ವಿಜಯಪುರ ಮೆಕ್ಕೆಜೋಳ ಸಂಸ್ಕರಣಾ ಘಟಕ ದುರಂತ: ಸಾವಿನ ಸಂಖ್ಯೆ 7ಕ್ಕೆ ಏರಿಕೆ
ಸೋಮವಾರ (ಡಿ.05) ರಾತ್ರಿ ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿಯ ಕೈಗಾರಿಕಾ ಪ್ರದೇಶದಲ್ಲಿನ ರಾಜಗುರು ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಸುಮಾರು 200 ಟನ್ ಮೆಕ್ಕೆಜೋಳ ಕುಸಿದಿತ್ತು. ಇದರಿಂದ ಮೆಕ್ಕೆಜೋಳ ರಾಶಿಯೊಳಗೆ 10 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ. ಕಾರ್ಯಾಚರಣೆ ನಡೆಯುತ್ತಿದೆ...
ವಿಜಯಪುರ, ಡಿಸೆಂಬರ್ 05: ಇಲ್ಲಿನ ರಾಜಗುರು ಫುಡ್ಸ್ (Rajguru Foods) ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ (Maize) ಕುಸಿತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಶಿಯೊಳಗೆ ಸಿಲುಕಿದ್ದ ಐವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ. ಬಿಹಾರ (Bihar) ಮೂಲದ ಗುಲಾರ್ ಚಂದ್ (50), ಕೃಷ್ಣಕುಮಾರ್ (22), ರಾಮ್ ಬಾಲಕ್ (52), ಲುಖೋ ಜಾಧವ್(45), ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ(29), ಸಂಬೂ ಮುಖಿಯಾ (26) ಮೃತ ಕಾರ್ಮಿಕರು. ಸೋನುಕುಮಾರ್ ಎಂಬುವುರನ್ನು ರಕ್ಷಿಸಲಾಗಿದೆ. ರಾಶಿಯೊಳಗೆ ಇನ್ನೂ 6 ರಿಂದ 7 ಜನ ಕಾರ್ಮಿಕರು ಸಿಲುಕಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಎರಡು ಎಸ್ಡಿಆರ್ಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಇದೀಗ ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಕೂಡ ಆಗಮಿಸಿದೆ.
ರಾಜಗುರು ಗೋದಾಮು ಬಳಿ ಶವ ತೆಗೆದುಕೊಂಡು ಹೋಗುತ್ತಿದ್ದ ಌಂಬುಲೆನ್ಸ್ ತಡೆದ ಬಿಹಾರ ಮೂಲದ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮೊದಲು ಪರಿಹಾರ ಘೋಷಿಸಿ ನಂತರ ಶವ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರ ಜೊತೆ ಬಿಹಾರ ಮೂಲದ ಕಾರ್ಮಿಕರು ವಾಗ್ವಾದ ನಡೆಸಿದರು. ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಮತ್ತು ಎಸ್‌ಪಿ ಋಷಿಕೇಷ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.
ಇದನ್ನೂ ಓದಿ: ಗುತ್ತಿಗೆದಾರರ ವಿರುದ್ಧ ಕ್ರಮ: BBMP ನರ್ಸರಿ ಶಾಲಾ ಕಟ್ಟಡ ಕುಸಿತದ ಬಗ್ಗೆ ಮಧು ಬಂಗಾರಪ್ಪ ಪ್ರತಿಕ್ರಿಯೆ
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಭೇಟಿ ನೀಡಿ, ಘಟನೆ ಬಗ್ಗೆ ಜಿಲ್ಲಾಧಿಕಾರಿ ಮತ್ತಯ ಎಸ್‌ಪಿ ಅವರಿಂಧ ಮಾಹಿತಿ ಪಡೆದರು. ಬಳಿಕ ಪ್ರತಿಭಾಟನಾ ನಿರತ ಕಾರ್ಮಿಕರನ್ನು ಭೇಟಿಯಾಗಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೊಂದು ಭೀಕರ ದುರಂತ. ಸುಮಾರು ಎಂಟು ಜನ ಕಾರ್ಮಿಕರು ಮೃತಪಟ್ಟಿರುವ ಮಾಹಿತಿ ಇದೆ. ಬೇರೆ ರಾಜ್ಯದಿಂದ ಇಲ್ಲಿ ಬಂದು ಕೆಲಸ ಮಾಡುವಾಗ ದುರಂತ ನಡೆದಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮೃತರ ಕುಟುಂಬಗಳಿಗೆ ಪರಿಹಾರ ಕೊಡಿಸುತ್ತೇನೆ. ಕಂಪನಿಯ ಮಾಲೀಕರು ಕೂಡ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದರು.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾರ್ಮಿಕರನ್ನು ರಕ್ಷಿಸಿ ಅವರ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳು ಇದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ.
ಏನಿದು ಘಟನೆ
ಸೋಮವಾರ (ಡಿ.05) ರಾತ್ರಿ ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿಯ ಕೈಗಾರಿಕಾ ಪ್ರದೇಶದಲ್ಲಿನ ರಾಜಗುರು ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಸುಮಾರು 200 ಟನ್ ಮೆಕ್ಕೆಜೋಳ ಕುಸಿದಿತ್ತು. ಇದರಿಂದ ಮೆಕ್ಕೆಜೋಳ ರಾಶಿಯೊಳಗೆ 10 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Tue, 5 December 23