ಮುಸ್ಲಿಂ ಧರ್ಮಗುರು ವಿರುದ್ಧ ಮತ್ತೆ ಗುಡುಗಿದ ಯತ್ನಾಳ್: ತನ್ವೀರ್ ಪೀರಾ ಕೊಲೆ ಆರೋಪಿ ಎಂದು ಟ್ವೀಟ್
ವಿಜಯಪುರದ ಹಾಸೀಂಪೀರಾ ದರ್ಗಾದ ಧರ್ಮ ಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮೀಂ ಅವರಿಗೆ ಉಗ್ರರ ಜೊತೆ ನಂಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ತನ್ವೀರ್ ಪೀರಾ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ.
ವಿಜಯಪುರ, ಡಿಸೆಂಬರ್ 08: ಹುಬ್ಬಳ್ಳಿಯಲ್ಲಿ (Hubballi) ನಡೆದ ಮುಸ್ಲಿಂ ಸಮಾವೇಶದಲ್ಲಿ ಮುಖ್ಯ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮೀಂ ಅವರಿಗೆ ಉಗ್ರರ ಜೊತೆ ನಂಟಿದೆ ಎಂದು ವಿಜಯಪುರದ (Vijyapura) ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪ ಮಾಡಿದ್ದರು. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ತನ್ವೀರಾ ಪೀರಾ (Tanveer Peera) ಅವರ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ. ಧರ್ಮಗುರು ತನ್ವೀರ್ ಪೀರಾ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. “ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ” ಸಮೇತ ಟ್ವೀಟ್ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ.
1/1 pic.twitter.com/Xr3dlhO4bQ
— Basanagouda R Patil (Yatnal) (@BasanagoudaBJP) December 7, 2023
“ಕೊಲೆ ಪ್ರಕರಣದಲ್ಲಿ ಈತನ ಮೇಲೆ ಪೊಲೀಸರು ಹಾಕಿದ್ದ ದೋಷಾರೋಪ ಪಟ್ಟಿ (ಚಾರ್ಜಶೀಟ್) ನಿಂದ ಈತನ ಹೆಸರು ಕೈಬಿಟ್ಟಿದ್ದು ಏಕೆ ? ಯಾರ ಒತ್ತಡದಿಂದ ಈತನ ಹೆಸರನ್ನು ಚಾರ್ಜಶೀಟ್ನಿಂದ ತೆಗಿಸಲಾಯಿತು? ತನಿಖೆ ವೇಳೆ ಕೊಲೆಯಲ್ಲಿ ಈತ ಭಾಗಿಯಾಗಿದ್ದ ಎಂಬ ಶಂಕೆಯಿಂದ ಚಾರ್ಜಶೀಟ್ನಲ್ಲಿ ಮೊದಲು ಈತನ ಹೆಸರನ್ನು ಹಾಕಿ, ನಂತರ ತೆಗೆದು ಹಾಕಿದ್ದು ಯಾರ ಒತ್ತಡದಿಂದ ಎಂದು ಸರ್ಕಾರ ಹೇಳಲಿ” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ತನ್ವೀರ್ ಪೀರಾಗೆ ಐಸಿಸ್ ನಂಟು: ಯತ್ನಾಳ್ ಸಾಬೀತುಪಡಿಸಿದರೆ ದೇಶ ಬಿಟ್ಟು ಹೋಗುತ್ತೇನೆ ಎಂದ ಮುಸ್ಲಿಂ ಧರ್ಮಗುರು
“ವೇದಿಕೆ ಮೇಲೆ ಕೊಲೆ ಆರೋಪಿತನಿಗೆ ಏನು ಕೆಲಸ ? ಇವನನ್ನು ವೇದಿಕೆ ಮೇಲೆ ಏಕೆ ಬಿಟ್ಟರು ? ಒಂದು ಬಡ ಕುಟುಂಬಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿ ಅಥವಾ ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಶ್ಯಕತೆ ಏನಿತ್ತು? ಈತನ ಬಗ್ಗೆ ಇನ್ನಷ್ಟು ಮಾಹಿತಿ ಅತಿ ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇನೆ. ಈತ ದೇಶದಿಂದ ಕಾಲ್ಕಿತ್ತುವ ಸಾಧ್ಯತೆಗಳಿದ್ದು ಪೊಲೀಸರು ಹಾಗೂ ಗುಪ್ತಚರ ಇಲಾಖೆ ತನ್ವೀರ್ ಪೀರಾನ ಮೇಲೆ ನಿಗಾ ವಹಿಸಬೇಕು” ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯನವರು “ನಮ್ಮ ಪೊಲೀಸರು ತನ್ವೀರ್ ಪೀರಾ ಮನೆಗೆ ಹೋಗೋದು ಬೇಡ ಅಂತಾರೆ”. ಹೀಗೆ ಅಂದ ಮೇಲೂ ಸ್ವತಃ ಸಿದ್ದರಾಮಯ್ಯನವರೇ ತನ್ವೀರ್ ಪೀರಾ ಅವರ ಮನೆಗೆ ಹೋಗಿರುವುದು ಓಲೈಕೆ ಅಲ್ಲದೆ ಮತ್ತೇನು? ಪೊಲೀಸರು ಸೂಕ್ಷ್ಮವಾಗಿ ಅವರ ಮನೆಗೆ ಹೋಗೋದು ಬೇಡ ಸಮಯ ಆಗಿದೆ ಅಂತ ಹೇಳಿದ ಮೇಲೂ ಸಿದ್ದರಾಮಯ್ಯನವರು ಪೀರಾ ಮನೆಗೆ ಭೇಟಿ ಕೊಟ್ಟಿದ್ದರು” ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 am, Fri, 8 December 23