ಬೆಂಗಳೂರು, (ನವೆಂಬರ್ 23): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ನ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲುಕಂಡಿದ್ದಾರೆ. ಇನ್ನು ಬಿಜೆಪಿಯಿಂದ ಕಾಂಗ್ರೆಸ್ಗೆ ಘರ್ ವಾಪ್ಸಿ ಮಾಡಿದ್ದ ಸಿಪಿ ಯೋಗೇಶ್ವರ್ ನಿರೀಕ್ಚೆಗೂ ಮೀರಿ ಗೆಲ್ಲುವು ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಸೇರಿ ಬಲ ಪಡೆದುಕೊಂಡಿತ್ತು. ಜೆಡಿಎಸ್ನಿಂದ ಬಿಜೆಪಿಗೂ ಬಲ ಬಂದಿತ್ತು. ಆದರೆ ಆರು ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಚನ್ನಪಟ್ಟಣದ ಮತದಾರ ಅಪ್ಪ ಮಕ್ಕಳನ್ನು ತಿರಸ್ಕರಿಸಿದ್ದಾರೆ. ಅದರಲ್ಲೂ ಕುಮಾರಸ್ವಾಮಿಗೆ ಸತತ ಎರಡು ಬಾರಿ ಶಾಸಕ ಸ್ಥಾನ, ಗೌಡರ ಅಳಿಯ ಡಾ.ಮಂಜುನಾಥ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಬಲ ತುಂಬಿದ್ದ ಮತದಾರ ಮತ್ತೆ ಅವರದ್ಧೇ ಕುಟುಂಬದ ಸದಸ್ಯರನ್ನು ಒಪ್ಪಿಲ್ಲ. ಬದಲಿಗೆ ಸ್ಥಳೀಯರಾದ ಯೋಗೇಶ್ವರ್ಗೆ ಶಕ್ತಿ ತುಂಬಿದ್ದಾರೆ.
ಹೈವೋಲ್ಟೇಜ್ ಕ್ಷೇತ್ರವಾದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ. ಹಿಂದೆ ಮಂಡ್ಯದಲ್ಲೊಮ್ಮೆ, ರಾಮನಗರದಲ್ಲಿ ಹಾಗೂ ಇದು ಮೂರನೇ ಬಾರಿ ಚನ್ನಪಟ್ಟಣದಲ್ಲಿಯೂ ಸೋಲಾಗಿದೆ. ಸೋಲಿನ ಆತಂಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಅಚ್ಚರಿ ರೀತಿಯಲ್ಲಿ ಗೆಲುವು ಕಂಡಿದ್ದಾರೆ. ಇನ್ನು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣಗಳೇನು ಎನ್ನುವುದನ್ನು ನೋಡಿದೆರೆ ಹಲವಾರು ಇವೆ. ಅದರಲ್ಲೂ ಪ್ರಮುಖವಾಗಿ ನಿಖಿಲ್ ಕುಮಾರಸ್ವಾಮಿಗೆ ಕುಟುಂಬ ರಾಜಕಾರಣ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ: ಬಿಜೆಪಿ ಸೋಲಿಗೆ ಕಾರಣವಾಯ್ತು ಸ್ಥಳೀಯ ನಾಯಕತ್ವ ಕೊರತೆ, ಒಳಜಗಳ, ತಪ್ಪು ಲೆಕ್ಕಾಚಾರ
ಈ ಹಿಂದೆ ಅಂದರೆ 2013ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿ ಸೋಲುಕಂಡಿದ್ದರು. ಬಳಿಕ ಎಚ್ ಡಿಕುಮಾರಸ್ವಾಮಿ ಅವರನ್ನು ಎರಡು ಬಾರಿ ಇಲ್ಲಿನ ಜನ ಗೆಲ್ಲಿಸಿದ್ದರು. ಈ ಬಾರಿಯೂ ಕುಟುಂಬದ ಮತ್ತೊಬ್ಬ ಸದಸ್ಯ ನಿಖಿಲ್ ಕುಮಾರಸ್ವಾಮಿಯನ್ನು ನಿಲ್ಲಿಸಿದ್ದದ್ದರು. ಈ ಮೂಲಕ ಕುಮಾರಸ್ವಾಮಿ ಕುಟುಂಬಕ್ಕೆ ಒತ್ತು ನೀಡಿದ್ದರು. ಇದರಿಂದ ಮತದಾರರ ಬೇಸರಗೊಂಡು ಮತ ನೀಡಿಲ್ಲ ಎನ್ನಲಾಗಿದೆ.
