ಲೂ ಜನರ ಹಣ ಸೇಫ್ ಆಗಿಲ್ಲ. ಇದಕ್ಕೆ ವಿಜಯಪುರದ ಜಲನಗರದಲ್ಲಿರುವ ಪೋಸ್ಟ್ ಆಫೀಸ್ ಕಾರಣವಾಗಿದೆ. ಇಲ್ಲಿದೆ ವಿವರ.

ಗ್ರಾಹಕರ ಹಣದ ಸುರಕ್ಷತೆಗೆ ಹೆಸರುವಾಸಿಯಾದ ಪೋಸ್ಟ್ ಆಫೀಸ್​ನಲ್ಲಿಯೂ ಇಲ್ಲ ಹಣಕ್ಕೆ ಭದ್ರತೆ; ಯಾಕೆ ಗೊತ್ತಾ?
ಪೋಸ್ಟ್ ಆಫೀಸ್​ನಲ್ಲಿಯೂ ಗ್ರಾಹಕರ ಹಣಕ್ಕೆ ಇಲ್ಲ ಭದ್ರತೆ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 29, 2024 | 7:15 PM

ವಿಜಯಪುರ, ಮೇ.29: ವಿಜಯಪುರದ ಜಲ ನಗರದ ಅಂಚೆ ಕಚೇರಿ(Post Office)ಯಲ್ಲಿ ಗ್ರಾಹಕರ ಖಾತೆಯಿಂದ ಸಿಬ್ಬಂದಿಯೇ ಹಣ ಎಗರಿಸಿರುವ ಆರೋಪ ಕೇಳಿಬಂದಿದೆ. ಚೆನ್ನಬಸಯ್ಯ ಶಾಸ್ತ್ರೀಮಠ ಎಂಬುವವರು ಜಲನಗರ ಅಂಚೆ ಕಚೇರಿಯಲ್ಲಿ ಚಾಲ್ತಿ ಖಾತೆಯನ್ನು ಹೊಂದಿದ್ದಾರೆ. ತಮ್ಮ ಖಾತೆಯಲ್ಲಿ ಚೆನ್ನಬಸಯ್ಯ 2,22,442 ಹಣವನ್ನು ಇಟ್ಟಿದ್ದರು. ಈ ಹಣದಲ್ಲಿ ಮೇ.27 ರಂದು 1,50,000 ಹಣ ಡ್ರಾ ಆಗಿದೆ ಎಂದು ಚೆನ್ನಬಸಯ್ಯ ಅವರಿಗೆ ಮೆಸೇಜ್ ಬಂದಿದೆ. ‘ನಾನು ಹಣವನ್ನೇ ಡ್ರಾ ಮಾಡಿಲ್ಲ, ಆದರೂ ನನ್ನ ಖಾತೆಯಿಂದ 1.50 ಲಕ್ಷ ರೂಪಾಯಿ ಡೆಬಿಟ್ ಆಗಿದ್ದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದರು.

