ವಿಜಯಪುರ ಎಸ್ಬಿಐ ಬ್ಯಾಂಕ್ ದರೋಡೆಗೆ ಮ್ಯಾನೇಜರ್, ಸಿಬ್ಬಂದಿಯ ನಿರ್ಲಕ್ಷ್ಯವೇ ನೆರವಾಯ್ತಾ? ಆಘಾತಕಾರಿ ಅಂಶ ಬಯಲು
ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮಂಗಳವಾರ ಸಂಜೆ ವೇಳೆಗೆ ಐವರು ದರೋಡೆಕೋರರ ಗ್ಯಾಂಗ್ ಬ್ಯಾಂಕ್ನಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದೆ. ಬ್ಯಾಂಕ್ ಅಧಿಕಾರಿಗಳ, ಸಿಬ್ಬಂದಿಯ, ಸೆಕ್ಯೂರಿಟಿ ಗಾರ್ಡ್ ನಿರ್ಲಕ್ಷ್ಯ ದರೋಡೆಕೋರರಿಗೆ ವರವಾಯ್ತು ಎಂಬುದು ತಿನಿಖೆ ವೇಳೆ ತಿಳಿದುಬಂದಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ. ಮತ್ತೊಂದಡೆ ಪೊಲೀಸರ ತನಿಖೆ ಚುರುಕಾಗಿ ನಡೆಯುತ್ತಿದೆ.

ವಿಜಯಪುರ, ಸೆಪ್ಟೆಂಬರ್ 18: ಸಪ್ಟೆಂಬರ್ 16 ರ ಸಾಯಂಕಾಲ ವಿಜಯಪುರ (Vijayapura) ಜಿಲ್ಲೆ ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ (SBI Bank) ದರೋಡೆಯಾಗಿತ್ತು. ಮುಸುಕು ಹಾಕಿದ್ದ ಐವರು ದರೋಡೆಕೋರರ ಗ್ಯಾಂಗ್ ಬ್ಯಾಂಕ್ ಮ್ಯಾನೇಜರ್, ಕ್ಯಾಷಿಯರ್ ಇತರೆ ಅಧಿಕಾರಿಗಳು, ಸೆಕ್ಯೂರಿಟಿ ಗಾರ್ಡ್ ಹಾಗೂ ಕೆಲ ಗ್ರಾಹಕರಿಗೆ ಕಂಟ್ರೀ ಪಿಸ್ತೂಲ್ ತೋರಿಸಿ ಕೈಕಾಲು ಕಟ್ಟಿ ಹಾಕಿ ಕೊಠಡಿಯಲ್ಲಿ ಕೂಡಿ ಹಾಕಿ ನಗದು ಚಿನ್ನಾಭರಣ ದೋಚಿತ್ತು. 1.5 ಕೋಟಿ ರೂಪಾಯಿ ನಗದು, 20 ಕೆಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿತ್ತು. ದರೋಡೆಕರರು ಬಿಡಿ ಬಿಡಿಯಾಗಿ ಮಹಾರಾಷ್ಟ್ರದತ್ತ ಪಲಾಯನ ಮಾಡಿದ್ದರು. ಓರ್ವ ದರೋಡೆಕೋರನ ಇಕೋ ವಾಹನ ಹಾಗೂ ಒಂದು ಮೊಬೈಲ್ ಪೊಲೀಸರಿಗೆ ಸಿಕ್ಕಿದ್ದು, ತನಿಖೆ ಜೋರಾಗಿ ನಡೆಯುತ್ತಿದೆ.
