ನಮ್ಮ ಗಂಡು ನರೇಂದ್ರ ಮೋದಿ, ಕಾಂಗ್ರೆಸ್ ನಲ್ಲಿ ಮದುವೆ ಗಂಡು ಇಲ್ಲ: ಸಿಟಿ ರವಿ
ಲೋಕಸಭೆ ಹಿನ್ನಲೆ ವಿಜಯಪುರ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಟಿ ರವಿ, ‘ ‘ಕಾಂಗ್ರೆಸ್ನಲ್ಲಿ ಮದುವೆ ಗಂಡು ಇಲ್ಲ, ಯಾರು ಗಂಡು ಎಂದು ಅವರಿಗೆ ಗೊತ್ತಿಲ್ಲ. ಆದರೆ, ಹತ್ತಾರು ಯೋಜನೆ ಮಾಡಿರುವ ನರೇಂದ್ರ ಮೋದಿ ಅವರು ನಮ್ಮ ಗಂಡು ಎನ್ನುವ ಮೂಲಕ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ವಿಜಯಪುರ, ಏ.16: ದೇಶಕ್ಕೆ ಮೋದಿ, ವಿಜಯಪುರಕ್ಕೆ ಜಿಗಜಿಣಗಿ ಎಂದು ಸಿಟಿ ರವಿ(CT Ravi) ಹೇಳಿದ್ದಾರೆ. ವಿಜಯಪುರ (Vijayapura) ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಇಂದು(ಏ.16) ಹಮ್ಮಿಕೊಂಡಿದ್ದ ಬಿಜೆಪಿ(BJP) ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ ನಮ್ಮದು ಜನತಾದಳದ್ದು ಹೊಸ ಸಂಬಂಧ ಅಲ್ಲ, ಇದು ಹಳೆಯ ಸಂಬಂಧ. 1977 ರ ತುರ್ತು ಪರಿಸ್ಥಿತಿಯಲ್ಲಿ ಹಾಗೂ ರಾಮಕೃಷ್ಟ ಹೆಗಡೆ ಸಿಎಂ ಆಗಿದ್ದಾಗ ಕೂಡ ಬಿಜೆಪಿ ಬೆಂಬಲ ನೀಡಿದ್ದೇವೆ. ಹಿಂದೆ 20-20 ಮ್ಯಾಚ್ ಇದ್ದಾಗ ಕುಮಾರಸ್ವಾಮಿ ಸಿಎಂ ಮಾಡಿದ್ದೇವೆ. ದೇವೇಗೌಡರು ನಮಗೆ ಮಂಡಿ ನೋವಿದೆ. ಆದರೆ, ಬುದ್ದಿ ಇದೆ, ಹಾಗಾಗಿ ಮೋದಿ ಅವರಿಗೆ ಬೆಂಬಲ ನೀಡಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಮದುವೆ ಗಂಡು ಇಲ್ಲ, ಯಾರು ಗಂಡೆಂದು ಅವರಿಗೆ ಗೊತ್ತಿಲ್ಲ
ಇದೇ ವೇಳೆ ನೆರೆದ ಜನರ ಎರಡೂ ಕೈ ಮುಷ್ಟಿ ಕಟ್ಟಿಸಿ ಭಾರತ ಮಾತಾಕಿ, ಹರ ಹರ ಮಹಾದೇವ, ಬಸವಣ್ಣ, ಕನಕದಾಸ, ವಾಲ್ಮೀಕಿ ಅಂಬೇಡ್ಕರ್ ಪರ ಜಯ ಘೋಷ ಹಾಕಿಸಿದರು. ‘ಕಾಂಗ್ರೆಸ್ನಲ್ಲಿ ಮದುವೆ ಗಂಡು ಇಲ್ಲ, ಯಾರು ಗಂಡು ಎಂದು ಅವರಿಗೆ ಗೊತ್ತಿಲ್ಲ. ಮದುವೆಗೆ ಗಂಡೇ ಇಲ್ಲದೇ ಮದುವೆ ಹೇಗೆ?, ರಾಹುಲ್ ಗಾಂಧಿ ಮದುವೆ ಗಂಡು ಎಂದರೆ ಓಡಿ ಹೋಗುತ್ತಾರೆ. ನಮ್ಮ ಗಂಡು ನರೇಂದ್ರ ಮೋದಿ, ಹತ್ತಾರು ಯೋಜನೆ ಮಾಡಿರೋ ಗಂಡು ನಮ್ಮ ಮೋದಿ. ಹತ್ತು ಕೆಜಿ ಅಕ್ಕಿ ಎಲ್ಲಿ, ಮೋದಿ ಕೊಡುವ ಅಕ್ಕಿ ಬಿಟ್ಟು, ಎಲ್ಲಿದೆ ಅಕ್ಕಿ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್, ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ನೆಲೆ ಹುಡುಕಬೇಕಷ್ಟೆ: ಸಿಟಿ ರವಿ ವ್ಯಂಗ್ಯ
2004 ರಿಂದ 2014 ರವರೆಗೆ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದೇವು. ಆಕಾಶ ಭೂಮಿ ಪಾತಾಳದಲ್ಲೂ ಲೂಟಿ ಹೊಡೆದರು. ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಬಾಂಬ್ ಸ್ಪೋಟದ ಸುದ್ದಿಗಳೇ ಇರುತ್ತಿದ್ದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಾಂಬ್ ತಯಾರಿಕೆ ಆರಂಭವಾಗಿವೆ. ಮಂಗಳೂರಿನಲ್ಲಿ ಶಾಲೆಯಲ್ಲಿ ಬಾಂಬ್ ಸ್ಪೋಟ್ ಮಾಡಲು ಹೋಗುವಾಗಲೇ ದಾರಿಯಲ್ಲಿ ಸ್ಪೋಟವಾಗಿ ಅನಾಹುತ ತಪ್ಪಿತ್ತು. ಆದರೆ, ಸ್ಪೋಟ ಮಾಡಲು ಹೊರಟಿದ್ದವರನ್ನು ಬ್ರದರ್ಸ್ ಎಂದು ಡಿಕೆ ಶಿವಕುಮಾರ್ ಹೇಳಿದರು. ಈಗಲೂ ಅದೇ 41 ಜನ ಬ್ರದರ್ಸ್ಗಳನ್ನು ಎನ್ಐಎ ಬಂಧಿಸಿದೆ.
