AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ಸಿಎಂ ಆಗ್ತಾರಾ ಡಿಕೆಶಿ? ಕುತೂಹಲ ಮೂಡಿಸಿದ ಆ ಒಂದು ಮಾತು!

ಕರ್ನಾಟಕ ಕಾಂಗ್ರೆಸ್​​​ನಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಅನೇಕ ಊಹಾಪೋಹಗಳು ಹರಿದಾಡುತ್ತಿರುವ ಸಂದರ್ಭದಲ್ಲೇ, ಬೆಂಗಳೂರಿನಲ್ಲಿ ಬಿಹಾರನಿವಾಸಿಗಳ ಜತೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಆಡಿರುವ ಆ ಒಂದು ಮಾತು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಹಾರದಲ್ಲಿ ನೀವು ಮಹಾಘಟಬಂಧನ್ ಅಧಿಕಾರಕ್ಕೆ ತಂದರೆ ಇಲ್ಲಿ ನನಗೆ ಎಲ್ಲ ಸ್ಥಾನವನ್ನೂ ಕೊಟ್ಟಂತೆ ಎಂದು ಡಿಕೆಶಿ ಹೇಳಿದ್ದಾರೆ.

ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ಸಿಎಂ ಆಗ್ತಾರಾ ಡಿಕೆಶಿ? ಕುತೂಹಲ ಮೂಡಿಸಿದ ಆ ಒಂದು ಮಾತು!
ಡಿಕೆ ಶಿವಕುಮಾರ್
ಪ್ರಸನ್ನ ಗಾಂವ್ಕರ್​
| Edited By: |

Updated on: Nov 03, 2025 | 6:58 AM

Share

ಬೆಂಗಳೂರು, ನವೆಂಬರ್ 3: ಕರ್ನಾಟಕ ಕಾಂಗ್ರೆಸ್​ನಲ್ಲಿ (Congress) ಅದಲು ಬದಲು ಆಟ ಶುರುವಾಗುತ್ತಾ? ಸಿಎಂ ಕುರ್ಚಿ ಬದಲಾಗುತ್ತಾ? ಸಂಪುಟ ವಿಸ್ತರಣೆಯಾಗುತ್ತಾ ಎಂಬ ಸಾಕಷ್ಟು ಗೊಂದಲಗಳಿವೆ. ಇದರ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಡುತ್ತಿರುವ ಒಂದೊಂದು ಮಾತುಗಳು ಮತ್ತು ಹಿಡಿಯುತ್ತಿರುವ ಒಂದೊಂದು ಹೆಜ್ಜೆಗಳು ಸಾಕಷ್ಟು ಕುತೂಹಲ ಮೂಡಿಸಿವೆ. ಡಿಸಿಎಂ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಡೆಡ್‌ಲೈನ್ ಹಾಕಿಕೊಂಡಿದ್ದಾರೆಂಬ ವದಂತಿ ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಏನೇ ಇದ್ದರೂ, ಬಿಹಾರ ಚುನಾವಣೆ ಬಳಿಕವೇ ಬದಲಾವಣೆಯಾಗಲಿದೆ ಎಂಬ ಚರ್ಚೆಗಳು ಕೂಡ ಗರಿಗೆದರಿವೆ. ಇದಕ್ಕೆಲ್ಲಾ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಬಿಹಾರ ಸಮುದಾಯದವರ ಎದುರು ಆಡಿರುವ ಒಂದು ಮಾತು ಪುಷ್ಟಿ ನೀಡಿದೆ.

ಡಿಕೆ ಶಿವಕುಮಾರ್ ಬಳಿ ಬಿಹಾರಿಗಳು ಹೇಳಿದ್ದೇನು?