ಕೂಡಲೇ ಅಂಚೆ ಕಚೇರಿಗೆ ಹೋಗಿ ಕ್ಯಾಶಿಯರ್ ಕೆಲಸ ಮಾಡುತ್ತಿದ್ದ ಶ್ರೀಕಾಂತ ಶಿವೂರ ಎಂಬುವವರಿಗೆ ಪ್ರಶ್ನೆ ಮಾಡಿದ್ದಾರೆ. ನನ್ನ ಖಾತೆಯಿಂದ ಹಣವನ್ನೇ ತೆಗೆದಿಲ್ಲ. ಆದರೂ ಹಣ ಹೇಗೆ ಡೆಬಿಟ್ ಆಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಆಗ ಕ್ಯಾಶಿಯರ್ ಶ್ರೀಕಾಂತ ಶಿವೂರ ‘ನಾನೇ ಹಣ ಡ್ರಾ ಮಾಡಿದ್ದು, ತುರ್ತು ಹಣ ಬೇಕಾಗಿತ್ತು ಎಂದು ಶ್ರೀಕಾಂತ ಹೇಳಿದರಂತೆ. ಇದರಿಂದ ಸಿಟ್ಟಾದ ಚೆನ್ನಬಸಯ್ಯ, ಮಾರನೇ ದಿನ ಅಂದರೆ ಮೇ.28 ರಂದು ನಗರ ಸ್ಟೇಷನ್ ರಸ್ತೆಯಲ್ಲಿರೋ ಮುಖ್ಯ ಅಂಚೆ ಕಚೇರಿಯ ಪ್ರಧಾನ ವ್ಯವಸ್ಥಾಪಕರಿಗೆ ಭೇಟಿಯಾಗಿ ಶ್ರೀಕಾಂತ ಶಿವೂರ ಮೇಲೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ಬಡ್ಡಿ ಶೇ. 7.4; ಅಧಿಕ ಬಡ್ಡಿ ಜೊತೆಗೆ ತೆರಿಗೆ ಲಾಭವೂ ಇದೆ ಎಂಐಎಸ್​ನಲ್ಲಿ

ಈ ವಿಚಾರ ಶ್ರೀಕಾಂತ ಶಿವೂರಗೆ ತಿಳಿಯತ್ತಿದ್ದಂತೆ ಕೂಡಲೇ ಚೆನ್ನಬಸಯ್ಯ ಅವರ ಖಾತೆಗೆ 1.50 ಲಕ್ಷ ಹಣವನ್ನು ಹಾಕಿದ್ಧಾರೆ. ಇದು ಅಂಚೆ ಕಚೇರಿಯ ಖಾತೆ ಹೊಂದಿರುವ ಚೆನ್ನಬಸಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಜಲನಗರ ಅಂಚೆ ಕಚೇರಿಗೆ ತೆರಳಿ ಕ್ಯಾಶಿಯರ್ ಶ್ರೀಕಾಂತ ಶಿವೂರ್ ಹಾಗೂ ಇತರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಗ್ರಾಹಕರೊಬ್ಬರು ಮಾತನಾಡಿ, ‘ನಾವು ಕಷ್ಟ ಪಟ್ಟು ಕೇಂದ್ರ ಸರ್ಕಾರದ ಆಧೀನದ ಅಂಚೆ ಕಚೇರಿಗಳನ್ನು ನಂಬಿ ಹಣ ಇಟ್ಟಿರುತ್ತೇವೆ. ದೇಶದಲ್ಲಿ ಅದೆಷ್ಟೋ ಬ್ಯಾಂಕ್​ಗಳು ಗ್ರಾಹಕರಿಗೆ ಮೋಸ ಮಾಡಿವೆ. ಅದಕ್ಕಾಗಿ ನಾವು ಅಂಚೆ ಕಚೇರಿಗಳನ್ನು ನಂಬಿ ಹಣ ಇಟ್ಟಿದ್ದೇವೆ. ಇಲ್ಲಿನ ಸಿಬ್ಬಂದಿ ಮಾಡಿದ ತಪ್ಪಿಗೆ ಇತರರ ಮೇಲೂ ನಮಗೆ ಸಂಶಯ ಮೂಡುತ್ತದೆ. ಅಂಚೆ ಕಚೇರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಗ್ರಾಹಕರು ಅಸಮಾಧಾನ ಹೊರ ಹಾಕಿದರು.

