ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಏನು? ಕೋರ್ಟ್​​ನಲ್ಲಿ ನಡೆಯಿತು ಸ್ವಾರಸ್ಯಕರ ವಾದ-ಪ್ರತಿವಾದ, ವಿವರ ಇಲ್ಲಿದೆ

ಪ್ರಜ್ವಲ್ ರೇವಣ್ಣ ಶಿಕ್ಷೆ ಪ್ರಮಾಣ ಏನು?: ಸರಣಿ ಅತ್ಯಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೈಸೂರಿನ ಕೆಆರ್​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಸಂಬಂಧ ಇದೀಗ ನ್ಯಾಯಾಲಯದಲ್ಲಿ ತೀವ್ರ ಸ್ವರೂಪದ ವಾದ-ಪ್ರತಿವಾದ ನಡೆದಿದೆ. ವಿವರಗಳನ್ನು ತಿಳಿಯಲು ಮುಂದೆ ಓದಿ.

ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಏನು? ಕೋರ್ಟ್​​ನಲ್ಲಿ ನಡೆಯಿತು ಸ್ವಾರಸ್ಯಕರ ವಾದ-ಪ್ರತಿವಾದ, ವಿವರ ಇಲ್ಲಿದೆ
ಪ್ರಜ್ವಲ್ ರೇವಣ್ಣ
Updated By: Ganapathi Sharma

Updated on: Aug 02, 2025 | 12:40 PM

ಬೆಂಗಳೂರು, ಆಗಸ್ಟ್ 2: ಮೈಸೂರಿನ ಕೆಆರ್​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ದೋಷಿ ಎಂದು ಶುಕ್ರವಾರ ತೀರ್ಪು ನೀಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೀಗ ಶಿಕ್ಷೆಯ ಪ್ರಮಾಣ ಪ್ರಕಟಿಸಲು ವಾದ-ಪ್ರತಿ ವಾದ ಆಲಿಸಿದೆ. ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಮತ್ತು ಪ್ರಜ್ವಲ್‌ ಪರ ವಕೀಲರಿಂದ ವಾದ ಆಲಿಸಿದ ನಂತರ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್ ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ 2.45ಕ್ಕೆ ಪ್ರಕಟಿಸುವುದಾಗಿ ತಿಳಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿಎನ್‌ ಜಗದೀಶ್‌ ಅವರು ವಾದ ಮಂಡನೆ ಮಾಡಿದರೆ, ಪ್ರಜ್ವಲ್‌ ರೇವಣ್ಣ ಪರವಾಗಿ ಹಿರಿಯ ವಕೀಲೆ ನಳಿನಿ ಮಾಯೇಗೌಡ ವಾದ ಮಂಡಿಸಿದರು.

ಪ್ರಜ್ವಲ್ ಶಿಕ್ಷೆಯ ಪ್ರಮಾಣ: ಬಿಎನ್‌ ಜಗದೀಶ್‌ ವಾದವೇನು?

ಜೀವಕ್ಕಿಂತ ಹೆಚ್ಚಿನ ಹಾನಿ ಸಂತ್ರಸ್ತ ಮಹಿಳೆಗಾಗಿದೆ. ಒಪ್ಪಿಗೆಯಿಲ್ಲದೇ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಲಾಗಿದೆ. ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರದ ರೀತಿಯು ಆತನ ವಕ್ರ ಮನಃಸ್ಥಿತಿ ತೋರಿಸುತ್ತದೆ. ಪ್ರಜ್ವಲ್ ಸಂಸದನಾಗಿದ್ದೂ ಇಂತಹ ದುಷ್ಕೃತ್ಯ ಎಸಗಿದ್ದಾನೆ. ಕಾನೂನು ತಿಳಿದಿದ್ದೂ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಇದು ಇನ್ನೂ ಗಂಭೀರವಾದ ಅಪರಾಧ. ಈತನ ಮೇಲೆ ಈ ರೀತಿಯ ಇನ್ನಷ್ಟು ಕೇಸ್​ಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿರುವುದು ಗಂಭೀರ ಅಪರಾಧ. ಗರಿಷ್ಠ ಶಿಕ್ಷೆ ವಿಧಿಸಿ, ಇತರರಿಗೆ ಅದು ಎಚ್ಚರಿಕೆಯಾಗುವಂತೆ ನೋಡಿಕೊಳ್ಳಬೇಕು. ಜೀವನಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಬೇಕು ಎಂದು ಬಿಎನ್‌ ಜಗದೀಶ್‌ ವಾದ ಮಂಡಿಸಿದರು.

ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿರುವುದೂ ಗಂಭೀರ ಅಪರಾಧ. ಈತ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ತೋರಿಲ್ಲ. ಈತನಿಗೆ ಕಠಿಣ ಶಿಕ್ಷೆ ಒದಗಿಸಿ ಸಮಾಜಕ್ಕೆ ಸಂದೇಶ ನೀಡಬೇಕು. ಹಣ, ಅಧಿಕಾರವಿರುವ ಇವರಿಗೆ ಕಡಿಮೆ ಶಿಕ್ಷೆಯಾಗಬಾರದು ಎಂದು ಅವರು ವಾದಿಸಿದರು.

ಇದನ್ನೂ ಓದಿ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ದೋಷಿಯಾಗಿರುವ ಪ್ರಜ್ವಲ್ ವಿರುದ್ಧ ಇನ್ನೆಷ್ಟು ಅತ್ಯಾಚಾರ ಕೇಸ್​ ಇವೆ?
ಪ್ರಜ್ವಲ್ ರೇವಣ್ಣಗೆ ಎಷ್ಟು ವರ್ಷ ಜೈಲು ಶಿಕ್ಷೆ? ಮಾಜಿ ಸಂಸದನ ಮುಂದಿನ ನಡೆ?
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಬಿಗ್ ಶಾಕ್ ನೀಡಿದ ಕೋರ್ಟ್

ಶಿಕ್ಷೆ ಸಮಾಜಕ್ಕೆ ಸಂದೇಶವಾಗಬೇಕು: ಅಶೋಕ್ ನಾಯಕ್ ವಾದ

ಮತ್ತೊಂದೆಡೆ, ಪ್ರಾಸಿಕ್ಯೂಷನ್ ಪರ ವಕೀಲ ಎಸ್​​ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ, ಸಂಸದರೇ ಇಂತಹ ಕೃತ್ಯ ಮಾಡಿರುವಾಗ ಗರಿಷ್ಠ ಶಿಕ್ಷೆ ವಿಧಿಸಬೇಕು. ರಾಜಕಾರಣಿಯಾಗಿ ಕಿರಿಯ ವಯಸ್ಸಿನಲ್ಲಿ ಸಂಸದನಾಗಿದ್ದ. ಜನ ಆಯ್ಕೆ ಮಾಡಿದ್ದು ಏಕೆ? ಈತ ಮಾಡಿದ್ದೇನು? ಎಂಬುದನ್ನು ಗಮನಿಸಬೇಕು. ಈತನಿಗೆ ವಿಧಿಸುವ ಶಿಕ್ಷೆ ಸಮಾಜಕ್ಕೆ ಸಂದೇಶವಾಗಬೇಕು. ಜೀವಾವಧಿ ಶಿಕ್ಷೆ, ಜೊತೆಗೆ ಅತಿ ಹೆಚ್ಚು ದಂಡನೆ ವಿಧಿಸಬೇಕು ಎಂದರು.