ನವೆಂಬರ್ 6ಮತ್ತು 11ಕ್ಕೆ ಬಿಹಾರದಲ್ಲಿ ಮತದಾನ ನಡೆಯಲಿದೆ. ಬೆಂಗಳೂರಿನಲ್ಲೂ ಲಕ್ಷಾಂತರ ಬಿಹಾರಿಗಳು ವಾಸವಿದ್ದಾರೆ. ಇವರನ್ನು ಭಾನುವಾರ ಭೇಟಿ ಮಾಡಿದ್ದ ಡಿಕೆ ಶಿವಕುಮಾರ್, ಬಿಹಾರಕ್ಕೆ ಹೋಗಿ ಮಹಾಘಟಬಂಧನ್‌ಗೆ ಮತ ಹಾಕಿ ಎಂದು ಕರೆ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಬಿಹಾರದ ಮುಖಂಡರು, ನೀವು ಸಿಎಂ ಆಗುವುದನ್ನು ನೋಡಲು ಬಯಸುತ್ತೇವೆ ಎಂದಿದ್ದಾರೆ. ನಮ್ಮ ಸಮಾಜದವರೆಲ್ಲರೂ ನಿಮ್ಮನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇವೆ. ಪೂರ್ತಿ ಬಿಹಾರವಾಸಿಗಳು ನಿಮ್ಮ ಜೊತೆಗಿದ್ದಾರೆ. ಲಕ್ಷಾಂತರ ಜನ ಬೆಂಗಳೂರಷ್ಟೇ ಅಲ್ಲ, ಬಿಹಾರದಲ್ಲೂ ನಿಮ್ಮ ಬೆಂಬಲಕ್ಕಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಬಿಹಾರವಾಸಿಗಳೆಲ್ಲಾ ನೀವು ಮುಖ್ಯಮಂತ್ರಿಯಾಗುವುದನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ.

ಬಿಹಾರವಾಸಿಗಳ ಜತೆ ಮಾತನಾಡುತ್ತಾ ಡಿಕೆಶಿ ಕೊಟ್ಟ ಸಂದೇಶವೇನು?

ಬಿಹಾರವಾಸಿಗಳ ಜತೆ ಮಾತನಾಡುತ್ತಾ ಡಿಕೆ ಶಿವಕುಮಾರ್, ದೊಡ್ಡ ಸಂದೇಶವನ್ನೇ ಕೊಟ್ಟಂತಿದೆ. ‘ನೀವು ನನಗೆ ದೊಡ್ಡ ಸ್ಥಾನ ಸಿಗಬೇಕು ಎಂದು ಹೇಳಿದ್ದೀರಿ. ಅದು ಮುಖ್ಯವಲ್ಲ. ಅಲ್ಲಿ ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ತಂದರೆ ನೀವು ನನಗೆ ಎಲ್ಲಾ ಸ್ಥಾನವನ್ನೂ ಕೊಟ್ಟಂತೆ. ನೀವೆಲ್ಲಾ ಹೋಗಿ ಬಿಹಾರದಲ್ಲಿ ಮತ ಚಲಾಯಿಸಿ ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಅತ್ತ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಸಿಎಂ ಸಿದ್ದರಾಮಯ್ಯ ಟಗರು. ಟಗರಿಗೆ ಟಕ್ಕರ್ ಕೊಡುವುದಕ್ಕಾಗುವುದಿಲ್ಲ. ಅಷ್ಟೇ ಅಲ್ಲ, 2028ರ ಬಳಿಕ ದಲಿತರು ಸಿಎಂ ಆಗಬೇಕು ಎಂದು ಒತ್ತಿ ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ದೆಹಲಿ ದಂಡಯಾತ್ರೆ: ಅಹಿಂದ ಅಸ್ತ್ರವೇ?

