ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟ; ವಿಜಯಪುರದ ಇಬ್ಬರು ಪಾಸ್
ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಮೂಲದ ವಿಜೇತಾ ಭೀಮಸೇನ ಹೊಸಮನಿ ಅವರು 100 ನೇ ರ್‍ಯಾಂಕ್ ಪಡೆದರೆ, ಸಂತೋಷ ಶ್ರೀಕಾಂತ ಶಿರಾಡೋಣ ಎಂಬುವವರು 641 ನೇ ರ್‍ಯಾಂಕ್ ಪಡೆದಿದ್ದಾರೆ. ಇಬ್ಬರೂ ಕೂಡ ಸತತ ಪ್ರಯತ್ನದಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ.
ವಿಜಯಪುರ, ಏ.16: ಯುಪಿಎಸ್ಸಿ(UPSC) ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ(Vijayapura) ಮೂಲದ ವಿಜೇತಾ ಭೀಮಸೇನ ಹೊಸಮನಿ ಅವರು 100 ನೇ ರ್‍ಯಾಂಕ್ ಪಡೆದರೆ, ಸಂತೋಷ ಶ್ರೀಕಾಂತ ಶಿರಾಡೋಣ ಎಂಬುವವರು 641 ನೇ ರ್‍ಯಾಂಕ್ ಪಡೆದಿದ್ದಾರೆ. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿರುವ ವಿಜೇತಾ ಹಾಗೂ ಕುಟುಂಬದವರು, ಮಗಳ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಎಲ್ಕೆಜಿಯಿಂದ ಐದನೇ ತರಗತಿವರೆಗೆ ವಿಜಯಪುರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಅಭ್ಯಾಸ ಮಾಡಿದ ಇವರು, 6 ರಿಂದ 10th ವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಹಾಗೂ ಪಿಯುಸಿ ಪ್ರಥಮ ವರ್ಷ ವಿಜಯಪುರ ನಗರದ ತುಂಗಳ ಕಾಲೇಜು, ಪಿಯುಸಿ ದ್ವಿತೀಯ ದರಬಾರ್ ಕಾಲೇಜ್ ವಿಜಯಪುರದಲ್ಲಿ ಪೂರ್ಣಗೊಳಿಸಿದ್ದಾರೆ.
ಕ್ರಿಮಿನಲ್ ಲಾ ದಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದ ವಿಜೇತಾ
ಪ್ಲ್ಯಾಟ್ ಎಕ್ಸಾಂ ಉತ್ತೀರ್ಣವಾಗಿ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಬಿಎಎಲ್ಎಲ್ ಪದವಿ ಪಡೆದು ಕ್ರಿಮಿನಲ್ ಲಾ ದಲ್ಲಿ ಗೋಲ್ಡ್ ಮೆಡಲ್ ಮುಡಿಗೇರಿಸಿಕೊಂಡಿದ್ದಾರೆ. 2020 ರಿಂದ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ ಇವರು, 2023 ರಲ್ಲಿ ಉತ್ತೀರ್ಣರಾಗಿದ್ದಾರೆ. ಆನ್ ಲೈನ್ ತರಬೇತಿ ಹಾಗೂ ಮನೆಯಲ್ಲೇ ಹೆಚ್ಚಿನ ಅಭ್ಯಾಸ ಮಾಡಿ ಸಾಧನೆ ಮಾಡಿದ ವಿಜೇತಾ ಅವರಿಗೆ ಇಂಡಿಯನ್ ರೆವೆನ್ಯೂ ಸರ್ವೀಸ್ ನಲ್ಲಿ ಸ್ಥಾನ ಸಿಗೋ ಸಾಧ್ಯತೆಯಿದೆ.
ಇದನ್ನೂ ಓದಿ:ಯುಪಿಎಸ್ಸಿಯಲ್ಲಿ 440ನೇ ರ್‍ಯಾಂಕ್ ಪಡೆದ ಕಿರಾಣಿ ವರ್ತಕರ ಮಗಳು
ಯುಪಿಎಸ್ಸಿಯಲ್ಲಿ 641 ರ್ಯಾಂಕ್ ಪಡೆದ ಸಂತೋಷ
ಸಂತೋಷ ಶ್ರೀಕಾಂತ ಶಿರಾಡೋಣ ಅವರು ಯುಪಿಎಸ್ಸಿಯಲ್ಲಿ 641 ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ನಗರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾಭ್ಯಾಸ ಮಾಡಿದ ಇವರು, 6 ರಿಂದ 8 ತರಗತಿ ಗದಗ ತಾಲೂಕಿನ ಹುಲಕೋಟಿಯ ರಾಜರಾಜೇಶ್ವರಿ ಪ್ರೌಢ ಶಾಲೆ ಹಾಗೂ 8 ರಿಂದ 10th ವಿಜಯಪುರ ತಾಲೂಕಿನ ಕಗ್ಗೋಡದ ಸಂಗನಬಸವ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.ನಂತರ ಪಿಯುಸಿ ಹೈದರಾಬಾದಿನ ವಿಚೇತನಾ ಕಾಲೇಜಿನಲ್ಲಿ, ಬೆಂಗಳೂರಿನ ಆರ್ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದುಕೊಂಡಿದ್ದಾರೆ. ಇನ್ನು ದೆಹಲಿಯ ವಾದಿರಾಮ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದಿದ್ದ ಸಂತೋಷ್, 2019 ನಿಂದ ಯುಪಿಎಸ್ಸಿಗೆ ಪ್ರಯತ್ನ ಮಾಡಿದ್ದು, 2023 ರಲ್ಲಿ ಉತ್ತೀರ್ಣರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