ಒಂದು ಕೇಸ್​​​ನಲ್ಲಿ 25 ಲಕ್ಷ ರೂ. ದಂಡ‌‌ ವಿಧಿಸಿದ ಉದಾಹರಣೆ ಇದೆ. ಪ್ರಜ್ವಲ್ ಬಡವನಲ್ಲ, ಕರೋಡ್ ಪತಿಯಾಗಿದ್ದಾನೆ. ಹೀಗಾಗಿ ಹೆಚ್ಚಿನ ದಂಡ ವಿಧಿಸಿ ಅದರ ದೊಡ್ಡ ಭಾಗವನ್ನು ಸಂತ್ರಸ್ತೆಗೆ ನೀಡಬೇಕು. ವಿಡಿಯೋ ವೈರಲ್ ಆಗಿರುವುದರಿಂದ ಆಕೆ ದುಡಿಯಲು ಎಲ್ಲೂ ಹೋಗದಂತಾಗಿದೆ. ಇದರಿಂದ ಆಕೆಗೂ ಪರಿಹಾರದ ಅಗತ್ಯವಿದೆ ಎಂದು ಅಶೋಕ್ ನಾಯಕ್ ವಾದಿಸಿದರು.

ಪ್ರಜ್ವಲ್‌ ರೇವಣ್ಣ ಪರ ನಳಿನಿ ಮಾಯೇಗೌಡ ವಾದವೇನು?

ಪ್ರಜ್ವಲ್‌ ರೇವಣ್ಣ ಪರ ವಾದ ಮಂಡಿಸಿದ ನಳಿನಿ ಮಾಯೇಗೌಡ, ಎಸ್​​​ಪಿಪಿಗಳು ಸಮಾಜಕ್ಕೆ ಸಂದೇಶ ನೀಡಬೇಕೆಂದು ವಾದ ಮಂಡಿಸಿದ್ದಾರೆ. ಯುವ ಸಂಸದನಾಗಿ ಪ್ರಜ್ವಲ್ ಜನಸೇವೆ ಮಾಡಿದ್ದಾನೆ. ಹಣ ಮಾಡಲೆಂದು ಆತ ರಾಜಕಾರಣಕ್ಕೆ ಸೇರಿಲ್ಲ. 2024 ರ ಚುನಾವಣೆ ವೇಳೆಯೇ ವಿಡಿಯೋಗಳನ್ನು ಏಕೆ ವೈರಲ್ ಮಾಡಲಾಯಿತು? ಇದು ಪ್ರಜ್ವಲ್ ವಿರುದ್ಧ ರಾಜಕೀಯ ಪ್ರೇರಿತ ಕ್ರಮವಾಗಿದೆ. ಆರೋಪಿಯ ರಾಜಕೀಯ ಸ್ಥಾನಮಾನ ಶಿಕ್ಷೆಗೆ ಕಾರಣವಾಗಬಾರದು. ಹಾಗೆ ಮಾಡಿದರೆ, ಇಷ್ಟು ದಿನದ ಒಳ್ಳೆ ಹೆಸರು ಏನಾಗಬೇಕು ಎಂದು ಪ್ರಶ್ನಿಸಿದರು.

ಪ್ರಜ್ವಲ್ ವಯಸ್ಸು ಕೇವಲ 34 ವರ್ಷ. ಸಂತ್ರಸ್ತೆ ಸಮಾಜದಿಂದ ತಿರಸ್ಕೃತಗೊಂಡಿಲ್ಲ. ಆಕೆ ತನ್ನ ಸಂಸಾರದೊಂದಿಗೆ ಎಂದಿನಂತೆಯೇ ಜೀವನ ಸಾಗಿಸುತ್ತಿದ್ದಾರೆ. ಆಕೆಗೆ ವಿವಾಹವಾಗಿ ಮಕ್ಕಳಾಗಿವೆ, ಜೀವನ‌ ನಡೆಯುತ್ತಿದೆ ಎಂದು ನಳಿನಿ ಮಾಯೇಗೌಡ ವಾದ ಮಂಡಿಸಿದರು.