ಬಿಹಾರ ಚುನಾವಣಾ ಹತ್ತಿರವಾಗುತ್ತಿದ್ದಂತೆ ರಾಜ್ಯ ನಾಯಕರ ದೆಹಲಿ ಯಾತ್ರೆಯೂ ತೀವ್ರಗೊಂಡಿದೆ. ಡಿಕೆ ಶಿವಕುಮಾರ್ ಬೆನ್ನಲ್ಲೇ, ಸತೀಶ್ ಜಾರಕಿಹೊಳಿ ಇಂದಿನಿಂದ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದು ಕುತೂಹಲ ಮೂಡಿಸಿದೆ.

ದೆಹಲಿಗೆ ಹೋಗಿ ವಾಪಸ್ ಆಗಿರುವ ಡಿಕೆಶಿ ಮತ್ತೆ ದೆಹಲಿಗೆ ತೆರಳಲಿದ್ದಾರೆ. ಇದಕ್ಕೂ ಮುನ್ನವೇ ಸತೀಶ್ ಜಾರಕಿಹೊಳಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಸತೀಶ್ ಜಾರಕಿಹೊಳಿಯ ದೆಹಲಿ ಪ್ರವಾಸದ ವಿವರ ರಹಸ್ಯವಾಗಿಯೇ ಇದೆ. ಅಹಿಂದ ನಾಯಕರೆಂದ ಗುರುತಿಸಿಕೊಳ್ಳುತ್ತಿರುವ ಸತೀಶ್‌ಗೆ ಅಹಿಂದ ನಾಯಕತ್ವ ಸಿಗಬೇಕು ಎಂದು ಸಿಎಂ ಪುತ್ರ ಯತೀಂದ್ರ ಕೂಡಾ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಕೂಡಾ ಅಹಿಂದಕ್ಕೆ ನಾಯಕತ್ವ ಸಿಗಬೇಕು ಎಂದಿದ್ದಾರೆ. ಈ ಬೆನ್ನಲ್ಲೇ ದೆಹಲಿಗೆ ತೆರಳಿ ಮಲ್ಲಿಕಾರ್ಜುನ ಖರ್ಗೆ ಸಮಯವನ್ನೂ ನಿಗದಿ ಮಾಡಿಕೊಂಡಿರುವ ಸತೀಶ್, ವೇಣುಗೋಪಾಲ್, ಸುರ್ಜೇವಾಲರನ್ನು ಭೇಟಿಯಾಗುವ ಸಾಧ್ಯತೆ ಇದೆ. ಸಚೀವ ಸತೀಶ್ ಜೊತೆ ಐದಾರು ಮಾಜಿ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದೆಹಲಿಯಲ್ಲಿ ಅಹಿಂದ ನಾಯಕತ್ವದ ಬಗ್ಗೆ ಚರ್ಚೆಯಾಗುತ್ತಾ? ಕೆಪಿಸಿಸಿ ಅಧ್ಯಕ್ಷ ರೇಸ್‌ನಲ್ಲಿರೋ ಸತೀಶ್ ಅಧ್ಯಕ್ಷಗಿರಿ ಬಗ್ಗೆಯೂ ಮಾತುಕತೆ ನಡೆಸ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಹೋಗುವವರೆಲ್ಲಾ ದೆಹಲಿಗೆ ಹೋಗಲಿ ಎಂದು ಡಿಕೆ ಶಿವಮುಮಾರ್ ಹೇಳಿದ್ದರೆ, ಸಿಎಂ ನನಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ನವೆಂಬರ್ ಆರಂಭದಲ್ಲೇ ಸಿಡಿದ ಡೆಡ್‌ಲೈನ್ ಬಾಂಬ್: ಕಾಂಗ್ರೆಸ್​ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ ಡೆಡ್‌ಲೈನ್!

ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ನವೆಂಬರ್ ಆದ್ಮೇಲೆ ಈ ಸರ್ಕಾರ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಕುರ್ಚಿ ಕದನ ದೆಹಲಿಗೆ ಬಂದು ನಿಂತಿದ್ದು, ಬಿಹಾರ ಚುನಾವಣೆ ಬಳಿಕ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