ಈ ಘಟನೆ ಕುರಿತು ಮಾತನಾಡಿದ ಅಂಚೆ ಕಚೇರಿಯ ಕ್ಯಾಶಿಯರ್ ಶ್ರೀಕಾಂತ ಶಿವೂರ ಮೊದಲು ಹಣ ತೆಗೆದು ತಪ್ಪು ಮಾಡಿದ್ದೇನೆ ಎಂದು ಹೇಳಿದ್ದರು. ಬಳಿಕ ಹಣವನ್ನು ಒಂದು ಅಕೌಂಟಿನಿಂದ ಮತ್ತೊಂದು ಅಕೌಂಟ್ ಗೆ ಟ್ರಾನ್ಸಫರ್ ಮಾಡುವಾಗ ನಡೆದ ತಪ್ಪಿನಿಂದ ಚೆನ್ನಬಸಯ್ಯ ಅವರ ಖಾತೆಯಿಂದ ಹೈದರಾಬಾದ್ ನಲ್ಲಿನ ಗ್ರಾಹಕರ ಖಾತೆಗೆ ಹಣ ಸಂದಾಯವಾಗಿದೆ. ಆ ಗ್ರಾಹಕರ ಮನವೋಲಿಕೆ ಮಾಡಿ ಹಣವನ್ನು ವಾಪಸ್ ಪಡೆಯಲಾಗುತ್ತದೆ. ಸದ್ಯ ಚೆನ್ನಬಸಯ್ಯ ಅವರ ಖಾತೆಯಿಂದ ಮತ್ತೊಂದು ಖಾತೆಗೆ ಹೋಗಿದ್ದ 1.50 ಲಕ್ಷ ಹಣವನ್ನು ನಾನು ಭರಿಸಿದ್ದೇನೆ. ಹಣ ಹೋಗಿರೋ ಖಾತೆಯಿಂದ ಹಣವನ್ನು ವಾಪಸ್ ಪಡೆಯಲಾಗುತ್ತದೆ. ಅವರು ಹಾಕದಿದ್ರೂ ನಾವು ನಮ್ಮ ಕೈಯ್ಯಿಂದ ಹಾಕುತ್ತೇವೆ. ಆದರೆ ನಾನು ಉದ್ದೇಶಪೂರ್ವಕವಾಗಿ ಇವರ ಖಾತೆಯಿಂದ ಹಣ ಹಾಕಿಲ್ಲಾ ಎಂದು ಸಬೂಬು ಹೇಳಿದ್ದಾರೆ.

ಇದನ್ನೂ ಓದಿ: 520 ರೂಗೆ 10 ಲಕ್ಷ ರೂ; 12 ರೂಗೆ 2 ಲಕ್ಷ ರೂ ಆಕ್ಸಿಡೆಂಟ್ ಕವರೇಜ್ ಕೊಡುವ ಅಂಚೆ ಕಚೇರಿ ಸ್ಕೀಮ್​ಗಳು

ಒಟ್ಟಾರೆ ಅಂಚೆ ಕಚೇರಿಯ ಗ್ರಾಹಕರೋರ್ವರ ಖಾತೆಯಿಂದ ಗ್ರಾಹಕರಿಗೆ ಗೊತ್ತಿಲ್ಲದಂತೆ ಹಣ ಡ್ರಾ ಮಾಡಿದ ಘಟನೆ ಕುರಿತು ಇದೀಗಾ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಜಯಪುರ ನಗರದ ಜಲ ನಗರದಲ್ಲಿರೋ ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿರೋ ಚೆನ್ನಬಸಯ್ಯ ಶಾಸ್ತ್ರೀಮಠ ಅವರ ಖಾತೆಯಿಂದ ಹಣವನ್ನು ಅಂಚೆ ಕಚೇರಿಯ ಕ್ಯಾಶಿಯರ್ ಹಣ ಡ್ರಾ ಮಾಡಿಕೊಂಡು ನಂತರ ಆ ವಿಚಾರದ ಕುರಿತು ಗ್ರಾಹಕರು ದೂರು ನೀಡಲು ಮುಂದಾಗಿತ್ತಿದ್ದಂತೆ ವಾಪಸ್ ಹಣ ಹಾಕಿರೋದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಮೇಲಾಧಿಕಾರಿಗಳು ಗಮನ ಹರಿಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಅಂಚೆ ಕಚೇರಿಮೇಲೆ ಜನರು ಇಟ್ಟಿರೋ ನಂಬಿಕೆ ಮಾಯವಾಗುತ್ತದೆ……

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