ದೇಶ ಉಳಿಸೋರನ್ನು ನೋಡಿ ಮತ ಹಾಕಿ
ಯೋಗಿ ಥರ ಬುಲ್ಡೋಜರ್ ಚಾಲೂ ಮಾಡಿದರೆ ಇವರಿಗೆ ಬಲೆ ಹಾಕಲು ಸಾಧ್ಯ. ಈ ಚುನಾವಣೆ ಜಾತಿಯ ಮೇಲಲ್ಲ, ನೀತಿ ಮೇಲೆ ನಡೆದಿದೆ. ನಮ್ಮ ದೇಶ ಉಳಿಸೋರು ಯಾರು ಎಂದು ನೋಡಿ ಮತ ಹಾಕೋ ಚುನಾವಣೆ ಇದು, ದೇಶದ ಮಕ್ಕಳ ಭವಿಷ್ಯ ಯೋಚಿಸುವವರಿಗೆ ಮತ ಹಾಕಿ. ಕಾಂಗ್ರೆಸ್ ಹೊತ್ತಿ ಉರಿಯೋ ಮನೆ, ಹತ್ತಿರ ಹೋದರೆ ಭಸ್ಮವಾಗುತ್ತೀರಿ ಎಂದು ಅಂಬೇಡ್ಕರ್ ಹೇಳಿದ್ದರು. ಅದೇ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಇಲ್ಲ, ಬದಲಾವಣೆ ಮಾಡುತ್ತೇವೆಂಬುದು ಸುಳ್ಳು ಎಂದರು.
ಇದನ್ನೂ ಓದಿ:ಈಗ ನಡೆಯುತ್ತಿರುವುದು ಲೋಕಸಭಾ ಚುನಾವಣೆ ಅಂತ ಸಿಎಂ ಸಿದ್ದರಾಮಯ್ಯ ಮರೆತಂತಿದೆ: ಸಿಟಿ ರವಿ
ಮೀಸಲಾತಿ ಹೆಚ್ಚಳ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಕೂಡ ಬಿಜೆಪಿ. ಮೋದಿ ಗ್ಯಾರಂಟಿ ದೇಶ ಉಳಿಸುತ್ತದೆ. ಅಮೆರಿಕದಲ್ಲಿ ಕೊರೋನಾ ಲಸಿಕೆಗೆ ಒಂದೂವರೆ ಲಕ್ಷ ರೂಪಾಯಿಯಾದರೆ, ಮೋದಿ ನಮಗೆ ಉಚಿತ ಲಸಿಕೆ ನೀಡಿದ್ದಾರೆ. ಅವರ ಋಣ ತೀರಿಸಬೇಕಿದೆ. ಇತ್ತ ಕಾಂಗ್ರೆಸ್ ಕ್ವಾಟರ್ ಮದ್ಯದ ದರ 50 ರೂಪಾಯಿ ಏರಿಕೆ ಮಾಡಿದರು. ಮದ್ಯ ಏರಿಕೆ ಮಾಡಿದ ಹಣವನ್ನು ಮಹಿಳೆಯರಿಗೆ ನೀಡಲಾಗಿದೆ. ಬಸ್ ದರ ಏರಿಕೆ, ಆರ್ಟಿಸಿ ಪಹಣಿ ದರ, ವಿದ್ಯುತ್ ಸಂಪರ್ಕ ಸಹಾಯ ಧನ ಬಂದ್ ಮಾಡಿದ್ದರೆ, ಗಂಡದ್ದು ಕಿತ್ತು ಹೆಂಡತಿಗೆ ಕೊಡುತ್ತಿದ್ದಾರೆ. ಇದರ ಮೇಲೆ ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯ ಮಾತನಾಡುತ್ತಾರೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಿಡಿಕಾರಿದರು.
ನಾಳೆ ರಾಮನವಮಿ ಇದ್ದು, ರಾಮಮಂದಿರ ಆಗಲು ಐನೂರು ವರ್ಷ ಬೇಕಾಯಿತು. ಮುಂದೆ ಮಥುರೆ ಕೃಷ್ಣ, ಕಾಶಿ ವಿಶ್ವನಾಥ ಮಂದಿರವೂ ಆಗಬೇಕು. ಭಾರತ್ ಮಾತಾಕಿ ಜೈ ಎನ್ನಲು ಲಕ್ಷ್ಮಣ ಸವದಿ ಖರ್ಗೆ ಅವರ ಪರವಾನಿಗೆ ಕೇಳುತ್ತಾರೆ. ಆದರೆ, ಬಿಜೆಪಿಯಲ್ಲಿ ಭಾರತ್ ಮಾತಾಕಿ ಜೈ ಎನ್ನಲು ಯಾರ ಪರವಾನಿಗೆ ಬೇಕಿಲ್ಲ. ಇವರಿಗೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲು ಯಾರ ಪರವಾನಿಗೆ ಬೇಡಾ, ಪಂಚಾಯತಿಯಿಂದ ಪಾರ್ಲಿಮೆಂಟ್ವರೆಗೂ ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