ವಿಜಯಪುರ ಗ್ರಾಮೀಣ ಪೊಲೀಸರ ಭರ್ಜರಿ ಬೇಟೆ: ವಿವಿಧ ಪ್ರಕರಣ ಭೇದಿಸಿ 14 ಮಂದಿ ಅರೆಸ್ಟ್​; 1.17 ಕೋಟಿ ಮೌಲ್ಯದ ವಸ್ತುಗಳು ಜಪ್ತಿ

ಭರ್ಜರಿ ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣಗಳನ್ನು ಭೇದಿಸಿರುವ ವಿಜಯಪುರ ಗ್ರಾಮೀಣ ಪೊಲೀಸರು ಒಟ್ಟು 14 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1.17 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಪೊಲೀಸ್ ಇಲಾಖೆಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ನಡೆಸಿದ ಸಿಬ್ಬಂದಿಯನ್ನು ಎಸ್ಪಿ ಸನ್ಮಾನಿಸಿದ್ದಾರೆ.

ವಿಜಯಪುರ ಗ್ರಾಮೀಣ ಪೊಲೀಸರ ಭರ್ಜರಿ ಬೇಟೆ: ವಿವಿಧ ಪ್ರಕರಣ ಭೇದಿಸಿ 14 ಮಂದಿ ಅರೆಸ್ಟ್​; 1.17 ಕೋಟಿ ಮೌಲ್ಯದ ವಸ್ತುಗಳು ಜಪ್ತಿ
ಪೊಲೀಸರು ಜಪ್ತಿ ಮಾಡಿರುವ ವಸ್ತುಗಳು.
Edited By:

Updated on: Jan 23, 2026 | 4:06 PM

ವಿಜಯಪುರ, ಜನವರಿ 23: ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ವಿಜಯಪುರ ಗ್ರಾಮೀಣ ಪೊಲೀಸರು ಅಂತರ್​​ ಜಿಲ್ಲೆ ಮತ್ತು ಅಂತಾರಾಜ್ಯ ಕಳ್ಳರು, ಖದೀಮರು ಸೇರಿ ಒಟ್ಟು 14 ಮಂದಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ ನಗದು, ಚಿನ್ನಾಭರಣ ಮತ್ತು ವಾಹನಗಳು ಸೇರಿ 1.17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಖಾಕಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಪ್ತಿ ಮಾಡಿದ ಹಣ ಮತ್ತು ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಹಲವು ಪ್ರಕರಣ ಭೇದಿಸಿದ ಖಾಕಿ

2025ರ ಮೇ 30ರಂದು ಬಸ್​​ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಬ್ಯಾಗ್​​ನಲ್ಲಿದ್ದ 65 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಗ್ಯಾಂಗ್​​ನ ಪತ್ತೆ ಮಾಡಿರುವ ಪೊಲೀಸರು, ಪ್ರಕರಣ ಸಂಬಂಧ ಕಲಬುರಗಿಯ ಪ್ರಶಾಂತ, ಆತನ ಪತ್ನಿ ಮಂಜುಳಾ, ಮಹಾರಾಷ್ಟ್ರದ ಅಂಕುಶ ಜಾಧವ್, ಗೋವರ್ಧನ ಪವಾರ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶಿವು ಹಾಗೂ ಆತನ ಪತ್ನಿ ರಜನಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇನ್ನು ನಕಲಿ ಚಿನ್ನದ ನಾಣ್ಯಗಳನ್ನು ಅಸಲಿ ಎಂದು ನಂಬಿಸಿ ಮಹಾರಾಷ್ಟ್ರದ ಲಾತೂರ್ ಮೂಲದ ರಾಜಕುಮಾರ ಕುಂಡರಗಿ ಎಂಬುವವರಿಗೆ ಮಾರಾಟ ಮಾಡಿದ ಆರೋಪದ ಮೇಲೆ ವಿಜಯನಗರ ಜಿಲ್ಲೆಯ ಮೂಲದ ಹಣಮಂತ ಕೊರಚರ, ರಾಜಾ ಕಾವಾಡಿ, ಹರೀಶ ಕೊರಚರ ಹಾಗೂ ಚಿರಂಜಿವಿ ಕೊರಚರ ಎಂಬ ನಾಲ್ವರನ್ನು ಬಂಧಿಸಿ ನಗದನ್ನು ವಶಕ್ಕೆ ಪಡೆದಿದ್ದಾರೆ. ವಿವಿಧ ಬೈಕ್​​ ಕಳವು ಪ್ರಕರಣಗಳನ್ನೂ ಭೇದಿಸಿದ್ದು, ವಿಜಯಪುರ ಜಿಲ್ಲೆಯ ಬಾಬು ಜಮಖಂಡಿ, ಸಿದ್ರಾಮ್ ಅರಕೇರಿ, ಮಂಜುನಾಥ ಉಕ್ಕಲಿ, ಆಕಾಶ ಮಠಪತಿ ಎಂಬುವರನ್ನು ಬಂಧಿಸಿ 20 ಬೈಕ್ ಗಳು ಮತ್ತು ಎರಡು ಕಾರ್​​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು!

ಪೊಲೀಸರಿಗೆ ಸನ್ಮಾನ

ಜಿಲ್ಲೆಯ ಖದೀಮರ ಜೊತೆಗೆ ಅನ್ಯ ಜಿಲ್ಲೆ ಹಾಗೂ ಅಂತಾರಾಜ್ಯದ ಆರೋಪಿಗಳ ಕೈಗೂ ಕೋಳ ಹಾಕಿರುವ ಖಾಕಿ, ಮೋಸ ಹೋದವರಿಗೆ ಮತ್ತು ಕಳ್ಳತನಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿಜಯಪುರ ಗ್ರಾಮೀಣ ಡಿವೈಎಸ್ಪಿ ಟಿ. ಎಸ್. ಸುಲ್ಫಿ, ಇನ್ಸ್​​ಪೆಕ್ಟರ್​​ಗಳಾದ ರಾಯಗೊಂಡ ಜಾನಾರ, ರಮೇಶ ಆವಜಿ, ಸಬ್ ಇನ್ಸಪೆಕ್ಟರ್​​ಗಳು ಹಾಗೂ ಪೊಲೀಸ್ ಕಾನ್ಸ್​ಟೇಬಲ್ಸ್​ಗಳಿಗೆ ಪ್ರಮಾಣಪತ್ರ ನೀಡಿ ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತು ಎಎಸ್ಪಿ ರಾಮನಗೌಡ ಹಟ್ಟಿ ಸನ್ಮಾನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us