ಉನ್ನತ ಮೂಲಗಳ ಮಾಹಿತಿ ಪ್ರಕಾರ, ಬ್ಯಾಂಕ್ ಅಧಿಕಾರಿಗಳ, ಸಿಬ್ಬಂದಿಯ, ಸೆಕ್ಯುರಿಟಿ ಗಾರ್ಡ್ ನಿರ್ಲಕ್ಷ್ಯ ದರೋಡೆಕೋರರಿಗೆ ವರವಾಗಿ ಪರಿಣಮಿಸಿದ್ದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಬ್ಯಾಂಕ್ ಭದ್ರತೆ ವಿಚಾರದಲ್ಲಿ ಇವರೆಲ್ಲಾ ಸರಿಯಾದ ಕ್ರಮ ಪಾಲನೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗೆ ಓರ್ವ ಶಸ್ತ್ರ ಸಜ್ಜಿತ ಸೆಕ್ಯೂರಿಟಿ ಗಾರ್ಡ್ ಇರುತ್ತಾರೆ. ಹಾಗೇ ಚಡಚಣದ ಎಸ್ಬಿಐ ಬ್ಯಾಂಕಿಗೂ ಓರ್ವ ಸೆಕ್ಯೂರಿಟಿ ಗಾರ್ಡ್ ಇದ್ದ. ಆದರೆ ದರೋಡೆ ನಡೆದ ದಿನ ಈ ಸೆಕ್ಯೂರಿಟಿ ಗಾರ್ಡ್ ಎಲ್ಲಿದ್ದ? ಏನು ಮಾಡುತ್ತಿದ್ದ? ದರೋಡೆಕೋರರು ಒಳ ಹೋಗುವಾಗ ಹಾಗೂ ನಂತರ ಏನು ಮಾಡುತ್ತಿದ್ದ ಎಂದು ತನಿಖೆ ನಡೆಸಿರೋ ಪೊಲೀಸರಿಗೆ ಆಘಾತಕಾರಿ ವಿಚಾರ ತಿಳಿದು ಬಂದಿದೆ.
ಝೆರಾಕ್ಸ್, ಪಾಸ್ಬುಕ್ ಎಂಟ್ರಿ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್!
ಐವರು ದರೋಡೆಕೋರರ ಪೈಕಿ ಇಬ್ಬರು ಬ್ಯಾಂಕ್ ಹೊರಗಡೆ ನಿಂತಿದ್ದರು. ಓರ್ವ ಮೊದಲೇ ಬ್ಯಾಂಕ್ ಒಳಗಡೆ ಇದ್ದ. ಮತ್ತಿಬ್ಬರು ಬ್ಯಾಂಕ್ ಒಳಗೆ ಹೋಗಿ ಮ್ಯಾನೇಜರ್, ಕ್ಯಾಷಿಯರ್, ಇತರೆ ಅಧಿಕಾರಿಗಳು, ಸಿಬ್ಬಂದಿಗೆ ಗನ್ ತೋರಿಸಿ ಬೆದರಿಕೆ ಹಾಕಿ ಕೈಕಾಲು ಕಟ್ಟಿ ಹಾಕುವ ವೇಳೆ ಸೆಕ್ಯೂರಿಟಿ ಗಾರ್ಡ್ ತಡೆಯಲು ಹೋಗಿರಲಿಲ್ಲವೇ ಎಂದು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ, ಬ್ಯಾಂಕ್ನ ಝೆರಾಕ್ಸ್ ಕೊಠಡಿಯಲ್ಲಿ ಸೆಕ್ಯೂರಿಟಿ ಗಾರ್ಡ್ ವಿವಿಧ ದಾಖಲೆಗಳ ಝರಾಕ್ಸ್ ಮಾಡುತ್ತಿದ್ದ ಹಾಗೂ ಪಾಸ್ ಬುಕ್ ಎಂಟ್ರಿ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ದರೋಡೆಕೋರರು ಮ್ಯಾನೇಜರ್ ಸೇರಿ ಇತರರನ್ನು ಕಟ್ಟಿ, ಕೂಡಿ ಹಾಕಿದಾಗ ಅದು ಸೆಕ್ಯುರಿಟಿ ಗಾರ್ಡ್ ಗಮನಕ್ಕೇ ಬಂದಿರಲಿಲ್ಲ. ಆತನಿಗೆ ನೀಡಿದ್ದ ಬಂದೂಕು ಸಹ ಬೇರಡೆ ಇಟ್ಟಿದ್ದನಂತೆ. ಎಲ್ಲರಂತೆ ದರೋಡೆಕೋರರು ಸೆಕ್ಯೂರಿಟಿ ಗಾರ್ಡ್ನನ್ನೂ ಸಹ ಕೂಡಿ ಹಾಕಿ ದರೋಡೆ ಮಾಡಿದ್ದಾರೆ. ಇದೆಲ್ಲಾ ಬ್ಯಾಂಕ್ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ಹಾಗೂ ಇತರರು ಕಾನೂನು ಪಾಲನೆ ಮಾಡದೇ ಇರುವುದು ಕರ್ತವ್ಯ ನಿರ್ಲಕ್ಷ್ಯವಾಗಿದೆ. ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ದರೋಡೆ ನಡೆಯುವ ವೇಳೆ ತನ್ನ ಕರ್ತವ್ಯದಲ್ಲಿದ್ದರೆ ಖಂಡಿತವಾಗಿ ಈ ದರೋಡೆಗೆ ಬ್ರೇಕ್ ಹಾಕಬಹುದಿತ್ತು. ಶಸ್ತ್ರ ಸಜ್ಜಿತವಾಗಿ ಸೆಕ್ಯೂರಿಟಿ ಗಾರ್ಡ್ ಬ್ಯಾಂಕ್ ಪ್ರವೇಶ ದ್ವಾರದ ಬಳಿ ಇದ್ದಿದ್ದರೆ ದರೋಡೆಕೋರರು ಒಳಗೆ ಹೋಗುವುದನ್ನು ತಡೆಯಬಹುದಿತ್ತು. ಒಂದು ವೇಳೆ, ದರೊಡೆಕೋರರು ಗ್ರಾಹಕರಂತೆ ಒಳಗೆ ಹೋಗಿ ಕೃತ್ಯ ಮಾಡುತ್ತಿರುವಾಗಲೂ ಸೆಕ್ಯೂರಿಟಿ ಗಾರ್ಡ್ ಬಾಗಿಲ ಬಳಿ ಇದ್ದರೂ ದರೊಡೆಯನ್ನು ತಡೆಯಬಹುದಿತ್ತು. ಬ್ಯಾಂಕ್ ಬಾಗಿಲನ್ನು ಲಾಕ್ ಮಾಡುವ ಮೂಲಕ ತುರ್ತಾಗಿ ಪೊಲೀಸರಿಗೆ ಹಾಗೂ ಸುತ್ತಮುತ್ತಲ ಜನರಿಗೆ ವಿಷಯ ತಿಳಿಸಿದ್ದರೂ ಬಹುತೇಕ ದರೊಡೆಯನ್ನು ವಿಫಲ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಇಲ್ಲಿ ಸೆಕ್ಯೂರಿಟಿ ಗಾರ್ಡ್ ಝೆರಾಕ್ಸ್ ಹಾಗೂ ಪಾಸ್ ಬುಕ್ ಎಂಟ್ರಿ ಮಾಡುತ್ತಿದ್ದ ಎಂಬುದೇ ಭದ್ರತಾ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಬ್ಯಾಂಕ್ ಮ್ಯಾನೇಜರ್ ಸೇರಿ ಯಾರ್ಯಾರು ಕರ್ತವ್ಯ ನಿರ್ಲಕ್ಷ್ಯ ಎಸಗಿದ್ದಾರೋ ಅವರೆಲ್ಲರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: ವಿಜಯಪುರ ಎಸ್ಬಿಐ ಬ್ಯಾಂಕ್ ದರೋಡೆ: ಸೊಲ್ಲಾಪುರದಲ್ಲಿ ಪತ್ತೆಯಾದ ಕಾರು, ಅದರಲ್ಲಿತ್ತು ಚಿನ್ನ!
ಏತನ್ಮಧ್ಯೆ ಪೊಲೀಸರ 8 ತಂಡಗಳು ದರೋಡೆಕೋರರ ಬೆನ್ನುಬಿದ್ದಿವೆ. ದರೋಡೆಕೋರನ ಇಕೋ ವಾಹನ ಸಿಕ್ಕಿದ್ದು, ಆತನ ಮೊಬೈಲ್ ಸಿಕ್ಕಿದ್ದು ಪೊಲೀಸರ ತನಿಖೆಗೆ ಸಹಕಾರಿಯಾಗಿದೆ. ಪೊಲೀಸರ ತಂಡ ಫಂಡರಾಪುರ, ಉಮದಿ, ಜತ್ ಸಾಂಗ್ಲಿ ಸೊಲ್ಲಾಪುರ ಭಾಗದಲ್ಲಿ ಬೀಡು ಬಿಟ್ಟಿದ್ದು ದರೋಡೆಕೋರರ ಹೆಡೆಮುರಿ ಕಟ್ಟಲು ಶ್ರಮಿಸುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



