ವಿಜಯಪುರ: ದುರ್ಗಾದೇವಿ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಫೈರಿಂಗ್, ಬಾಲಕಿಗೆ ತಗುಲಿದ ಗುಂಡು
ವ್ಯಕ್ತಿ ಓರ್ವ ಗಾಳಿಯಲ್ಲಿ ಹಾರಿಸಿದ್ದ ಗುಂಡು ಬಟ್ಟೆ ಒಣಗಿಸಲು ಮನೆಯ ಮೇಲ್ಚಾವಣಿಯಲ್ಲಿ ನಿಂತಿದ್ದ ಬಾಲಕಿಯ ತೊಡೆಗೆ ತಾಗಿ, ಗಾಯಗೊಂಡಿರುವಂತಹ ಘಟನೆ ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದಲ್ಲಿ ನಡೆದ ದುರ್ಗಾ ದೇವಿ ಜಾತ್ರೆಯಲ್ಲಿ ಎರಡು ಗುಂಪುಗಳ ಮಧ್ಯೆ ನಡೆದಿದ್ದ ಜಗಳ ತಾರಕಕ್ಕೇರಿತ್ತು. ಈ ವೇಳೆ ವ್ಯಕ್ತಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

ವಿಜಯಪುರ, ಅಕ್ಟೋಬರ್ 03: ನಾಡಿನಾದ್ಯಂತ ಸಡಗರದಿಂದ ನವರಾತ್ರಿ ಹಬ್ಬ ಆಚರಿಸಿದರೆ, ಇತ್ತ ಜಿಲ್ಲೆಯಲ್ಲಿ ಪ್ರವಾಹ ಹಿನ್ನಲೆ ಸಾಂಕೇತಿಕವಾಗಿ ಆಚರಿಸಲಾಗಿದೆ. ಈ ಮಧ್ಯೆ ವಿಜಯಪುರ ತಾಲೂಕಿನ ಅಂಕಲಿಗಿ ಗ್ರಾಮದಲ್ಲಿ ದುರ್ಗಾ ದೇವಿ ಜಾತ್ರೆ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ನಡೆದ ಜಗಳ (fight) ತಾರಕ್ಕೇರಿತ್ತು. ಪರಿಣಾಮ ಓರ್ವ ವ್ಯಕ್ತಿ ಪರವಾನಗಿ ಹೊಂದಿರುವ ರಿವಾಲ್ವಾರ್ನಿಂದ ಗಾಳಿಯಲ್ಲಿ ಗುಂಡು (firing) ಹಾರಿಸಿದ್ದು, ಅಪ್ರಾಪ್ತ ಬಾಲಕಿಯ ತೊಡೆಗೆ ಗುಂಡು ತಾಕಿರುವಂತಹ ಘಟನೆ ನಡೆದಿದೆ. ವಿಜಯಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಗುಂಡು ಹಾರಿಸಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ದಸರಾ ಹಬ್ಬ ಯಾವುದೇ ಗದ್ದಲ ಸಮಸ್ಯೆಯಿಲ್ಲದೇ ನಡೆದಿದೆ. ಆದರೆ ಈ ಬಾರಿ ದಸರಾ ಹಬ್ಬದ ಖುಷಿ ವಿಜಯಪುರ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಭೀಮಾ ತೀರದ ಪ್ರವಾಹದ ಕಾರಣ ಸರಳ ದಸರಾವನ್ನು ಜಿಲ್ಲೆಯಲ್ಲಿ ಆಚರಿಸಲಾಗಿದೆ. ಇನ್ನು ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ದಸರಾ ಹಬ್ಬದ ವೇಳೆ ದುರ್ಗಾದೇವಿಯ ಜಾತ್ರೆ ನಡೆಯಿತು. ಗುರುವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಮಧ್ಯೆ ಜಗಳವಾಗಿತ್ತು.
