ವಿಜಯಪುರದಲ್ಲಿ ಮೈಸುಡುವ ಬಿಸಿಲು: ನಿರ್ಜಲೀಕರಣದಿಂದ ಆಸ್ಪತ್ರೆಗೆ ಸೇರಿದ ನೂರಾರು ಮಕ್ಕಳು; ಪೋಷಕರಲ್ಲಿ ಹೆಚ್ಚಿದ ಆತಂಕ

ವಿಜಯಪುರದಲ್ಲಿ ಬರಗಾಲದಿಂದ ಚಳಿಗಾಲದಲ್ಲೂ ಅಸಹಜ ಬಿಸಿಲು, ಅಕ್ಟೋಬರ್ ತಾಪಮಾನ ಏರಿಕೆ. ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ನಿರ್ಜಲೀಕರಣ, ಜ್ವರ, ಶೀತದಂತಹ ಸಮಸ್ಯೆಗಳು ಹೆಚ್ಚಾಗಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿದೆ. ಮಕ್ಕಳನ್ನು ಬಿಸಿಲಿನಿಂದ ರಕ್ಷಿಸಲು ದ್ರವಾಹಾರ ನೀಡಲು ಮತ್ತು ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ.

ವಿಜಯಪುರದಲ್ಲಿ ಮೈಸುಡುವ ಬಿಸಿಲು: ನಿರ್ಜಲೀಕರಣದಿಂದ ಆಸ್ಪತ್ರೆಗೆ ಸೇರಿದ ನೂರಾರು ಮಕ್ಕಳು; ಪೋಷಕರಲ್ಲಿ ಹೆಚ್ಚಿದ ಆತಂಕ
ಮಕ್ಕಳ ಆರೋಗ್ಯ ಸಮಸ್ಯೆ
Edited By:

Updated on: Oct 13, 2026 | 6:44 PM

ವಿಜಯಪುರ, ಅ.13: ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳು ಕಳೆದ ನಂತರ ಅಕ್ಟೋಬರ್‌ನಿಂದ ಚಳಿಗಾಲ ಆರಂಭವಾಗಿ, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಚಳಿಯ ತೀವ್ರತೆ ಹೆಚ್ಚಿರುತ್ತದೆ. ಆದರೆ ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಪರಿಸ್ಥಿತಿಯಿಂದಾಗಿ ವಾತಾವರಣ ಸಂಪೂರ್ಣ ಬದಲಾಗಿದ್ದು, ಚಳಿಗಾಲದ ಸಮಯದಲ್ಲೇ ಬೇಸಿಗೆಯಂಥ ಸುಡು ಬಿಸಿಲಿನ ಅನುಭವವಾಗುತ್ತಿದೆ. ಮೊದಲೇ ಬಿಸಿಲಿಗೆ ಹೆಸರಾಗಿರುವ ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಚುರುಗುಡುತ್ತಿದ್ದು, ಮೈಸುಡುವಂಥ ತಾಪಮಾನದಿಂದಾಗಿ ಪುಟ್ಟ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.

ವಿಜಯಪುರದಲ್ಲಿ ಚಳಿಗಾಲದ ಸೀಸನ್‌ನಲ್ಲೂ ಬಿಸಿಲು ವಿಪರೀತವಾಗಿರುವುದರಿಂದ ಪುಟ್ಟ ಮಕ್ಕಳು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ತೀವ್ರ ಸ್ವರೂಪದ ಜ್ವರ, ನಿರ್ಜಲೀಕರಣ, ನೆಗಡಿ, ಕಫ ಹಾಗೂ ವೈರಲ್ ಇನ್‌ಫೆಕ್ಷನ್‌ಗಳು ಹೆಚ್ಚಾಗುತ್ತಿವೆ. ಉರಿ ಬಿಸಿಲ ಕಾರಣದಿಂದ ಮಕ್ಕಳಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾಗುವುದು, ರಕ್ತಹೀನತೆ ಹಾಗೂ ಶೀತ ಜ್ವರದ ಸಮಸ್ಯೆಗಳು ಕಂಡುಬರುತ್ತಿವೆ. ಮೈಸುಡುವ ಬಿಸಿಲಿನ ಬೇಗೆಗೆ ತಾಳಲಾರದೆ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದು, ಜಿಲ್ಲೆಯ ಮಕ್ಕಳ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಆಗಮಿಸುತ್ತಿರುವ ಮಕ್ಕಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ.