ಪ್ರಜ್ವಲ್ ಯುವಕನಾಗಿದ್ದು ಆತನ‌ ಭವಿಷ್ಯವನ್ನೂ ಗಮನದಲ್ಲಿಡಬೇಕು. ಈಗಾಗಲೇ ಮಾಧ್ಯಮಗಳಲ್ಲಿ ಆತನ ತೇಜೋವಧೆಯಾಗಿದೆ. ಬಂಧನವಾದ ದಿನದಿಂದಲೂ ಜೈಲಿನಲ್ಲಿದ್ದಾನೆ. ಆತನಿಗೆ ವಯಸ್ಸಾದ ತಂದೆ ತಾಯಿ ಇದ್ದಾರೆ. ತಾತ ಮಾಜಿ ಪ್ರಧಾನಿಯಾಗಿದ್ದಾರೆ. ಆತನ ರಾಜಕೀಯ ಸ್ಥಾನಮಾನ ತೀವ್ರ ಶಿಕ್ಷೆಗೆ ಕಾರಣವಾಗಬಾರದು. ಚುನಾವಣೆ ಗೆಲ್ಲುವ ವೇಳೆಯೇ ಇಂತಹ ವಿಡಿಯೋ ಹರಿಬಿಡಲಾಗಿದೆ ಎಂಬುದನ್ನೂ ಗಮನಿಸಬೇಕು. ಸಂತ್ರಸ್ತೆಗಿಂತ ಅಪರಾಧಿಗೇ ಹೆಚ್ಚಿನ ಹಾನಿಯಾಗಿದೆ ಎಂದು ನಳಿನಿ ಮಾಯೇಗೌಡ ವಾದಿಸಿದರು. ಆದರೆ, ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲ ಬಿಎನ್ ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣ ಹೇಳಿದ್ದೇನು?

ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್ ರೇವಣ್ಣ, ‘‘ನಾನು ಹಲವು‌ ಮಹಿಳೆಯರೊಂದಿಗೆ ಇಂತಹ ಕೃತ್ಯ ನಡೆಸಿದ್ದೇನೆ ಎಂದು ಆರೋಪಿಸಿದ್ದಾರೆ. ನಾನು ಸಂಸದನಾಗಿದ್ದ ವೇಳೆ ಯಾರೂ ಇಂತಹ ಆರೋಪ‌ ಮಾಡಿರಲಿಲ್ಲ. ನಾನು ರೇಪ್ ಮಾಡಿದ್ದರೆ ಅವರು ಯಾರಿಗೂ ಏಕೆ ಹೇಳಿರಲಿಲ್ಲ? ಚುನಾವಣೆ ಸಮಯದಲ್ಲಿಯೇ ಅವರು ಯಾಕೆ ಹಾಗೆ ಮಾಡಿದ್ದಾರೆ? ಪೊಲೀಸರೇ ಈ ಕೆಲಸ ಮಾಡಿದ್ದಾರೆ. ಚುನಾವಣೆ ವೇಳೆ ಈ ರೀತಿ ಮಾಡಿದ್ದಾರೆ. ನ್ಯಾಯಾಲಯ ಏನೇ ತೀರ್ಮಾನ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ’’ ಎಂದರು.

ಇದನ್ನೂ ಓದಿ: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು

ಆರಂಭದಲ್ಲಿ ಇಂಗ್ಲಿಷ್​​ನಲ್ಲಿಯೇ ಮಾತು ಆರಂಭಿಸಿದ ಪ್ರಜ್ವಲ್ ರೇವಣ್ಣ, ನಂತರ ಕಣ್ಣೀರಿಡುತ್ತಾ ಕನ್ನಡದಲ್ಲಿ ಮಾತು ಮುಂದುವರಿಸಿದರು. ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದೇನೆ. ಕಳೆದ 6 ತಿಂಗಳುಗಳಿಂದ ತಂದೆ ತಾಯಿಯನ್ನು ನೋಡಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Sat, 2 August 25