ಇದನ್ನೂ ಓದಿ: ದೇವನಹಳ್ಳಿ: ತಂದೆಯ ಸಿಂಗಲ್ ಬ್ಯಾರಲ್ ಗನ್ನಿಂದ ಫೈರಿಂಗ್ ಮಾಡಿಕೊಂಡು ಮಗ ಆತ್ಮಹತ್ಯೆ
ಶುಕ್ರವಾರ ಗ್ರಾಮದ ಜನರು ಸಭೆ ಸೇರಿ ಎರಡು ಗುಂಪಿನ ಜಗಳ ವ್ಯಾಜ್ಯವನ್ನ ಬಗೆ ಹರಿಸಲು ಸೇರಿದ್ದರು. ಇದೆ ವೇಳೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅದು ತಾರಕಕ್ಕೆ ಹೋಗಿ ಎರಡು ಗುಂಪಿನವರು ಕೈ ಕೈ ಮೇಲಾಯಿಸಿ, ಒಬ್ಬರ ಮೇಲೆ ಒಬ್ಬರು ಮುಗಿಬಿದ್ದಿದ್ದರು. ಪರಿಸ್ಥಿತಿ ಕೈಮಿರುತ್ತಿದ್ದಂತೆ ಗ್ರಾಮದ ರಾಮ್ ಅಂಕಲಗಿ ಎಂಬಾತ ತನ್ನ ಪರವಾನಿಗೆ ಹೊಂದಿದ ರಿವಾಲ್ವಾರ್ನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಇದೇ ವೇಳೆ ಬಟ್ಟೆ ಒಣಗಿಸಲು ಮನೆಯ ಮೇಲ್ಚಾವಣಿಯಲ್ಲಿ ನಿಂತಿದ್ದ ಬಾಲಕಿಯ ತೊಡೆಗೆ ತಾಕಿ ಗುಂಡು ಪಾರಾಗಿದೆ. ಕೂಡಲೇ ಬಾಲಕಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಗುಂಡು ಹಾರಿಸಿದ ರಾಮ್ ಅಂಕಲಗಿ ಹೇಳಿದ್ದಿಷ್ಟು
ಈ ಕುರಿತಾಗಿ ಗುಂಡು ಹಾರಿಸಿದ ರಾಮ್ ಅಂಕಲಗಿ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ದುರ್ಗಾ ದೇವಿಯ ದೇವಸ್ಥಾನದ ಪೂಜಾರಿಕೆ ಮಾಡುತ್ತಿದ್ದ ದುರ್ಗಪ್ಪ ಎಂಬಾತನನ್ನು ಪೂಜಾರಿಕೆ ಬಿಡಿಸಿ ಬೇರೆಯವರಿಗೆ ಕೊಟ್ಟಿದ್ದೇವೆ. ಈ ಸಿಟ್ಟಿನಿಂದ ದುರ್ಗಪ್ಪ ಹಾಗೂ ಆತನ ಸಹಚರರು ನನ್ನ ಕೊಲೆಗೆ ಸುಪಾರಿ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಗುರುವಾರ ಜಾತ್ರೆಯಲ್ಲಿ ದುರ್ಗಪ್ಪ ಕಡೆಯವರು ಹಾಗೂ ನಮ್ಮ ಕಡೆಯವರಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇಂದು ಜಗಳದ ವಿಚಾರವಾಗಿ ಎರಡೂ ಗುಂಪಿನವರನ್ನು ಗ್ರಾಮದ ಜನರು ಕರೆದಿದ್ದರು. ಈ ವೇಳೆ ಏಕಾಏಕಿ ಜಗಳ ಆರಂಭವಾಗಿ ಘರ್ಷಣೆ ನಡೆಯಿತು. ಈ ವೇಳೆ ಹೆಚ್ಚಿನ ಅನಾಹುತವಾಗಬಾರದೆಂದು ನಾನು ಗಾಳಿಯಲ್ಲಿ ಗುಂಡು ಹಾರಿಸಿದ್ದೇನೆ ಎಂದು ರಾಮ್ ಅಂಕಲಗಿ ಹೇಳಿದ್ದಾರೆ.
ಇನ್ನು ಗಲಾಟೆಯಲ್ಲಿ ಸುರೇಶ್ ಬಂಡಿವಡ್ಡರ, ಸೀತಾರಾಮ ಬಂಡಿವಡ್ಡರ ಹಾಗೂ ಕುಮಾರ ವಡ್ಡರ ಎಂಬುವವರಿಗೆ ಗಾಯಗಳಾಗಿವೆ. ಕಲ್ಲು, ಟೆಂಗಿನಕಾಯಿ ತೂರಾಟ ಮಾಡಿದ ಕಾರಣ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಬಾಲಕಿ ತಾಯಿ
ಘಟನೆ ಕುರಿತು ಗುಂಡು ತಾಗಿಸಿಕೊಂಡ ಹಾಗೂ ಗಾಯಗೊಂಡ ಒಂದು ಬಣದವರ ಪ್ರಕಾರ ಗುರುವಾರ ನಡೆದ ಜಾತ್ರೆಯಲ್ಲಿ ಸೀತಾರಾಮ ಬಮಡಿವಡ್ಡರ ಎದುರಾಳಿ ಗುಂಪಿನ ಓರ್ವನ ಕಾಲು ತುಳಿಸಿದ್ದನಂತೆ. ಇದೇ ಕಾರಣಕ್ಕೆ ತಳ್ಳಾಟ ನೂಕಾಟ ನಡೆದಿದೆ. ಈ ಜಗಳದ ವಿಚಾರವಾಗಿ ಇಂದು ಗ್ರಾಮದಲ್ಲಿ ರಾಜೀ ಪಂಚಾಯತಿ ಆಗುವ ವೇಳೆ ಘರ್ಷಣೆಯಾಗಿದೆ. ದುರ್ಗಾ ದೇವಿ ಪೂಜಾರಿಕೆ ಬಿಡಿಸಿದ ವಿಚಾರಕ್ಕೂ ಇಂದು ನಡೆದ ಗಲಾಟೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಇನ್ನು ಗುಂಡಿನಿಂದ ಗಾಯಗೊಂಡ ಬಾಲಕಿಯ ತಾಯಿ ಪದ್ಮಾವತಿ ಪ್ರತಿಕ್ರಿಯಿಸಿ, ನಮಗೆ ನ್ಯಾಯಬೇಕು. ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪಿ ಮೇಲೆ ಫೈರಿಂಗ್
ಸುದ್ದಿ ತಿಳಿದ ತಕ್ಷಣ ವಿಜಯಪುರ ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಗೆ ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರೆ ಆಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಎರಡು ಗುಂಪಿನಿಂದ ಮಾಹಿತಿ ಪಡೆದುಕೊಂಡು ಗುಂಡೇಟಿಗೆ ಗಾಯಗೊಂಡ ಬಾಲಕಿ ಹಾಗೂ ಗಾಯಾಳುಗಳಿಂದ ದೂರು ಸ್ವೀಕರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:21 pm, Fri, 3 October 25



