ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್: ಸರ್ಕಾರದ ಮುಂದಿದೆ ಕಾನೂನು ಸವಾಲು
CBI Case against DK Shivakumar: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣದ ಸಿಬಿಐ ತನಿಖೆಯನ್ನು ವಾಪಸ್ ಪಡೆಯುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದೇನೋ ನಿಜ. ಆದರೆ ಇಷ್ಟಕ್ಕೇ ಡಿಕೆಶಿ ಸಮಸ್ಯೆ ಬಗೆಹರಿಯಲಿದೆಯಾ? ಸರ್ಕಾರದ ಮುಂದಿರುವ ಕಾನೂನಾತ್ಮಕ ಸವಾಲುಗಳೇನು? ಇಲ್ಲಿದೆ ವಿವರ.
ಬೆಂಗಳೂರು, ನವೆಂಬರ್ 23: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣದ ತನಿಖೆಗೆ ಮತ್ತೊಂದು ವಿಘ್ನ ಎದುರಾಗಿದೆ. ಐಟಿ, ಇಡಿ ತನಿಖೆಗಳ ಆಧಾರದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರ, ಸಿಬಿಐ ತನಿಖೆಗೆ (CBI Investigation) ಅನುಮತಿ ನೀಡಿತ್ತು. ಇದು ಡಿಕೆಶಿ ಪಾಲಿಗೆ ದೊಡ್ಡ ಕಂಟಕವೇ ಆಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ (Congress Government) ಡಿಕೆಶಿ ವಿರುದ್ಧ ಸಿಬಿಐ ತನಿಖೆಯನ್ನು ಹಿಂಪಡೆಯಲು ಮುಂದಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಕ್ರಮದ ಔಚಿತ್ಯದ ಬಗ್ಗೆ ಪ್ರಶ್ನೆಗಳೆದ್ದಿವೆ.
2018ರಲ್ಲಿ ಡಿಕೆಶಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಜಾರಿ ನಿರ್ದೇಶನಾಲಯವು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ಮಧ್ಯೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ಅಗತ್ಯವಿದೆ ಎಂಬ ಕಾರಣಕ್ಕೆ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅಂದಿನ ಸರ್ಕಾರದ ಸಮ್ಮತಿ ಪಡೆದು ಡಿಕೆಶಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಕೇಸ್ ದಾಖಲಿಸಿದ್ದ ಸಿಬಿಐ, 2013 ರಿಂದ 2018ರ ಅವಧಿಯಲ್ಲಿ ಗಳಿಸಿದ ಆದಾಯ, ಹಾಗೂ ವೆಚ್ಚದ ಮಾಹಿತಿ ಆಧರಿಸಿ 74.93 ಕೋಟಿ ರೂ. ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಈ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ ಹಂತದಲ್ಲಿ ಡಿಕೆ ಶಿವಕುಮಾರ್ ಸರ್ಕಾರದ ಸಮ್ಮತಿ ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ಪೀಠ ರಿಟ್ ಅರ್ಜಿ ವಜಾಗೊಳಿಸಿತ್ತು. ನಂತರ ಡಿಕೆ ಶಿವಕುಮಾರ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠ ಸಿಬಿಐ ತನಿಖೆಗೆ ಸರ್ಕಾರದ ಸಮ್ಮತಿ ನೀಡಿದ ಕ್ರಮಕ್ಕೆ ತಡೆ ನೀಡಿದೆ. ಇದೀಗ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ನ.29 ಕ್ಕೆ ನಿಗದಿ ಮಾಡಿದೆ. ಈ ಮಧ್ಯೆ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಸರ್ಕಾರ ನೀಡಿದ ಸಮ್ಮತಿಯನ್ನು ಹಿಂಪಡೆಯಲು ಸಚಿವ ಸಂಪುಟ ಇಂದು ತೀರ್ಮಾನ ಕೈಗೊಂಡಿದೆ. ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಕಾನೂನು ಅಭಿಪ್ರಾಯ ಆಧರಿಸಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಆದರೆ ಸರ್ಕಾರದ ಈ ಕ್ರಮ ಇದೀಗ ವಿವಾದಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ಡಿಕೆಶಿ, ಸರ್ಕಾರದ ಮುಂದಿದೆ ಸವಾಲು
ಸಿಬಿಐ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿಯನ್ನು ಡಿಕೆಶಿ ಈಗಾಗಲೇ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಹೈಕೋರ್ಟ್ ಸರ್ಕಾರದ ಸಮ್ಮತಿಯ ಕಾನೂನುಬದ್ಧತೆಯನ್ನು ಪರಿಶೀಲಿಸುತ್ತಿದೆ. ಹೀಗಾಗಿ ಹೈಕೋರ್ಟ್ ಗಮನಕ್ಕೆ ತರದೇ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡರೆ ಮುಜುಗರ ಎದುರಿಸಬೇಕಾಗಬಹುದು. ಏಕೆಂದರೆ ಈ ವಿಷಯವೀಗ ಹೈಕೋರ್ಟ್ ಪರಿಶೀಲನೆಯಲ್ಲಿದೆ, ಸಬ್ ಜುಡಿಸ್ ಆಗಿದೆ. ಹೈಕೋರ್ಟ್ ಪರಿಶೀಲಿಸುತ್ತಿರುವ ವಿಚಾರದ ಬಗ್ಗೆ ಹೈಕೋರ್ಟ್ ಅನುಮತಿಯಿಲ್ಲದೇ ನಿರ್ಧಾರ ಕೈಗೊಳ್ಳುವುದು ಪ್ರಶ್ನಾರ್ಹವಾಗಲಿದೆ. ಸರ್ಕಾರ ಸಿಬಿಐ ತನಿಖೆಗೆ ನೀಡಿದ ಅನುಮತಿ ಹಿಂಪಡೆದರೆ ಸರ್ಕಾರದ ಕ್ರಮ ದುರುದ್ದೇಶಪೂರಿತವೆಂದು ಸಿಬಿಐ ಹೈಕೋರ್ಟ್ನಲ್ಲಿ ಪ್ರಶ್ನಿಸಬಹುದು.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ
ಸಿಬಿಐ ಈಗಾಗಲೇ ಬಹುತೇಕ ತನಿಖೆ ಪೂರ್ಣಗೊಳಿಸಿದೆ. ಈ ಹಂತದಲ್ಲಿ ಸರ್ಕಾರದ ಕ್ರಮದಿಂದ ಭ್ರಷ್ಟಾಚಾರ ತಡೆ ಕಾಯ್ದೆಯ ಉದ್ದೇಶಕ್ಕೆ ಧಕ್ಕೆಯಾಗಲಿದೆ ಎಂದು ಸಿಬಿಐ ವಾದಿಸಬಹುದು. ಹೈಕೋರ್ಟ್ ಸರ್ಕಾರದ ಕ್ರಮಕ್ಕೆ ತಡೆ ನೀಡಿದರೆ ಸರ್ಕಾರ ಹಾಗೂ ಡಿಕೆ ಶಿವಕುಮಾರ್ ಮುಖಭಂಗ ಎದುರಿಸಬೇಕಾಗಬಹುದು. ಹೀಗಾಗಿ ಸರ್ಕಾರ ಕೈಗೊಳ್ಳುವ ಕ್ರಮ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ನಾಂದಿಯಾಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