ಸಿ.ಪಿ.ಯೋಗೇಶ್ವರ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ದೊಡ್ಡಗೌಡ ಅಳಿಯ ಡಾ.ಮಂಜುನಾಥ್ ಪರವಾಗಿ ಕೆಲಸ ಮಾಡಿದ್ದರು. ಈ ಬಾರಿ ಟಿಕೆಟ್ ಅವರಿಗೆ ನೀಡುವ ವಿಚಾರದಲ್ಲಿ ಜೆಡಿಎಸ್ನವರು ಸೂಕ್ತ ತೀರ್ಮಾನ ಕೈಗೊಳ್ಳಲಿಲ್ಲ. ಅವರು ಪಕ್ಷ ಬಿಡುವಾಗಲೂ ಉಳಿಸಿಕೊಳ್ಳುವ ಪ್ರಯತ್ನ ಆಗಿಲಿಲ್ಲ. ಅಲ್ಲದೇ ಯೋಗೇಶ್ವರ್ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಅಂತೆಲ್ಲ ಆರೋಪಗಳನ್ನು ಮಾಡಿದ್ದರು. ಇದರ ಅನುಕಂಪ ಯೋಗೇಶ್ವರ್ ಕೈಹಿಡಿಯಿತು.
ಇನ್ನು ಪ್ರಮುಖವಾಗಿ ಪ್ರಜ್ವಲ್ ರೇವಣ್ಣ ವಿರುದ್ಧ ಕೆಲ ಆರೋಪಗಳು ದೊಡ್ಡ ಗೌಡ ಕುಟುಂಬಕ್ಕೆ ಕಳಂಕತಂದಿಟ್ಟಿದೆ. ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಇದಕ್ಕೆ ಜನಸಾಮಾನ್ಯರು ಛೀ ಥೂ ಎಂದು ಉಗಿಯುವಂತಾಗಿದ್ದು, ದೊಡ್ಡಗೌಡರ ಕುಟುಂಬಕ್ಕೆ ಒಂದು ಕಪ್ಪುಚುಕ್ಕೆ ಆಯ್ತು. ಇದು ಸಹ ಚನ್ನಪಟ್ಟಣದ ಸೋಲಿಗೆ ಕಾರಣವಾಗಿದೆ.
ಇನ್ನು ಕುಮಾರಸ್ವಾಮಿ 2023ರಲ್ಲಿ ಗೆದ್ದ ಬಳಿಕ ಅಷ್ಟಾಗಿ ಕ್ಷೇತ್ರದತ್ತ ಸುಳಿದಿಲ್ಲ ಎನ್ನುವ ಆರೋಪ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಕ್ಷೇತ್ರದ ಮುಖಂಡರ ಜೊತೆಗಿನ ಸಂಬಂಧ ಅಷ್ಟಕ್ಕೆ ಸರಿಯಾಗಿ ಹೊಂದಿರಲಿಲ್ಲ. ಗೆದ್ದ ಬಳಿಕ ಮುಖಂಡರನ್ನು ಮರೆತುಬಿಟ್ಟರು ಎನ್ನುವ ಆರೋಪ ಸಹ ಇದೆ.
ಇನ್ನು ಮುಖ್ಯವಾಗಿ ದೊಡ್ಡ ಗೌಡರ ಕುಟುಂಬದ ವಿರುದ್ಧ ಕೆಲ ಆರೋಪಗಳಲ್ಲಿ ಇದು ಒಂದು. ದೇವೇಗೌಡ ಕುಮಾರಸ್ವಾಮಿಯನ್ನು ಬೆಳೆಸಿದ. ಇನ್ನು ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದರು, ಇನ್ನುಳಿದಂತೆ ಇತರೆ ಒಕ್ಕಲಿಗರನ್ನು ಬೆಳಸುತ್ತಿಲ್ಲ ಎನ್ನುವ ಆರೋಪವಿದೆ. ಇನ್ನು ಒಕ್ಕಲಿಗ ಸಮುದಾಯ ಪ್ರಮುಖ ನಾಯಕ ಜಿಟಿ ದೇವೇಗೌಡ ಅವರನ್ನು ತುಳಿಯುತ್ತಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಚರ್ಚೆ ಆಯ್ತು. ಇದನ್ನು ಸಿದ್ದರಾಮಯ್ಯ ಸಹ ಪ್ರಚಾರದ ವೇಲೆ ಬಹಿರಂಗ ವೇದಿಕೆ ಮೇಲೆ ಹೇಳಿದ್ದರು.
ಇನ್ನು ಮುಖ್ಯವಾಗಿ ಸ್ಥಳೀಯ ನಾಯಕರು ಕೊನೆ ಕ್ಷಣದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದು ನಿಖಿಲ್ ಸೋಲಿಗೆ ಪ್ರಮುಖ ಕಾರಣವಾಗಿದೆ. ಚುನಾವಣೆ ಸಂದರ್ಭದಲ್ಲಿ ಚನ್ನಪಟ್ಟಣದ ಏಳು ನಗರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು, ಇದು ಜೆಡಿಎಸ್ಗೆ ಹೊಡೆತಕೊಟ್ಟಿದೆ.
Published On - 5:24 pm, Sat, 23 November 24