ಇದನ್ನೂ ಓದಿ: ಮಧುಮೇಹಕ್ಕೆ ಸಿಹಿ ಒಂದೇ ಕಾರಣವೇ? ಡಯಾಬಿಟಿಸ್‌ ಹಿಂದಿನ ಪ್ರಮುಖ ಕಾರಣಗಳಿವು

ಅಕ್ಟೋಬರ್ ತಿಂಗಳ ತಾಪಮಾನ ಅಂಕಿ-ಅಂಶಗಳು :

ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ವಿಜಯಪುರದಲ್ಲಿ ಗರಿಷ್ಠ ಅಂದರೆ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ 1 ರಿಂದಲೇ ತಾಪಮಾನದ ಪ್ರಖರತೆ ದಾಖಲೆ ಮಟ್ಟಕ್ಕೆ ತಲುಪಿದೆ.

ವಿಜಯಪುರದಲ್ಲಿ ದಾಖಲಾದ ತಾಪಮಾನದ ಅಂಕಿ-ಅಂಶಗಳ ವಿವರವಾದ ಪಟ್ಟಿ ಇಲ್ಲಿದೆ:
  • ಅಕ್ಟೋಬರ್ 1: 33.5°C
  • ಅಕ್ಟೋಬರ್ 2: 35.4°C
  • ಅಕ್ಟೋಬರ್ 3 – 4: 34.5°C
  • ಅಕ್ಟೋಬರ್ 5: 33.5°C
  • ಅಕ್ಟೋಬರ್ 6: 34.5°C
  • ಅಕ್ಟೋಬರ್ 7 – 8: 35.0°C
  • ಅಕ್ಟೋಬರ್ 9: 35.5°C
  • ಅಕ್ಟೋಬರ್ 10: 36.0°C
  • ಅಕ್ಟೋಬರ್ 11 – 12: 35.2°C

ಇಲ್ಲಿದೆ ನೋಡಿ ವಿಡಿಯೋ :

ವೈದ್ಯರ ಸಲಹೆ ಮತ್ತು ಪೋಷಕರಿಗೆ ಮುಂಜಾಗೃತಾ ಸೂಚನೆಗಳು:

ಬಿಸಿಲ ಪ್ರಖರತೆ ಹೆಚ್ಚಿರುವುದರಿಂದ ಪೋಷಕರು ತೀವ್ರ ಆತಂಕಗೊಂಡಿದ್ದು, ಮಕ್ಕಳ ತಜ್ಞರಾದ ಡಾ. ಎಂ. ಎಂ. ಪಾಟೀಲ್ ಹಾಗೂ ಸ್ಥಳೀಯ ಮಹಿಳೆಯರಾದ ಕವಿತಾ ಗೂಳಿ ಮತ್ತು ಮಂಜುಳಾ ಅವರು ಪೋಷಕರಿಗೆ ಹಲವು ಪ್ರಮುಖ ಮುಂಜಾಗೃತಾ ಕ್ರಮಗಳನ್ನು ಸೂಚಿಸಿದ್ದಾರೆ.

ಹೆಚ್ಚು ನೀರು ಕುಡಿಸಿ: ಮಕ್ಕಳು ನಿರ್ಜಲೀಕರಣಕ್ಕೆ ಈಡಾಗದಂತೆ ನಿಯಮಿತವಾಗಿ ಕುಡಿಯುವ ನೀರು ಹಾಗೂ ಎಳೆನೀರು, ಮಜ್ಜಿಗೆಯಂತಹ ದ್ರವಾಹಾರಗಳನ್ನು (Fluids) ಹೆಚ್ಚಾಗಿ ನೀಡಿ.

ಬಿಸಿಲಿನಲ್ಲಿ ಓಡಾಟ ತಡೆಯಿರಿ: ಪ್ರಸ್ತುತ ದಸರಾ ರಜೆ ಇರುವುದರಿಂದ ಮಕ್ಕಳು ಮಧ್ಯಾಹ್ನ ಹಾಗೂ ತೀವ್ರ ಬಿಸಿಲಿರುವ ಸಮಯದಲ್ಲಿ ಹೊರಗಡೆ ಆಟವಾಡದಂತೆ ನೋಡಿಕೊಳ್ಳಿ.

ತಕ್ಷಣ ಚಿಕಿತ್ಸೆ ಕೊಡಿಸಿ: ಜ್ವರ, ಶೀತ ಅಥವಾ ಸುಸ್ತು ಕಂಡುಬಂದ ತಕ್ಷಣವೇ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಕೊಡಿಸುವುದು ಕಡ್ಡಾಯವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Loading...
Unable to load recommendations.
Follow Us